ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನಲ್ಲಿ ಬಿಜೆಪಿ ಹಣಿಯಲು ಡಿಎಂಕೆಗೆ ಸಿಕ್ಕಿತು ಹೊಸ ಅಸ್ತ್ರ!

Last Updated 22 ಫೆಬ್ರುವರಿ 2023, 16:57 IST
ಅಕ್ಷರ ಗಾತ್ರ

ಚೆನ್ನೈ: ಕಳೆದ ಭಾನುವಾರ ಫೆಬ್ರುವರಿ 19 ರಂದು ದೆಹಲಿ ಜವಾಹರ್‌ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ತಮಿಳು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಇದೀಗ ತಮಿಳುನಾಡಿನಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಿದೆ.

ತಮಿಳುನಾಡಿನಲ್ಲಿ ಚಿಗಿತುಕೊಳ್ಳಲು ನೋಡುತ್ತಿರುವ ಬಿಜೆಪಿ ತಮಿಳರ ಮನಗೆಲ್ಲಲು ಪ್ರಯತ್ನಿಸುತ್ತಿದೆ. ಆದರೆ, ತಮಿಳರ ಮೇಲೆ ಹಲ್ಲೆ ನಡೆದ ಘಟನೆಯಿಂದ ಆಡಳಿತಾರೂಢ ಡಿಎಂಕೆಗೆ ಬಿಜೆಪಿ ಹಣೆಯಲು ಹೊಸ ಅಸ್ತ್ರ್ರ ಸಿಕ್ಕಂತಾಗಿದೆ.

ಏನಾಗಿತ್ತು?

ಕಳೆದ ಭಾನುವಾರ ಫೆ. 19 ರಂದು ಶಿವಾಜಿ ಜಯಂತಿ ‍ಪ್ರಯುಕ್ತ ಜೆಎನ್‌ಯು ಕ್ಯಾಂಪಸ್‌ನಲ್ಲಿ ಜೆಎನ್‌ಯು ಎಬಿವಿ‍ಪಿ ಘಟಕ ಬಹಿರಂಗ ಸಮಾವೇಶ ಆಯೋಜಿಸಿತ್ತು. ಇದೇ ವೇಳೆ ಜೆಎನ್‌ಯುದ ತಮಿಳು ವಿದ್ಯಾರ್ಥಿಗಳ ಗುಂಪು ಕೂಡ ಬಾಂಬೆ ಐಐಟಿಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆಯ ಬಗ್ಗೆ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ಕೂಡ ನಡೆಸುತ್ತಿತ್ತು.

ಈ ವೇಳೆ ಕೆಲ ತಮಿಳು ವಿದ್ಯಾರ್ಥಿಗಳು ಶಿವಾಜಿ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಉದ್ರಿಕ್ರರಾಗಿದ್ದರು. ಕೆಲ ಹೊತ್ತಿನ ನಂತರ ವಿವಿಯಲ್ಲಿರುವ ಪೆರಿಯಾರ್, ಕಾರ್ಲ್‌ಮಾರ್ಕ್ಸ್‌ ಅವರ ಭಾವಚಿತ್ರಗಳನ್ನು ಧ್ವಂಸಗೊಳಿಸಿ ತಮಿಳು ವಿದ್ಯಾರ್ಥಿಗಳನ್ನು ಥಳಿಸಿದ್ದರು. ಘಟನೆಯಲ್ಲಿ ತಮಿಳುನಾಡಿನ ಸ್ನಾತಕೋತ್ತರ ವಿದ್ಯಾರ್ಥಿ ನಾಸ್ಸರ್ ಮಹಮ್ಮದ್ ಮೋಯಿದ್ದೀನ್ ಸೇರಿದಂತೆ ಇನ್ನೂ ಹಲವರ ಮೇಲೆ ಕೆಲ ಎಬಿವಿಪಿ ಕಾರ್ಯಕರ್ತರು ಗಂಭೀರವಾಗಿ ದಾಳಿ ಮಾಡಿದ್ದಾರೆಂದು ಆರೋಪಿಸಲಾಗಿತ್ತು.

ಮಹಮ್ಮದ್ ಮೋಯಿದ್ದೀನ್ ಅವರ ತಲೆ ಹಾಗೂ ಕುತ್ತಿಗೆಗೆ ಗಂಭೀರ ಗಾಯಗಳಾಗಿ ರಕ್ತ ಸೋರುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಚಿತ್ರಗಳನ್ನು ಹಂಚಿಕೊಂಡು ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಆಯಿಶಾ ಘೋಶ್ ಅವರು ಕ್ರಮಕ್ಕೆ ಆಗ್ರಹಿಸಿದ್ದರು.

ಡಿಎಂಕೆಗೆ ಕೈಗೆ ಹೊಸ ಅಸ್ತ್ರ

ಇದೀಗ ಈ ಬೆಳವಣಿಗೆಯಿಂದ ಕುಪಿತಗೊಂಡಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರ್ಕಾರ ಜೆಎನ್‌ಯುದಲ್ಲಿ ತಮಿಳು ವಿದ್ಯಾರ್ಥಿಗಳ ಮೇಲೆ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ, ಇದನ್ನೇ ಎಬಿವಿಪಿಗೆ ಬೆಂಬಲಿಸುವ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಮೇಲೆ ಅಸ್ತ್ರವನ್ನಾಗಿ ಪ್ರಯೋಗಿಸಲು ಮುಂದಾಗಿದೆ.

ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದ ಸಿಎಂ ಎಂಕೆ ಸ್ಟಾಲಿನ್, ವಿವಿಗಳು ಕೇವಲ ಕಲಿಯಲು ಇರುವುದಿಲ್ಲ. ಅವು ಮುಕ್ತ ಚರ್ಚೆ, ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವ ಜಾಗ. ಪೆರಿಯಾರ್ ಭಾವಚಿತ್ರ ಧ್ವಂಸಗೊಳಿಸಿ ತಮಿಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವುದು ತೀವ್ರ ಖಂಡನೀಯ. ಕೂಡಲೇ ವಿವಿ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಘಟನೆ ಬೆನ್ನಲ್ಲೇ ತಮಿಳುನಾಡಿನ ಕೆಲ ಸಂಸದರು ಜೆಎನ್‌ಯುಗೆ ದೌಡಾಯಿಸಿ ಪೆರಿಯಾರ್ ಅವರ ಹೊಸ ಭಾವಚಿತ್ರಗಳನ್ನು ಪುನರ್‌ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಿದ್ದಾರೆ.

ಉದಯನಿಧಿ ಸ್ಟಾಲಿನ್ ಗರಂ

ಸಿಎಂ ಎಂಕೆ ಸ್ಟ್ಯಾಲಿನ್ ಪುತ್ರರೂ ಆಗಿರುವ ಕ್ರೀಡಾ ಸಚಿವ ಉದಯನಿಧಿ ಸ್ಟ್ಯಾಲಿನ್ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಮಿಳರ ಮೇಲೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ ವಿಷಯವನ್ನು ಒಂದು ಜಾಗೃತಿ ಆಂಧೋನವಾಗಿ ರಾಜ್ಯವ್ಯಾಪಿ ಮುನ್ನಡೆಸಲಾಗುವುದು ಎಂದು ಹೇಳಿದ್ದಾರೆ.

ಡಿಎಂಕೆ ಯುವ ವಿಭಾಗದ ಕಾರ್ಯದರ್ಶಿ ಇಜಾಳರಸನ್ ಅವರು, ಉದಯನಿಧಿ ಸ್ಟಾಲಿನ್ ಅವರ ಮುಂಚೂಣಿಯಲ್ಲಿ ಜೆಎನ್‌ಯುದಲ್ಲಿ ಶೀಘ್ರದಲ್ಲೇ ರಾಷ್ಟ್ರಮಟ್ಟದ ಪೆರಿಯಾರ್ ಸೆಮಿನಾರ್ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಜೆಎನ್‌ಯುದಲ್ಲಿ ನಡೆದಿರುವುದು ದುರಾದೃಷ್ಠಕರ. ಆದರೆ, ಡಿಎಂಕೆ ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು ನೋಡುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಈ ಬೆಳವಣಿಗೆಗಳಿಂದ ತಮಿಳುನಾಡಿನಲ್ಲಿ ಬಿಜೆಪಿ ಬೆಳವಣಿಗೆಗೆ ಅಡ್ಡಗಾಲು ಹಾಕಲು ಈಗ ಡಿಎಂಕೆಗೆ ಒಂದು ಪ್ರಬಲವಾದ ಅವಕಾಶ ಸಿಕ್ಕಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT