ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೀಯ ಪಡೆಗಳ ವಿರುದ್ಧ ಹೇಳಿಕೆ: ಮಮತಾ ಬ್ಯಾನರ್ಜಿಗೆ ಎರಡನೇ ನೋಟಿಸ್‌‌

ಚುನಾವಣಾ ಆಯೋಗ ಆಕ್ರೋಶ
Last Updated 9 ಏಪ್ರಿಲ್ 2021, 19:55 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕೇಂದ್ರೀಯ ಪಡೆಗಳ ವಿರುದ್ಧ ಮಮತಾ ಬ್ಯಾನರ್ಜಿ ಅವರು ನೀಡಿದ್ದಾರೆ ಎನ್ನಲಾದ ‘ಸಂಪೂರ್ಣ ಸುಳ್ಳು, ಪ್ರಚೋದನಕಾರಿ ಮತ್ತು ಅತಿರೇಕದ ಹೇಳಿಕೆ’ಗಳ ವಿರುದ್ಧ ಚುನಾವಣಾ ಆಯೋಗವು ಗುರುವಾರ ರಾತ್ರಿ ನೋಟಿಸ್‌ ನೀಡಿದೆ.

ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಮಮತಾ ಅವರು ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳು ಮತ್ತು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆಯೋಗವು ಆರೋಪಿಸಿದೆ. ಶನಿವಾರ ಬೆಳಿಗ್ಗೆ 11 ಗಂಟೆಯೊಳಗೆ ನೋಟಿಸ್‌ಗೆ ಉತ್ತರಿಸಬೇಕು ಎಂದು ಸೂಚಿಸಲಾಗಿದೆ.

‘...ಮಮತಾ ಬ್ಯಾನರ್ಜಿ ಅವರ ಹೇಳಿಕೆಯು ಸಂಪೂರ್ಣ ಸುಳ್ಳು, ಪ್ರಚೋದನಕಾರಿ ಮತ್ತು ಅತಿರೇಕದ್ದು ಎಂದು ಮೇಲ್ನೋಟಕ್ಕೇ ಕಾಣಿಸುತ್ತದೆ. ಚುನಾವಣಾ ಪ್ರಕ್ರಿಯೆಯ ನಡುವೆ ಕೇಂದ್ರ ಅರೆಸೇನಾ ಪಡೆಗೆ ಛೀಮಾರಿ ಹಾಕಿ ಅಪಮಾನಿಸುವುದು, ಸಿಬ್ಬಂದಿಯ ನೈತಿಕ ಸ್ಥೈರ್ಯವನ್ನೇ ಕುಗ್ಗಿಸುತ್ತದೆ’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

‘1980ರ ದಶಕದಿಂದಲೇ ಪ್ರತಿ ಚುನಾವಣೆಯಲ್ಲಿಯೂ ವಿಶೇಷವಾಗಿ ಸಮಾಜಘಾತುಕ ಶಕ್ತಿಗಳ ಪ್ರಾಬಲ್ಯವಿದ್ದ ಪ್ರದೇಶಗಳಲ್ಲಿ ಸಿಆರ್‌ಪಿಎಫ್‌ ಗಮನಾರ್ಹ ಸೇವೆ ಸಲ್ಲಿಸಿದೆ’ ಎಂದು ಆಯೋಗವು ಶ್ಲಾಘಿಸಿದೆ.

ಕಳೆದ ಕೆಲವು ದಿನಗಳಲ್ಲಿ ಮಮತಾ ಅವರಿಗೆ ಸಿಕ್ಕ ಎರಡನೇ ನೋಟಿಸ್‌ ಇದು. ಕೋಮು ಆಧಾರದಲ್ಲಿ ಮತದಾರರಿಗೆ ಮನವಿ ಮಾಡಿದ ಆರೋಪದಲ್ಲಿ ಮಮತಾ ಅವರಿಗೆ ಬುಧವಾರವೂ ಆಯೋಗವು ನೋಟಿಸ್‌ ನೀಡಿತ್ತು.

‘ಶೋಕಾಸ್‌ ನೋಟಿಸ್‌ ಲೆಕ್ಕಕ್ಕಿಲ್ಲ’
ಆಯೋಗದ ನೋಟಿಸ್‌ಗೆ ಮಮತಾ ಅವರು ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಹೇಳಿದಂತೆ ಕೇಳುವುದನ್ನು ನಿಲ್ಲಿಸುವವರೆಗೆ ಸಿಆರ್‌ಪಿಎಫ್‌ ವಿರುದ್ಧ ಮಾತನಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಅವರು ಜಮಾಲ್‌ಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.

ಚುನಾವಣಾ ಆಯೋಗವೇ ಬಿಜೆಪಿಯ ಕುಮ್ಮಕ್ಕಿನಂತೆ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮತದಾದನ ದಿನವೇ ಪ್ರಚಾರ ನಡೆಸಿದ್ದಾರೆ. ಆದರೆ, ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿಲ್ಲ ಎಂದು ಮಮತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಬಿಜೆಪಿ ಹೇಳಿದಂತೆ ಕೇಳುವುದನ್ನು ನಿಲ್ಲಿಸುವವರೆಗೆ ಸಿಆರ್‌ಪಿಎಫ್‌ ಹಸ್ತಕ್ಷೇಪದ ಬಗ್ಗೆ ಮಾತನಾಡುವೆ. ಬಿಜೆಪಿ ಹೇಳಿದಂತೆ ಕೇಳುವುದನ್ನು ನಿಲ್ಲಿಸಿದ ದಿನ ಅವರಿಗೆ ಸೆಲ್ಯೂಟ್‌ ಕೊಡುವೆ. ನಿಮ್ಮ (ಚುನಾವಣಾ ಆಯೋಗ) ಶೋಕಾಸ್‌ ನೋಟಿಸ್‌ ನನಗೆ ಲೆಕ್ಕಕ್ಕೇ ಇಲ್ಲ’ ಎಂದು ಹೇಳಿದ್ದಾರೆ.

‘ಗೂಂಡಾ ಗೃಹ ಸಚಿವ’: ಅಮಿತ್‌ ಶಾ ಹಿಂಸಾಚಾರ ನಡೆಸಲು ಯತ್ನಿಸುತ್ತಿದ್ದಾರೆ. ಅನೈತಿಕವಾಗಿ ನಡೆದುಕೊಳ್ಳುವಂತೆ ಪೊಲೀಸರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮಮತಾ ಆರೋ‍ಪಿಸಿದ್ದಾರೆ. ‘ಇಂತಹ ಗೂಂಡಾ, ಗಲಭೆಕೋರ ಗೃಹ ಸಚಿವರನ್ನು ನನ್ನ ಜೀವನದಲ್ಲಿ ಈವರೆಗೆ ಕಂಡೇ ಇಲ್ಲ. ಅವರು ಹುಲಿಗಿಂತ ಅಪಾಯಕಾರಿ’ ಎಂದು ಮೆಮಾರಿಯಲ್ಲಿ ನಡೆದ ಸಮಾವೇಶದಲ್ಲಿ ಹೇಳಿದರು.

‘ಮಮತಾಗೆ ಸೋಲಿನ ಹತಾಶೆ’
ಕೋಲ್ಕತ್ತ (ಪಿಟಿಐ):
ಸೋಲು ಸನ್ನಿಹಿತ ಎಂಬುದು ಅರಿವಾಗಿ, ಹತಾಶೆಯಲ್ಲಿ ಮಮತಾ ಅವರು ಕೇಂದ್ರೀಯ ಪಡೆಗಳ ವಿರುದ್ಧ ಅಬ್ಬರಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

‘ಟಿಎಂಸಿ ಸೋಲು ಖಚಿತ ಎಂಬ ಹತಾಶೆಯು ಮಮತಾ ಅವರ ನಡವಳಿಕೆ ಮತ್ತು ಭಾಷಣಗಳಲ್ಲಿ ಎದ್ದು ಕಾಣಿಸುತ್ತಿದೆ. ಕೇಂದ್ರೀಯ ಪಡೆಗಳ ವಿರುದ್ಧ ಮಮತಾ ಅವರು ಬಳಸಿದಂತಹ ಭಾಷೆಯನ್ನು ಯಾವುದೇ ಮುಖ್ಯಮಂತ್ರಿ ಅಥವಾ ಪಕ್ಷವೊಂದರ ಮುಖ್ಯಸ್ಥರು ಬಳಸಿದ್ದನ್ನು ನಾನು ನೋಡೇ ಇಲ್ಲ. ಅವರು ಅರಾಜಕತೆ ಸೃಷ್ಟಿಸಲು ಬಯಸಿದ್ದಾರೆಯೇ’ ಎಂದು ಶಾ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT