ಮಂಗಳವಾರ, ಜೂನ್ 22, 2021
21 °C

ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ಪ್ರಾಣ ಬಿಡುತ್ತಿರುವ ಕೋವಿಡ್ ರೋಗಿಗಳು!

ಶೆಮಿನ್ ಜಾಯ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾದ ಎರಡನೇ ಅಲೆಯ ಅಬ್ಬರದಿಂದಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆಯಿಂದಾಗಿ ಕೆಲವೆಡೆ ಕೋವಿಡ್ ರೋಗಿಗಳು ಬೀದಿಯಲ್ಲೇ ಜೀವಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ದಿನಸಿ ಅಂಗಡಿ ಮಾಲೀಕರಾದ ಎಂ.ಪಿ. ಪ್ರಕಾಶ್ ಎಂಬುವರು ಕೋವಿಡ್‌ನಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ತಮ್ಮ 75 ವರ್ಷದ ತಂದೆ ಬಾಲನ್ ಅವರನ್ನು ಆಸ್ಪತ್ರೆಗೆ ದಾಖಲಿಸಲು 5 ಗಂಟೆಗಳ ಕಾಲ ದೆಹಲಿಯ ವಿವಿಧ ಆಸ್ಪತ್ರೆಗಳನ್ನು ಸುತ್ತಿದ್ದಾರೆ.

ಆದರೆ, ಐದು ಗಂಟೆಗಳಲ್ಲಿ ನಾಲ್ಕು ಆಸ್ಪತ್ರೆಗಳಿಗೆ ಭೇಟಿ ನೀಡಿದರೂ ಹಾಸಿಗೆ ಸಿಗದೆ ಪ್ರಕಾಶ್ ತನ್ನ ತಂದೆಯನ್ನು ಕಳೆದುಕೊಂಡಿದ್ದಾರೆ. 15 ವರ್ಷಗಳ ಹಿಂದೆ ಕೇರಳ ಬಿಟ್ಟು ರಾಷ್ಟ್ರ ರಾಜಧಾನಿಯಲ್ಲಿ ತನ್ನ ಜೊತೆ ಇರಲು ಬಂದಿದ್ದ ತಂದೆಯನ್ನು ಉಳಿಸಿಕೊಳ್ಳಲು ಪ್ರಕಾಶ್‌ ಅವರಿಗೆ ಸಾಧ್ಯವಾಗಿಲ್ಲ.

ಬಾಲನ್, ಮಗ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಈಶಾನ್ಯ ದೆಹಲಿಯ ದಿಲ್ಶಾದ್ ಗಾರ್ಡನ್‌ನಲ್ಲಿ ವಾಸವಿದ್ದರು. ಸೋಮವಾರ ರಾತ್ರಿ ಅವರ ಆರೋಗ್ಯ ಹದಗೆಟ್ಟಿದೆ. ಮಂಗಳವಾರ ಮುಂಜಾನೆ 4ರ ಹೊತ್ತಿಗೆ ಬಾಲನ್ ದಯಾನಂದ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಆಂಬ್ಯುಲೆನ್ಸ್‌ಗೆ ಆಗಮಿಸಿದ ವೈದ್ಯರೊಬ್ಬರು ತಪಾಸಣೆ ನಡೆಸಿ ಮೃತಪಟ್ಟಿರುವುದನ್ನು ಖಚಿತಪಡಿಸಿದರು.

ಇದನ್ನೂ ಓದಿ.. ಶವಸಂಸ್ಕಾರಕ್ಕೆ ಪರದಾಡುವ ಕುಟುಂಬಗಳಿಗೆ ‘ಎಕೊ ಫ್ರೆಂಡ್ಲಿ‘ ಆಸರೆ !

ಇದಕ್ಕೂ ಮುನ್ನ, ಸುಮಾರು 18 ಗಂಟೆಗಳ ಕಾಲ ಬಾಲನ್ ಕುಟುಂಬವು ಆಮ್ಲಜನಕ ಸಿಲಿಂಡರ್ ತುಂಬಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ, ಅದೃಷ್ಟವು ಅವರ ಕಡೆ ಇರಲಿಲ್ಲ.

ತಂದೆಯನ್ನು ಆಸ್ಪತ್ರೆಗೆ ದಾಖಲಿಸಲು ಪ್ರಕಾಶ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಆಂಬುಲೆನ್ಸ್ ಸೇವೆಗೆ ಸಂಬಂಧಿಸಿದ ತಮಗೆ ಸಿಕ್ಕ ಎಲ್ಲ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಯಾರೊಬ್ಬರೂ ನೆರವಿಗೆ ಬರಲಿಲ್ಲ. ಅಂತಿಮವಾಗಿ ಸ್ಥಳೀಯ ರಾಜಕಾರಣಿ ಆಂಬುಲೆನ್ಸ್ ವ್ಯವಸ್ಥೆ ಮಾಡಿದರು ಎಂದು ಅವರು ಹೇಳಿದ್ದಾರೆ. ಆದರೆ, ಅಷ್ಟೊತ್ತಿಗೆ ಬಾಲನ್ ಪರಿಸ್ಥಿತಿ ತೀವ್ರ ಹದಗೆಟ್ಟು, ಆಸ್ಪತ್ರೆಗೆ ಅಡ್ಮಿಶನ್ ಸಿಗದೆ ಆಂಬುಲೆನ್ಸ್‌ನಲ್ಲೇ ಅಸುನೀಗಿದ್ದಾರೆ.

‘ಜಿಟಿಬಿ ಆಸ್ಪತ್ರೆಯ ಗೇಟ್‌ಗಳು ಮುಚ್ಚಲ್ಪಟ್ಟಿದ್ದವು. ನಮಗೆ ಒಳಗೆ ಪ್ರವೇಶಿಸಲು ಸಹ ಸಾಧ್ಯವಾಗಲಿಲ್ಲ. ನಂತರ ನಾವು ದಯಾನಂದ ಆಸ್ಪತ್ರೆಗೆ ಹೋದೆವು, ಅಲ್ಲಿ ವೈದ್ಯರು ಆಂಬುಲೆನ್ಸ್‌ಗೆ ಬಂದು ನನ್ನ ತಂದೆಯನ್ನು ಪರೀಕ್ಷಿಸಿದರು. ಅಷ್ಟೊತ್ತಿಗೆ ಆಮ್ಲಜನಕದ ಮಟ್ಟವು ಅಪಾಯಕಾರಿ ಮಟ್ಟಕ್ಕೆ ಕುಸಿದಿತ್ತು. ಈಗ ನಾನು ಅಸಹಾಯಕ ಎಂದು ವೈದ್ಯರು ನನಗೆ ಹೇಳಿದರು’ಎಂದು ಪ್ರಕಾಶ್ ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು