ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಜಡ್ಜ್‌ಗಳ ಅಗತ್ಯವಿದೆ: ಸುಪ್ರೀಂ ಕೋರ್ಟ್‌ ಅಭಿಪ್ರಾಯ

Last Updated 29 ನವೆಂಬರ್ 2022, 20:10 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಸ್ತುತ ಉತ್ತಮ ನ್ಯಾಯಮೂರ್ತಿಗಳ ಅಗತ್ಯವಿದೆ. ನ್ಯಾಯಮೂರ್ತಿಗಳು ಹೆಚ್ಚಿದ್ದರೆ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಲಿವೆ ಎಂದರ್ಥವಲ್ಲ.ಪ್ರಕರಣಗಳು ಬಾಕಿ ಉಳಿದಿರುವುದಕ್ಕೆ ನ್ಯಾಯಮೂರ್ತಿಗಳ ಸಂಖ್ಯೆಯನ್ನು ದುಪ್ಟಟ್ಟುಗೊಳಿಸುವುದೇ ಪರಿಹಾರವಾಗುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡುವುದೂ ಈಗ ಕಷ್ಟವಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ಖಾಲಿ ಇರುವ ಸ್ಥಾನಗಳಿಗೆ ನ್ಯಾಯಮೂರ್ತಿಗಳ ಭರ್ತಿಗೆ ಪ್ರಯತ್ನಿಸಿ. ಅದು, ಎಷ್ಟು ಕಷ್ಟದ ಕೆಲಸ ಎಂದು ನಿಮಗೇ ಅರಿವಾಗುತ್ತದೆ. ಅಲಹಾಬಾದ್‌ ಹೈಕೋರ್ಟ್‌ನಲ್ಲಿ 160 ಸ್ಥಾನಗಳನ್ನು ಭರ್ತಿ ಮಾಡುವುದೇ ಕಷ್ಟವಾಗಿದೆ. 320 ಮಂದಿ ನೇಮಕ ಮಾಡಬೇಕು ಎಂದು ಅರ್ಜಿದಾರರು ಕೋರುತ್ತಿದ್ದಾರೆ’ ಎಂದು ಪೀಠ ಹೇಳಿತು.

ನ್ಯಾಯಮೂರ್ತಿಗಳ ಸಂಖ್ಯೆ ದ್ವಿಗುಣಗೊಳಿಸಲು ಕೋರಿ ಅರ್ಜಿ ಸಲ್ಲಿಸಿದ್ದ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು, ‘ವಿವಿಧ ಕೋರ್ಟ್‌ಗಳಲ್ಲಿ 5 ಕೋಟಿ ಪ್ರಕರಣಗಳು ಬಾಕಿ ಇವೆ. ಸುಮಾರು 20 ಕೋಟಿ ಜನರು ಬಾಧಿತರಾಗಿದ್ದಾರೆ. ಇದು, ಅಮೆರಿಕದ ಜನಸಂಖ್ಯೆಗೆ ಸಮಾನವಾದುದು’ ಎಂದು ಪ್ರತಿಪಾದಿಸಿದ್ದರು.

‘ಈಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು, ‘ಆರು ತಿಂಗಳಲ್ಲಿ ಎಲ್ಲ ಪ್ರಕರಣಗಳನ್ನು ವಿಲೇವಾರಿ ಮಾಡಿ ಎಂದು ಸಂಸತ್ತು ಕಾಯ್ದೆಯನ್ನು ರೂಪಿಸಿದಂತಿದೆ’ ಎಂದು ಅಭಿಪ್ರಾಯಪಟ್ಟಿತು.

’ನೀವು ಬಾಂಬೆ ಹೈಕೋರ್ಟ್‌ ಗಮನಿಸಿದ್ದೀರಾ? ಮೂಲಸೌಲಭ್ಯ ಕೊರತೆಯಿಂದ ಅಲ್ಲಿ ಒಬ್ಬ ನ್ಯಾಯಮೂರ್ತಿ ಹೆಚ್ಚುವರಿ ಸೇರ್ಪಡೆ ಆಗಿಲ್ಲ’. ಎಂದು ಪೀಠ ಅರ್ಜಿದಾರರಿಗೆ ತಿಳಿಸಿತು.

ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರಾಕರಿಸಿದ ಪೀಠವು,ಇಂಥ ಪಿಐಎಲ್‌ ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಾಲಯದ ಸಮಯ ಪೋಲು ಮಾಡಿದ್ದಕ್ಕಾಗಿ ದಂಡ ವಿಧಿಸಬಹುದಾಗಿದೆ ಎಂದು ಹೇಳಿತು. ‘ಪ್ರತಿ ಸಮಸ್ಯೆಗೂ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಬೇಕೆಂದೇನೂ ಇಲ್ಲ’ ಎಂದೂ ಅಭಿಪ್ರಾಯಪಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT