ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂಸಿ ಬ್ಯಾಂಕ್‌ ಸಾಲ ಹಗರಣ: ಸಂಜಯ್ ರಾವುತ್‌ ಪತ್ನಿಗೆ ಇ.ಡಿಯಿಂದ ಮತ್ತೆ ಸಮನ್ಸ್‌

Last Updated 6 ಜನವರಿ 2021, 10:59 IST
ಅಕ್ಷರ ಗಾತ್ರ

ಮುಂಬೈ: ಪಿಎಂಸಿ ಬ್ಯಾಂಕ್‌ನ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಜ. 11ರಂದು ವಿಚಾರಣೆಗೆ ಹಾಜರಾಗುವಂತೆ ಶಿವಸೇನಾ ಸಂಸದ ಸಂಜಯ್‌ ರಾವುತ್‌ ಪತ್ನಿ ವರ್ಷಾ ರಾವುತ್‌ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಮತ್ತೆ ಸಮನ್ಸ್‌ ಜಾರಿ ಮಾಡಿದೆ.

ಜ. 4ರಂದು ವಿಚಾರಣೆಗೆ ಹಾಜರಾಗಿದ್ದ ವರ್ಷಾ ಅವರ ಹೇಳಿಕೆಯನ್ನು ಇ.ಡಿ ಅಧಿಕಾರಿಗಳು ದಾಖಲಿಸಿಕೊಂಡಿದ್ದರು. ಈಗ ಎರಡನೇ ಬಾರಿ ವಿಚಾರಣೆಗಾಗಿ ಹೊಸದಾಗಿ ಸಮನ್ಸ್‌ ಜಾರಿ ಮಾಡಲಾಗಿದೆ ಎಂದು ಇ.ಡಿ ಮೂಲಗಳು ಹೇಳಿವೆ.

ಬ್ಯಾಂಕ್‌ನ ಸಾಲ ಹಗರಣದ ಆರೋಪಿಯಾಗಿರುವ ಪ್ರವೀಣ್‌ ರಾವುತ್‌ ಎಂಬುವವರ ಪತ್ನಿ ಮಾಧುರಿ ರಾವುತ್‌, ವರ್ಷಾ ಅವರ ಖಾತೆಗೆ ₹ 55 ಲಕ್ಷ ವರ್ಗಾಯಿಸಿದ್ದರು ಎಂಬ ಆರೋಪ ಕುರಿತಂತೆ ಇ.ಡಿ ತನಿಖೆ ನಡೆಸುತ್ತಿದೆ.

ಗುರೌಶಿಶ್‌ ಕನ್ಸ್ಟ್ರಕ್ಷನ್ಸ್‌ ಎಂಬ ಕಂಪನಿಯ ನಿರ್ದೇಶಕರಾಗಿದ್ದ ಪ್ರವೀಣ್‌, ಪಿಎಂಸಿ ಬ್ಯಾಂಕ್‌ನಿಂದ ₹ 95 ಕೋಟಿ ಸಾಲ ಪಡೆದಿದ್ದರು. ನಂತರ ಇದನ್ನು ಬ್ಯಾಂಕ್‌ನ ಲೆಕ್ಕಪತ್ರಗಳಿಂದ ತೆಗೆದು ಹಾಕಲಾಗಿತ್ತು ಎನ್ನಲಾಗಿದೆ.

ಈ ₹ 95 ಕೋಟಿ ಪೈಕಿ ₹ 1.6 ಕೋಟಿ ಮೊತ್ತವನ್ನು ಪತ್ನಿ ಮಾಧುರಿ ಖಾತೆಗೆ ಪ್ರವೀಣ್‌ ವರ್ಗಾಯಿಸಿದ್ದರು. ಮಾಧುರಿ ಅವರು ತಮ್ಮ ಖಾತೆಯಿಂದ ಈ ಮೊತ್ತದ ಪೈಕಿ ₹ 55 ಲಕ್ಷ ಮೊತ್ತವನ್ನು ವರ್ಷಾ ರಾವುತ್‌ ಅವರಿಗೆ ಬಡ್ಡಿ ರಹಿತ ಸಾಲವನ್ನಾಗಿ ನೀಡಿದ್ದರು ಎನ್ನಲಾಗಿದೆ.

‘ಈ ಹಣವನ್ನು ಪೂರ್ವ ದಾದರ್‌ನಲ್ಲಿ ಫ್ಲ್ಯಾಟ್‌ ಖರೀದಿಸಲು ಬಳಸಲಾಗಿದೆ’ ಎಂದು ಇ.ಡಿ ಮೂಲಗಳು ಹೇಳಿವೆ.

ಈ ಹಗರಣಕ್ಕೆ ಸಂಬಂಧಿಸಿ ಪ್ರವೀಣ್‌ಗೆ ಸೇರಿದ ₹ 72 ಕೋಟಿ ಮೌಲ್ಯದ ಆಸ್ತಿಗಳನ್ನು ಇ.ಡಿ ಈಗಾಗಲೇ ಜಪ್ತಿ ಮಾಡಿ, ಪತಿ–ಪತ್ನಿಯ ವಿಚಾರಣೆಯನ್ನೂ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT