ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ 2021: ಜನಾದೇಶದ ಕುರಿತು ಮತಗಟ್ಟೆ ಸಮೀಕ್ಷೆಗಳು ಹೇಳುವುದೇನು?

Last Updated 29 ಏಪ್ರಿಲ್ 2021, 18:53 IST
ಅಕ್ಷರ ಗಾತ್ರ

ಪಶ್ಚಿಮ ಬಂಗಾಳ: ನಗಣ್ಯವಾದ ಎಡರಂಗ–ಕಾಂಗ್ರೆಸ್‌
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಗೆಲ್ಲುತ್ತದೆ ಎಂದೇ ಬಹುತೇಕ ಎಲ್ಲಾ ಮತದಾನೋತ್ತರ ಸಮೀಕ್ಷೆಗಳು ಹೇಳಿವೆ. ರಿಪಬ್ಲಿಕ್ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಮಾತ್ರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ ಪಡೆಯುತ್ತದೆ ಎಂದಿದೆ. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ತನ್ನ ನೆಲೆಗಟ್ಟಿಮಾಡಿಕೊಂಡಿದೆ ಎಂದು ಬಹುತೇಕ ಎಲ್ಲಾ ಸಮೀಕ್ಷೆಗಳು ಹೇಳಿವೆ.

ಈ ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ ಎಂದು ರಿಪಬ್ಲಿಕ್ ಟಿವಿ-ಸಿಎನ್ಎಕ್ಸ್ ಸಮೀಕ್ಷೆ ಹೇಳಿದ್ದರೂ, ಗರಿಷ್ಠ 138ರಿಂದ 148 ಸ್ಥಾನಗಳನ್ನು ಮಾತ್ರ ಗೆಲ್ಲಬಹುದು ಎಂದು ಅಂದಾಜಿಸಿದೆ. ಸರ್ಕಾರ ರಚಿಸಲು ಬೇಕಿರುವ ಸರಳ ಬಹುಮತ 148. 2016ರ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ ಈ ಚುನಾವಣೆಯಲ್ಲಿ ಬಿಜೆಪಿ 110ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಲ್ಲಾ ಸಮೀಕ್ಷೆಗಳು ಅಂದಾಜಿಸಿವೆ. ಈ ಮೂಲಕ ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಬಿಜೆಪಿ ಒಂದು ಪ್ರಮುಖ ಶಕ್ತಿಯಾಗಿ ಬೆಳೆಯಲಿದೆ. ಮುಂದಿನ ಚುನಾವಣೆ ವೇಳೆಗೆ ಸರಳ ಬಹುಮತಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದು ವಿಶ್ಲೇಷಿಸಲಾಗಿದೆ.

ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಮೈತ್ರಿಕೂಟವು 20-25 ಸ್ಥಾನಗಳನ್ನಷ್ಟೇ ಗೆಲ್ಲಬಹುದು ಎಂದು ಎಲ್ಲಾ ಸಮೀಕ್ಷೆಗಳು ಅಂದಾಜಿಸಿವೆ. ಈ ಪ್ರಕಾರ ಪ್ರಮುಖ ವಿರೋಧ ಪಕ್ಷದ ಸ್ಥಾನವನ್ನು ಬಿಜೆಪಿಗೆ ಈ ಮೈತ್ರಿಕೂಟವು ಬಿಟ್ಟುಕೊಡಲಿದೆ ಎಂದು ಅಂದಾಜಿಸಲಾಗಿದೆ. ಈ ಮೈತ್ರಿಕೂಟವು ಭಾರಿ ಹುಮ್ಮಸ್ಸಿನೊಂದಿಗೆ ಪ್ರಚಾರ ನಡೆಸಿತ್ತು. ಹೀಗಾಗಿ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿಗೆ ಪ್ರಬಲ ಪೈಪೋಟಿ ಕೊಡಲಿದೆ ಎಂಬ ನೀರೀಕ್ಷೆ ಹುಸಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಸ್ಸಾಂ: ಎನ್‌ಡಿಎ ಮೇಲುಗೈ
ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆದ್ದು, ಸರ್ಕಾರ ಉಳಿಸಿಕೊಳ್ಳುತ್ತದೆ ಎಂದು ಬಹುತೇಕ ಎಲ್ಲಾ ಮತದಾನೋತ್ತರ ಸಮೀಕ್ಷೆಗಳು ಹೇಳಿವೆ. ಭಾರಿ ಬಿರುಸಿನ ಪ್ರಚಾರ ನಡೆಸಿದ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟವು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ ಎಂದು ಸಮೀಕ್ಷೆಗಳಲ್ಲಿ ಅಂದಾಜಿಸಲಾಗಿದೆ.

2016ರ ಚುನಾಚಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 86 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಚುನಾವಣೆಯಲ್ಲಿಯೂ ಎನ್‌ಡಿಎ ಗರಿಷ್ಠ 84-86 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಮತ್ತು ರಿಪಬ್ಲಿಕ್ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಗಳು ಅಂದಾಜಿಸಿವೆ. ಎಬಿಪಿ-ಸಿವೋಟರ್‌ ಮಾತ್ರ ಎನ್‌ಡಿಎ 58-71 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ.

ರಾಷ್ಟ್ರೀಯ ಪೌರತ್ವ ನೋಂದಣಿಗೆ ಸಂಬಂಧಿಸಿದಂತೆ ಬಿಜೆಪಿಗೆ ಅಸ್ಸಾಂನಲ್ಲಿ ಪ್ರಬಲ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಹೀಗಾಗಿಯೇ ಎನ್‌ಆರ್‌ಸಿಯನ್ನು ವಿರೋಧಿಸಿದ್ದ ರಾಜಕೀಯ ಪಕ್ಷಗಳನ್ನು ಕಲೆಹಾಕಿ, ಕಾಂಗ್ರೆಸ್ ಮೈತ್ರಿಕೂಟ ರಚಿಸಿಕೊಂಡಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಭಾರಿ ಅಂತರದಲ್ಲಿ ಸೋಲಿಸುವ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ಮೈತ್ರಿಕೂಟ ಇತ್ತು. ಆದರೆ ಮತದಾನೋತ್ತರ ಸಮೀಕ್ಷೆಗಳು ಈ ನಿರೀಕ್ಷೆಯನ್ನು ಹುಸಿಯಾಗಿಸಿವೆ.

ಪುದುಚೇರಿ:ಎನ್‌ಡಿಎಗೆ ಪುದುಚೇರಿ ಗದ್ದುಗೆ?
ಪುದುಚೇರಿ ವಿಧಾನಸಭೆಯ ಮತದಾನೋತ್ತರ ಸಮೀಕ್ಷೆ ಹೊರಬಿದ್ದಿದೆ. ಅಬ್ಬರದ ಪ್ರಚಾರ ನಡೆಸಿದ್ದ ಎನ್‌ಡಿಎ ಮೈತ್ರಿಕೂಟವು ಸರಳ ಬಹುಮತ ಗಳಿಸಲಿದೆ ಎಂದು ಮೂರು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಎನ್‌.ರಂಗಸ್ವಾಮಿ ಅವರ ಎನ್‌. ಆರ್‌. ಕಾಂಗ್ರೆಸ್‌ ಮೈತ್ರಿಕೂಟದ ಪ್ರಮುಖ ಪಕ್ಷ. ಈ ಪಕ್ಷದ ಜತೆಗೆ ಬಿಜೆಪಿ ಮತ್ತು ಎಐಎಡಿಎಂಕೆ ಇವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಎರಡನೇ ಸ್ಥಾನ ಗಳಿಸಬಹುದು ಎಂದು ತಿಳಿಸಿವೆ.

ಎನ್‌.ಆರ್‌. ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟವು ಭಾರಿ ಅಂತರದ ಜಯ ಗಳಿಸಲಿದೆ ಎಂದು ಇಂಡಿಯಾ ಟುಡೇ–ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ತಿಳಿಸಿದೆ. ಒಟ್ಟು 30 ಸ್ಥಾನಗಳ ಪೈಕಿ, 20ರಿಂದ 24 ಸ್ಥಾನ ಗೆಲ್ಲಬಹುದು ಎಂದಿದೆ; ಗರಿಷ್ಠ 23 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಎಬಿಪಿ–ಸಿ ವೋಟರ್ ಅಭಿಪ್ರಾಯಪಟ್ಟಿದೆ.

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕೇಂದ್ರ ಸರ್ಕಾರವು ಮೂವರು ಶಾಸಕರನ್ನು ನಾಮ ನಿರ್ದೇಶನ ಮಾಡುತ್ತದೆ. ಕಳೆದ ವಿಧಾನಸಭೆಯಲ್ಲಿ ಮೂವರು ಬಿಜೆಪಿ ಶಾಸಕರನ್ನು ಕೇಂದ್ರ ನಾಮನಿರ್ದೇಶನ ಮಾಡಿತ್ತು. ಚುನಾವಣೆ ಹೊಸ್ತಿಲಲ್ಲಿ ವಿ. ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನದ ಹಿಂದೆ ಬಿಜೆಪಿ ಇತ್ತು ಎಂದು ವಿಶ್ಲೇಷಿಸಲಾಗಿತ್ತು.

ತಮಿಳುನಾಡು:ಮುಖ್ಯಮಂತ್ರಿ ಗಾದಿಯತ್ತ ಸ್ಟಾಲಿನ್?
ತೀವ್ರ ಕುತೂಹಲ ಕೆರಳಿಸಿದ್ದ ತಮಿಳುನಾಡು ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಈ ಬಾರಿ ಡಿಎಂಕೆ ಚುಕ್ಕಾಣಿ ಹಿಡಿಯಲಿದೆ ಎಂದು ತಿಳಿಸಿವೆ. ಎಂ. ಕರುಣಾನಿಧಿ ನಿಧನಾನಂತರ ಪಕ್ಷದ ಹೊಣೆ ಹೊತ್ತಿದ್ದ ಸ್ಟಾಲಿನ್, ಈ ಬಾರಿ ದ್ರಾವಿಡ ನಾಡಿನ ಮುಖ್ಯಮಂತ್ರಿಯಾಗುವ ಎಲ್ಲ ಸಾಧ್ಯತೆಗಳಿವೆ.

ಡಿಎಂಕೆ ನೇತೃತ್ವದ ಮೈತ್ರಿಕೂಟವು 160ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ರಿಪಬ್ಲಿಕ್‌ ಟಿವಿ–ಸಿಎನ್‌ಎಕ್ಸ್ ಹಾಗೂ ಪಿ–ಮಾರ್ಕ್ ಸಮೀಕ್ಷೆಗಳು ತಿಳಿಸಿವೆ. 10 ವರ್ಷಗಳಿಂದ ವಿರೋಧ ಪಕ್ಷದಲ್ಲಿ ಕುಳಿತಿದ್ದ ಡಿಎಂಕೆ ಈ ಬಾರಿ ಅಧಿಕಾರದ ರುಚಿ ಉಣ್ಣಲಿದೆ ಎಂಬ ಸೂಚನೆ ನೀಡಿವೆ.

ಆಡಳಿತಾರೂಢ ಎಐಎಡಿಎಂಕೆ ಈ ಬಾರಿ ಭಾರಿ ಮುಖಭಂಗ ಅನುಭವಿಸಲಿದೆ. ಕಳೆದ ಎರಡು ಅವಧಿಗಳಲ್ಲಿ ಏಕಾಂಗಿಯಾಗಿ ಅಧಿಕಾರ ಹಿಡಿದಿದ್ದ ಪಕ್ಷವು ಈ ಬಾರಿ 70 ಸ್ಥಾನಗಳನ್ನು ದಾಟುವುದಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಆಡಳಿತ ವಿರೋಧಿ ಅಲೆಯಿಂದ ಎಐಎಡಿಎಂಕೆ ಅಧಿಕಾರ ಕಳೆದುಕೊಳ್ಳಲಿದೆ ಎಂದು ಎರಡು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಕಮಲ್‌ಹಾಸನ್‌ ಅವರ ಮಕ್ಕಳ ನೀಧಿ ಮಯ್ಯಂ ನೇತೃತ್ವದ ಮೈತ್ರಿಕೂಟವು ತಮಿಳುನಾಡು ರಾಜಕಾರಣದ ಮೇಲೆ ಸದ್ಯದ ಮಟ್ಟಿಗೆ ಯಾವುದೇ ಪ್ರಭಾವ ಬೀರುವ ಸಾಧ್ಯತೆ ಇಲ್ಲ ಎಂಬುದು ಸಮೀಕ್ಷೆಗಳ ಅಂದಾಜು. ಟಿ.ಟಿ.ವಿ. ದಿನಕರನ್‌ ಅವರ ಪಕ್ಷ ಕೂಡ ಮೂಲೆಗುಂಪಾಗುವ ಸಾಧ್ಯತೆಯೇ ಅಧಿಕ.

ಕೇರಳ: ಪರ್ಯಾಯ ಆಳ್ವಿಕೆಗೆ ಕೊನೆ?
ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಎರಡು ಕುತೂಹಲಕರ ಅಂಶಗಳಿಗೆ ಉತ್ತರ ದೊರೆಯಲಿದೆ. ಎಲ್‌ಡಿಎಫ್‌ ಮತ್ತು ಯುಡಿಎಫ್‌ ಪರ್ಯಾಯ ಆಡಳಿತ ಕೊನೆಗೊಳ್ಳಲಿದೆಯೇ ಎಂಬುದು ಒಂದು ಪ್ರಶ್ನೆ. ಕೇರಳದಲ್ಲಿ ಬಿಜೆಪಿ ಗಟ್ಟಿ ನೆಲೆ ಕಂಡುಕೊಳ್ಳಬಹುದೇ ಎಂಬುದು ಎರಡನೇ ಪ್ರಶ್ನೆ.

ಸಮೀಕ್ಷೆಗಳು ಈ ಎರಡೂ ಪ್ರಶ್ನೆಗಳಿಗೂ ಉತ್ತರ ನೀಡಿವೆ. ದಶಕಗಳ ಪರ್ಯಾಯ ಆಳ್ವಿಕೆಯ ಬಳಿಕ ಈ ಬಾರಿ ಎಲ್‌ಡಿಎಫ್‌ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಏರಲಿದೆ. ಈ ಮೂಲಕ ‘ಪರ್ಯಾಯ ಆಳ್ವಿಕೆ’ ಕೊನೆಗೊಳ್ಳಲಿದೆ ಎಂಬುದು ಸಮೀಕ್ಷೆಗಳ ಅಂದಾಜು. ಈ ಚುನಾವಣೆಯಲ್ಲಿಯೂ ಬಿಜೆಪಿಯ ನೆಲೆ ಗಟ್ಟಿಗೊಳ್ಳದು ಎಂಬುದು ಸಮೀಕ್ಷೆಯ ಭವಿಷ್ಯ. ಕಳೆದ ಬಾರಿ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ಎರಡರಲ್ಲಿ ಗೆಲ್ಲಬಹುದು ಎಂಬುದು ಕೆಲ ಸಮೀಕ್ಷೆಗಳ ಅಂದಾಜು. ಹಾಗಾಗಿ ಭಾರಿ ದೊಡ್ಡ ಮುನ್ನಡೆ ಬಿಜೆಪಿಗೆ ಸಾಧ್ಯವಾಗದು ಎನ್ನಲಾಗಿದೆ.

ಈ ಚುನಾವಣೆಯಲ್ಲಿ ಕೋಮು ಧ್ರುವೀಕರಣಕ್ಕೆ ಯುಡಿಎಫ್‌, ಬಿಜೆಪಿ ಎರಡೂ ಪ್ರಯತ್ನಿಸಿವೆ. ಶಬರಿಮಲೆ ವಿಚಾರವು ಪ್ರಚಾರದ ಮುನ್ನೆಲೆಯಲ್ಲಿ ಇರುವಂತೆ ನೋಡಿಕೊಂಡಿವೆ. ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಘೋಷಣೆಚುನಾವಣಾ ಪ್ರಚಾರ ವೇದಿಕೆಗಳಲ್ಲಿ ಮೊಳಗಿವೆ. ಸಮೀಕ್ಷೆಗಳ ಫಲಿತಾಂಶ ನಿಜವಾದರೆ, ರಾಜಕೀಯ ಪಕ್ಷಗಳ ಕೋಮುವಾದಿ ಮನಸ್ಥಿತಿಗೆ ಕೇರಳದ ಮತದಾರರು ಮಣೆ ಹಾಕಿಲ್ಲ ಎಂಬುದು ಸಾಬೀತಾಗುತ್ತದೆ.

ಚುನಾವಣಾ ಪ್ರಕ್ರಿಯೆ ಆರಂಭವಾದಾಗ ರಾಜ್ಯದಲ್ಲಿ ಎಲ್‌ಡಿಎಫ್‌ ಪರವಾಗಿ ಬಲವಾದ ಅಲೆಯೇ ಇತ್ತು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದರು. ಆದರೆ, ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತೀವ್ರವಾಗಿ ಪ್ರಚಾರ ನಡೆಸಿದ ಬಳಿಕ ಈ ಅಲೆ ಬಿರುಸು ಕಳೆದುಕೊಂಡಿದೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಮುಖಂಡರು ಇದ್ದಾರೆ.

ಮೈತ್ರಿಕೂಟಗಳ ಮೂಲಗಳ ಪ್ರಕಾರ, 75ರಿಂದ 80 ಕ್ಷೇತ್ರಗಳಲ್ಲಿ ಗೆಲುವು ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಎಲ್‌ಡಿಎಫ್‌ ಮತ್ತು ಯುಡಿಎಫ್‌ಗಳೆರಡೂ ಇವೆ. ಏಳರಿಂದ 12 ಕ್ಷೇತ್ರಗಳಲ್ಲಿ ವಿಜಯ ದಕ್ಕಬಹುದು ಎಂಬುದು ಬಿಜೆಪಿ ಲೆಕ್ಕಾಚಾರ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT