ಶನಿವಾರ, ಮೇ 28, 2022
21 °C
ರಾಜಸ್ಥಾನ, ಮಹಾರಾಷ್ಟ್ರದಲ್ಲಿಯೂ ಸೂರ್ಯನ ಪ್ರತಾಪ‍

ಸೂರ್ಯನ ಪ್ರತಾಪ‍: ಬಿಸಿಗಾಳಿಗೆ ಬಸವಳಿದ ದೆಹಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದ ಹಲವೆಡೆ ಬಿಸಿಗಾಳಿಯ ಹೊಡೆತ ತೀವ್ರಗೊಂಡಿದೆ. ರಾಜಧಾನಿ ದೆಹಲಿಯಲ್ಲಿ ಶುಕ್ರವಾರದ ತಾಪಮಾನವು 46 ಡಿಗ್ರಿ ಸೆಲ್ಸಿಯಸ್‌ ದಾಟಿ ಹೋಗಿದೆ. ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ ನಲ್ಲಿ ತಾಪಮಾನವು 46.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.  

ಹಲವೆಡೆ ರಾತ್ರಿಯ ತಾಪಮಾನ ಕೂಡ 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಇತ್ತು. ಇದೇ ಪರಿಸ್ಥಿತಿ ಇನ್ನೂ 3–4 ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮಹಾರಾಷ್ಟ್ರದ ನಾಸಿಕ್‌ ನಗರದ 68 ವರ್ಷದ ವ್ಯಕ್ತಿಯೊಬ್ಬರು ಬಿಸಿಲಿನ ಆಘಾತದಿಂದಾಗಿ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ 46.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ತಾಪಮಾನ ಇದ್ದ ಸ್ಥಳ ಇದು. 

ಅತಿ ಹೆಚ್ಚು ತಾಪಮಾನ ಇದ್ದ ಮಹಾರಾಷ್ಟ್ರದ ಜಿಲ್ಲೆಗಳೆಂದರೆ, ಅಕೋಲ (45.8 ಡಿಗ್ರಿ ಸೆಲ್ಸಿಯಸ್‌), ವಾರ್ಧಾ (45.5 ಡಿಗ್ರಿ ಸೆಲ್ಸಿಯಸ್‌), ನಾಗಪುರ (45.2 ಡಿಗ್ರಿ ಸೆಲ್ಸಿಯಸ್‌), ಯಾವತ್ಮಲ್‌ (45.2 ಡಿಗ್ರಿ ಸೆಲ್ಸಿಯಸ್‌) ಮತ್ತು ಅಮರಾವತಿ (45 ಡಿಗ್ರಿ ಸೆಲ್ಸಿಯಸ್‌). 

1941ರ ಏಪ್ರಿಲ್‌ 29ರಂದು ದೆಹಲಿಯಲ್ಲಿ 45.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಈಗ ದೆಹಲಿಯ ತಾಪಮಾನ ಅದನ್ನೂ ಮೀರಿ ಹೋಗಿದೆ. ಹವಾಮಾನ ಇಲಾಖೆಯು ‘ಆರೆಂಜ್‌ ಅಲರ್ಟ್‌’ ಘೋಷಿಸಿದೆ. ದೆಹಲಿಯ ಹಲವು ಭಾಗಗಳಲ್ಲಿ ಶನಿ ವಾರ ಬಿಸಿಗಾಳಿ ಇನ್ನಷ್ಟು ತೀವ್ರಗೊಳ್ಳಬಹುದು ಎಂಬ ಮುನ್ನೆಚ್ಚರಿಕೆ ನೀಡಿದೆ. 

ದೆಹಲಿಯ ರಿಡ್ಜ್‌ನಲ್ಲಿ 45.7, ಮುಂಗೇಶ್‌ ಪುರದಲ್ಲಿ 45.9, ನಜಾಫ್‌ ಗಡದಲ್ಲಿ 45.9 ಮತ್ತು ಪೀತಮ್‌ ಪುರದಲ್ಲಿ 45.9 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಈ ಎಲ್ಲ ಪ್ರದೇಶದಲ್ಲಿಯೂ ಕಳೆದ ವರ್ಷಗಳಿಗೆ ಹೋಲಿಸಿದರೆ 5ರಿಂದ 7 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆ ಆಗಿದೆ.  ದೆಹಲಿಯಲ್ಲಿ ಭಾನುವಾರ ಭಾಗಶಃ ಮೋಡ ಇರಲಿದ್ದು, ಲಘು ಮಳೆಯ ಸಾಧ್ಯತೆ ಇದೆ. ತಾಸಿಗೆ 50 ಕಿ.ಮೀ. ವೇಗದಲ್ಲಿ ದೂಳುಸಹಿತ ಗಾಳಿ ಬೀಸಬಹುದು. ಸೋಮವಾರದಿಂದ ಬಿಸಿಗಾಳಿಯ ತೀವ್ರತೆ ಕಡಿಮೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ಪರೀಕ್ಷೆ ವೇಳಾಪಟ್ಟಿ ಬದಲು: ಬಿಸಿ ಗಾಳಿಯ ಕಾರಣ ಒಡಿಶಾದಲ್ಲಿ 10ನೇ ತರಗತಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಬದಲಿಸಲಾಗಿದೆ. ಬೆಳಗ್ಗೆ 8ರಿಂದ 9.30ರ ಒಳಗೆ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಒಡಿಶಾ ಪ್ರೌಢಶಿಕ್ಷಣ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜಸ್ಥಾನ: ಮೇ 1ಕ್ಕೆ ಅತ್ಯಧಿಕ ತಾಪಮಾನ

ಜೈಪುರ (ಪಿಟಿಐ): ರಾಜಸ್ಥಾನದಲ್ಲಿ ಬಿಸಿ ಗಾಳಿ ತೀವ್ರತೆ ಮುಂದುವರಿದಿದೆ. ಬೂಂದಿ ಪಟ್ಟಣದಲ್ಲಿ ರಾತ್ರಿ 31.2 ಡಿಗ್ರಿ ಸೆಲ್ಸಿಯಸ್‌ ಅತ್ಯಧಿಕ ತಾಪಮಾನ ದಾಖಲಾಗಿದೆ. ಜೋಧಪುರ, ಬಿಕನೇರ್‌ ಜಿಲ್ಲೆಗಳಲ್ಲಿ ಮೇ 1ರಂದು 45ರಿಂದ 46 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಹೇಳಿದೆ.

ಬಿಸಿ ಗಾಳಿಯ ಕಾರಣ ರಾಜಸ್ಥಾನದ ಹಲವಾರು ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗಲಿದೆ. ಅದು ಮುಂದಿನ ಮೂರು ದಿನಗಳ ಕಾಲ ಮುಂದುವರಿಯಲಿದೆ. ಮೇ 2ರಿಂದ ಗುಡುಗು ಸಮೇತ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಪಾಕಿಸ್ತಾನದಲ್ಲಿ 47 ಡಿಗ್ರಿ ಸೆಲ್ಸಿಯಸ್‌

ಪೆಶಾವರ (ರಾಯಿಟರ್ಸ್): ಪಾಕಿಸ್ತಾನದ ಕೆಲವು ಭಾಗಗಳಲ್ಲಿ ದಿನದ ಉಷ್ಣತೆಯು 47 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಶುಕ್ರವಾರದ ತಾಪಮಾನವು ಸರಾಸರಿ ತಾಪಮಾನಕ್ಕಿಂತ 6ರಿಂದ 8 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿದೆ. 

ಹಿಮಾಲಯ, ಹಿಂದೂಕುಷ್‌ ಮತ್ತು ಕಾರಕೋರಂ ಪರ್ವತ ಪ್ರದೇಶದಲ್ಲಿರುವ ಹಿಮಗಲ್ಲುಗಳು ತಾಪಮಾನ ಏರಿಕೆಯಿಂದಾಗಿ ದಿಢೀರ್‌ ಕರಗುವ ಸಾಧ್ಯತೆ ಇದೆ. ಹೀಗೆ ಕರಗಿದರೆ, ಉತ್ತರ ಪಾಕಿಸ್ತಾನದ ಹಲವೆಡೆ ಪ್ರವಾಹ ಸ್ಥಿತಿ ತಲೆದೋರಬಹುದು. ಹೀಗೆ ಪ್ರವಾಹ ಉಂಟಾಗಬಹುದಾದ 30ಕ್ಕೂ ಹೆಚ್ಚು ಸರೋವರಗಳನ್ನು ಗುರುತಿಸಲಾಗಿದೆ. 70 ಲಕ್ಷಕ್ಕೂ ಹೆಚ್ಚು ಜನರು ಅಪಾಯಕ್ಕೆ ಒಳಗಾಗಬಹುದು ಎಂದು ಪಾಕಿಸ್ತಾನದ ಹವಾಮಾನ ಬದಲಾವಣೆ ತಡೆ ಸಚಿವಾಲಯವು ಹೇಳಿದೆ. ದಿಢೀರ್‌ ಪ್ರವಾಹದಿಂದ ಆಗಬಹುದಾದ ಅಪಾಯ ತಡೆಗೆ ವಿಪತ್ತು ನಿರ್ವಹಣಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು