ಶನಿವಾರ, ಸೆಪ್ಟೆಂಬರ್ 18, 2021
26 °C
ಗರೀಬ್‌ ಕಲ್ಯಾಣ್ ಯೋಜನೆ: ಹಣಕಾಸು– ಗ್ರಾಮೀಣಾಭಿವೃದ್ಧಿ ಸಚಿವಾಲಯದ ದತ್ತಾಂಶಗಳಲ್ಲಿ ವ್ಯತ್ಯಾಸ

ಗರೀಬ್‌ ಕಲ್ಯಾಣ್ ಫಲಾನುಭವಿ ಸಂಖ್ಯೆ ಬಗ್ಗೆ ಸರ್ಕಾರಕ್ಕೆ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೋವಿಡ್‌ ಸಂದರ್ಭದಲ್ಲಿ ಗರೀಬ್ ಕಲ್ಯಾಣ್ ಯೋಜನೆಯಡಿ ಮೂರು ಕಂತುಗಳಲ್ಲಿ ತಲಾ ₹1,500 ಕೋಟಿ ನೆರವು ನೀಡಿದ ಫಲಾನುಭವಿ ಮಹಿಳೆಯರ ಸಂಖ್ಯೆ ಎಷ್ಟು? 

ಕೇಂದ್ರ ಹಣಕಾಸು ಸಚಿವಾಲಯ ನೀಡಿದ ಹೇಳಿಕೆಗೂ, ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯ ನೀಡಿರುವ ಅಂಕಿ–ಅಂಶಗಳ ಮಧ್ಯೆ 1.26 ಲಕ್ಷ ವ್ಯತ್ಯಾಸ ಕಂಡುಬಂದಿದೆ. ಒಂದು ವರ್ಷದೊಳಗಿನ ಅವಧಿಯಲ್ಲಿ ಹಣಕಾಸು ಸಚಿವಾಲಯ ನೀಡಿದ ಎರಡು ಹೇಳಿಕೆಗಳೂ ಗಣನೀಯ ವ್ಯತ್ಯಾಸ ತೋರಿಸುತ್ತಿವೆ. 

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 20 ಕೋಟಿ ಮಹಿಳಾ ಜನ್‌ಧನ್ ಖಾತೆದಾರರಿಗೆ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ತಲಾ ₹500 ನೀಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020ರ ಮಾರ್ಚ್ 26ರಂದು ಪ್ರಕಟಿಸಿದ್ದರು. 

ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರಿಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಆಗಸ್ಟ್ 31ರಂದು ನೀಡಿದ ಆರ್‌ಟಿಐ ಮಾಹಿತಿ ಪ್ರಕಾರ, ಮೂರು ಕಂತುಗಳಲ್ಲಿ ತಲಾ ₹500 ಪಡೆದ ಫಲಾನುಭವಿಗಳ ಸಂಖ್ಯೆ 20.64 ಕೋಟಿ (20,64,26,947). 

ಈ ಯೋಜನೆಯಡಿಯಲ್ಲಿ ₹30,945 ಕೋಟಿ ವಿತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಆಗಸ್ಟ್ 28ರಂದು ಹೇಳಿಕೆ ನೀಡಿತ್ತು. ಸಚಿವಾಲಯವು ನಿಖರವಾದ ಸಂಖ್ಯೆಗಳನ್ನು ನೀಡದಿದ್ದರೂ, ವಿತರಿಸಿದ ಮೊತ್ತದ ಲೆಕ್ಕಾಚಾರ ಪ್ರಕಾರ, ಫಲಾನುಭವಿಗಳ ಸಂಖ್ಯೆ 20.63 ಕೋಟಿ. ಆದರೆ ಸಚಿವಾಲಯದ ಈ ಅಂಕಿ ಅಂಶಕ್ಕೂ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ನೀಡಿದ  ದತ್ತಾಂಶದ ನಡುವೆ 1.26 ಲಕ್ಷ ಫಲಾನುಭವಿಗಳ ವ್ಯತ್ಯಾಸವಿದೆ ಎಂದು ನಾಯಕ್ ಹೇಳಿದ್ದಾರೆ.

ನಾಯಕ್ ಅವರು ಹಣಕಾಸು ಸಚಿವಾಲಯ ಹೊರಡಿಸಿದ ಎರಡು ಹೇಳಿಕೆಗಳಲ್ಲಿನ ಮತ್ತಷ್ಟು ವ್ಯತ್ಯಾಸಗಳ ಬಗ್ಗೆ ಗಮನ ಸೆಳೆದಿದ್ದಾರೆ. 2020ರ ಜೂನ್ 3ರಂದು ಹೊರಡಿಸಿದ್ದ ತನ್ನ ಮೊದಲ ಹೇಳಿಕೆಯಲ್ಲಿ 20.05 ಕೋಟಿ ಮಹಿಳೆಯರಿಗೆ (ಅಂದರೆ ಶೇ 98.33ರಷ್ಟು ಜನ್‌ಧನ್ ಖಾತೆದಾರರಿಗೆ) 2020ರ ಏಪ್ರಿಲ್‌ನಲ್ಲಿ ತಲಾ ₹ 500 ವರ್ಗಾಯಿಸಲಾಗಿದೆ ಎಂದು ತಿಳಿಸಿತ್ತು.  ಆದರೆ ಈ ಸಂಖ್ಯೆಯನ್ನು 20.62 ಕೋಟಿಗೆ ಹೆಚ್ಚಿಸಿತ್ತು. ಶೇ 100 ಜನ್‌ಧನ್‌ ಖಾತೆದಾರ ಮಹಿಳೆಯರಿಗೆ ಈ ಯೋಜನೆ ತಲುಪಿದೆ ಎಂದು ತಿಳಿಸಿತ್ತು. 

‘ಆದರೆ, ಆಗಸ್ಟ್ ತಿಂಗಳಲ್ಲಿ ಸಚಿವಾಲಯ ಹೊರಡಿಸಿದ್ದ ಮತ್ತೊಂದು ಹೇಳಿಕೆ ಪ್ರಕಾರ, ಮೇ ತಿಂಗಳಿಗೆ ಹೋಲಿಸಿದರೆ 2020ರ ಜೂನ್‌ನಲ್ಲಿ 2.26 ಲಕ್ಷ ಫಲಾನುಭವಿಗಳು ಹೆಚ್ಚಾಗಿದ್ದಾರೆ. ಒಂದು ವೇಳೆ ಈ ಮಾಹಿತಿ ನಿಜವಾಗಿದ್ದರೆ, ಮೇ ತಿಂಗಳಲ್ಲಿ ಎಲ್ಲ ಫಲಾನುಭವಿಗಳನ್ನು ತಲುಪಲಾಗಿದೆ ಎಂಬ ಸಚಿವಾಲಯದ ಹೇಳಿಕೆಯೇ ತಪ್ಪಾಗಿರುತ್ತದೆ. ಮೇಲಿನ ಅಂಕಿಗಳಲ್ಲಿ ಯಾವುದು ನಿಖರವಾಗಿದೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸುವವರೆಗೆ, ಈ ವ್ಯತ್ಯಾಸ ಹಾಗೆಯೇ ಉಳಿಯುತ್ತದೆ’ ಎಂದು ನಾಯಕ್ ವಿವರಿಸಿದ್ದಾರೆ. 

ಆರ್‌ಟಿಐ ಮಾಹಿತಿ ಪ್ರಕಾರ, ಲೆಕ್ಕಾಚಾರದಂತೆ ಪ್ರತಿ ಫಲಾನುಭವಿಗೆ ₹1,500 ಸಂಪೂರ್ಣ ಪಾವತಿ ಮಾಡಲು ಒಟ್ಟು ₹30,964 ಕೋಟಿ ಅಗತ್ಯವಿದೆ. ಆದರೆ ಹಣಕಾಸು ಸಚಿವಾಲಯದ ಆಗಸ್ಟ್ 28ರ ಹೇಳಿಕೆ ಪ್ರಕಾರ, ₹30,945 ಕೋಟಿ ಸಾಕು ‘ಇದರರ್ಥ ಎಲ್ಲಾ 20.64 ಕೋಟಿ ಮಹಿಳೆಯರು ಮೂರೂ ಕಂತುಗಳನ್ನು ಸ್ವೀಕರಿಸಿಲ್ಲ’ ಎಂದು ನಾಯಕ್ ಹೇಳಿದ್ದಾರೆ.

ಫಲಾನುಭವಿಗಳಿಗೆ ಹಣಕಾಸು ಸಚಿವಾಲಯ ಹಣ ಬಿಡುಗಡೆ ಮಾಡಿದ ಹೇಳಿಕೆಗಳನ್ನು ಗಮನಿಸಿದರೆ ವ್ಯತ್ಯಾಸಗಳು ಸ್ಪಷ್ಟವಾಗಿ ಕಾಣುತ್ತವೆ. 20.05 ಕೋಟಿ ಫಲಾನುಭವಿ ಮಹಿಳೆಯರಿಗೆ ಮೊದಲ ಕಂತಿನಲ್ಲಿ ₹10,029 ಕೋಟಿ ವಿತರಿಸಲಾಗಿದೆ. ಇಷ್ಟು ಹಣದಿಂದ ಶೇ 98.33ರಷ್ಟು ಫಲಾನುಭವಿಗಳನ್ನು ತಲುಪಲಾಗಿತ್ತು. ಮೇ ತಿಂಗಳಲ್ಲಿ 20.62 ಕೋಟಿ ಫಲಾನುಭವಿಗಳಿಗೆ ₹10,315 ಕೋಟಿ ವಿತರಿಸಿದೆ. ಈ ಹಣವು ಎಲ್ಲ ಫಲಾನುಭವಿಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದೆ. ಮೂರನೇ ಕಂತಾಗಿ ₹10,601 ಕೋಟಿ ಪಾವತಿಸಲಾಗಿದೆ. ಅಂದರೆ ಎರಡನೇ ಕಂತಿನ ಪಾವತಿಗಿಂತ ₹286 ಕೋಟಿ ಹೆಚ್ಚು ಪಾವತಿಯಾಗಿರುವುದು ಕಂಡುಬಂದಿದೆ. 

ಎಲ್ಲ ಫಲಾನುಭವಿಗಳನ್ನು ತಲುಪಲಾಗಿದೆ ಎಂದು ಕಳೆದ ವರ್ಷದ ಜೂನ್‌ನಲ್ಲಿ ಸಚಿವಾಲಯ ನೀಡಿದ್ದ ಹೇಳಿಕೆ ಬಹುಶಃ ಸರಿ ಅಲ್ಲ ಎಂದು ನಾಯಕ್ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು