ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಸಮೂಹ ಸಂಸ್ಥೆಗಳ ವಿರುದ್ಧದ ತನಿಖೆಗೆ ಸಮಿತಿ ನೇಮಿಸಿಲ್ಲ: ಕೇಂದ್ರ ಸರ್ಕಾರ

ವಿರೋಧ ಪಕ್ಷಗಳ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರ
Last Updated 13 ಮಾರ್ಚ್ 2023, 16:10 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆ ಮಾಡಿರುವ ಆರೋಪಗಳಿಗೆ ಸಂಬಂಧಿಸಿ ತನಿಖೆ ನಡೆಸಲು ಕೇಂದ್ರ ಸರ್ಕಾರವು ಯಾವುದೇ ಸಮಿತಿ ರಚಿಸಿಲ್ಲ. ಆದರೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಅದಾನಿ ಸಂಸ್ಥೆಯ ಮೇಲಿನ ಮಾರುಕಟ್ಟೆ ಅಕ್ರಮ ಆರೋಪದ ಕುರಿತು ತನಿಖೆ ನಡೆಸುತ್ತಿದೆ ಎಂದು ಲೋಕಸಭೆಗೆ ಸೋಮವಾರ ತಿಳಿಸಲಾಯಿತು.

ಅದಾನಿ ಪ್ರಕರಣಕ್ಕೆ ಸಂಬಂಧಿಸಿ ವಿರೋಧ ಪಕ್ಷಗಳ ಸಂಸದರು ಲೋಕಸಭೆ ಅಧಿವೇಶನದಲ್ಲಿ ಸರ್ಕಾರಕ್ಕೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ಕೇಂದ್ರ ಅರ್ಥ ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದರು.

ಹಿಂಡನ್‌ಬರ್ಗ್‌ ರಿಸರ್ಚ್‌ ವರದಿ ಬಳಿಕ 2023ರ ಜನವರಿ 24ರಿಂದ ಮಾರ್ಚ್‌ 1ರ ವರೆಗೆ ಅದಾನಿ ಸಮೂಹ ಸಂಸ್ಥೆಗಳ ಷೇರು ಮೌಲ್ಯವು ಶೇ 60ರಷ್ಟು ಕುಸಿತ ಕಂಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಚೌಧರಿ ಉತ್ತರಿಸಿದರು. ಹೂಡಿಕೆದಾರರ ಹಿತಾಸಕ್ತಿ ಕಾಪಾಡುವ ಹೊಣೆಗಾರಿಕೆ ಸೇರಿ, ಸಾಲಪತ್ರ ಮಾರುಕಟ್ಟೆ ವಲಯದ ಸ್ಥಿರ ಕಾರ್ಯಾಚರಣೆ ಮತ್ತು ಅಭಿವೃದ್ಧಿಯ ಹೊಣೆ ಷೇರು ಮಾರುಕಟ್ಟೆಗಳ ಶಾಸನಬದ್ಧ ನಿಯಂತ್ರಕವಾಗಿರುವ ‘ಸೆಬಿ’ಯದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಕಠಿಣ ನಿಯಂತ್ರಣ ನೀತಿಗಳನ್ನು ಜಾರಿಗೊಳಿಸುವಂತೆ ಸೆಬಿಗೆ ಆದೇಶಿಸಲಾಗಿದೆ. ಆದೇಶದ ಪ್ರಕಾರ, ಯಾವುದೇ ಸಂಸ್ಥೆಯ ವಿರುದ್ಧ ಆರೋಪ ಕೇಳಿಬಂದರೂ ಸೆಬಿ ತನಿಖೆ ನಡೆಸುತ್ತದೆ. ಅದಾನಿ ಸಮೂಹ ಸಂಸ್ಥೆಗಳ ವಿರುದ್ಧವೂ ಈಗಾಗಲೇ ಸೆಬಿ ತನಿಖೆ ಆರಂಭಿಸಿದೆ’ ಎಂದರು. ಆದರೆ ಈ ಕರಿತು ವಿವರ ನೀಡಲಿಲ್ಲ.

ಹಿಂಡನ್‌ಬರ್ಗ್‌ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಕುರಿತು ಸೆಬಿ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ಸೆಬಿಗೆ ಮಾರ್ಚ್‌ 2ರಂದು ಎರಡು ತಿಂಗಳ ಕಾಲಾವಕಾಶ ನೀಡಿದೆ ಎಂದರು.

ವಿದ್ಯುತ್‌ ತಯಾರಿಕಾ ಮತ್ತು ಪ್ರಸರಣ ಉಪಕರಣಗಳನ್ನು ಅದಾನಿ ಸಂಸ್ಥೆ ಆಮದು ಮಾಡಿಕೊಂಡಿರುವ ಕುರಿತು ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ) ನಡೆಸುತ್ತಿರುವ ತನಿಖೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖೆ ಸಮಾಪ್ತಿಯಾಗಿದೆ. ಸಂಬಂಧಪಟ್ಟ ನ್ಯಾಯಾಂಗ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಗಿದೆ ಎಂದರು. ಈ ಕುರಿತೂ ಅವರು ಹೆಚ್ಚಿನ ಮಾಹಿತಿ ಹೊರಹಾಕಲಿಲ್ಲ.

ಕಲ್ಲಿದ್ದಲು ಆಮದು ಅಕ್ರಮ ಆರೋಪ: ಇಂಡೊನೇಷ್ಯಾದಿಂದ ಕಲ್ಲಿದ್ದಲು ಆಮದು ವ್ಯವಹಾರದಲ್ಲಿ ಅದಾನಿ ಸಮೂಹ ಸಂಸ್ಥೆ ಎಸಗಿದೆ ಎನ್ನಲಾದ ಅಕ್ರಮಗಳ ಕುರಿತು ಪ್ರಶ್ನೆ ಕೇಳಲಾಯಿತು. ‘ರಫ್ತುದಾರ ದೇಶಗಳಿಂದ ಲೆಟರ್ಸ್‌ ರೊಗೇಟರಿ (ನ್ಯಾಯಾಂಗ ಸಹಕಾರ ಕೋರಿ ವಿದೇಶಿ ನ್ಯಾಯಾಲಯಕ್ಕೆ ಒಂದು ದೇಶದ ನ್ಯಾಯಾಲಯ ಸಲ್ಲಿಸುವ ಪತ್ರ) ಮೂಲಕ ಕೋರಿದ್ದ ಮಾಹಿತಿಯು ಸದ್ಯ ವಿವಾದದಲ್ಲಿದೆ. ಹೀಗಾಗಿ ಈ ಆರೋಪದ ಕುರಿತು ಡಿಆರ್‌ಐ ನಡೆಸುತ್ತಿರುವ ತನಿಖೆಯು ಅಂತಿಮ ಹಂತ ತಲುಪಿಲ್ಲ ಎಂದರು. ‌

ಹಿಂಡನ್‌ಬರ್ಗ್‌ ವರದಿ ಬಹಿರಂಗವಾದ ಬಳಿಕ ಬಿಎಸ್‌ಇ ಸೆನ್ಸೆಕ್ಸ್‌ನ ಭಾಗವಾಗಿದ್ದ ಅದಾನಿ ಸಮೂಹದ 9 ಸಂಸ್ಥೆಗಳ ಮಾರುಕಟ್ಟೆ ಮೌಲ್ಯ ಶೇ 60ರಷ್ಟು ಕುಸಿದಿತ್ತು. ಈ ಎಲ್ಲಾ ಸಂಸ್ಥೆಗಳೂ ಸೇರಿ ನಿಫ್ಟಿಯಲ್ಲಿ ಶೇ 1ಕ್ಕಿಂತ ಕಡಿಮೆ ಮೌಲ್ಯ ಹೊಂದಿದ್ದವು. ಈ ಸಂಸ್ಥೆಗಳ ಷೇರು ಮಾರುಕಟ್ಟೆಯಲ್ಲಿಯ ಅಸ್ಥಿರತೆಯು ವ್ಯವಸ್ಥೆಯ ಮಟ್ಟದಲ್ಲಿ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ. ನಿಫ್ಟಿ 50ಯು ಜನವರಿಯಲ್ಲಿ ಶೇ 2.9ರಷ್ಟು ಕುಸಿತ ಕಂಡಿತ್ತು. ಜನವರಿ, ಫೆಬ್ರುವರಿ ಅವಧಿಯಲ್ಲಿ ಶೇ 4.9ರಷ್ಟು ಕುಸಿತ ಕಂಡಿತ್ತು ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT