ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌–ಬಿಜೆಪಿ ಸಖ್ಯದ ಆರೋ‍ಪ: ಕಾಂಗ್ರೆಸ್‌ ಹೇಳಿಕೆಗೆ ದನಿಗೂಡಿಸಿದ ಸಿಪಿಎಂ

ಜೆಪಿಸಿ ತನಿಖೆಗೆ ಹೆಚ್ಚಿದ ಒತ್ತಾಯ
Last Updated 17 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಫೇಸ್‌ಬುಕ್‌– ಬಿಜೆಪಿ ಸಖ್ಯದ ಬಗ್ಗೆ ಸೋಮವಾರ ಸಿಪಿಎಂ ಸಹ ಆರೋಪಗಳನ್ನು ಮಾಡಿದ್ದು, ಈ ವಿಚಾರವಾಗಿ ಜಂಟಿ ಸಂಸದೀಯ ಸಮಿತಿಯಿಂದ (ಜೆಪಿಸಿ) ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ. ಜತೆಗೆ, ಸರ್ಕಾರದ ಅಧಿಕೃತ ಸಂಸ್ಥೆಗಳು ಹಾಗೂ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಜತೆಗೆ ಯಾವುದೇ ಜಂಟಿ ಯೋಜನೆ ರೂ‍ಪಿಸುವುದರಿಂದ ಫೇಸ್‌ಬುಕ್‌ ಅನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದೆ.

‘ಬಿಜೆಪಿ, ಆರ್‌ಎಸ್‌ಎಸ್‌ ಬೆಂಬಲಿಗ, ಕನಿಷ್ಠ ನಾಲ್ಕು ಸಂಸ್ಥೆಗಳ ಪ್ರತಿನಿಧಿಗಳು ಅಪ್‌ಲೋಡ್‌ ಮಾಡಿದ ದ್ವೇಷ ಭಾಷಣಗಳನ್ನು ಫೇಸ್‌ಬುಕ್‌ ನಿರ್ಲಕ್ಷಿಸಿದೆ. ಇವರ ವಿರುದ್ಧ ಕ್ರಮ ಕೈಗೊಂಡರೆ ಭಾರತದಲ್ಲಿ ಸಂಸ್ಥೆಯ ವಹಿವಾಟಿಗೆ ಧಕ್ಕೆಯಾಗಬಹುದು ಎಂಬುದು ಭಾರತದಲ್ಲಿನ ವ್ಯವಹಾರಗಳ ಮುಖ್ಯಸ್ಥರ ನಿಲುವು’ ಎಂದು ಸಂಸ್ಥೆಯ ಕೆಲವು ಮಾಜಿ ಮತ್ತು ಹಾಲಿ ಸಿಬ್ಬಂದಿಯನ್ನು ಉಲ್ಲೇಖಿಸಿ ‘ವಾಲ್‌ಸ್ಟ್ರೀಟ್‌ ಜರ್ನಲ್’‌ ವರದಿ ಮಾಡಿತ್ತು.

ಈ ವರದಿಯ ಆಧಾರದಲ್ಲಿ ಫೇಸ್‌ಬುಕ್‌ ವಿರುದ್ಧ ಮಾತನಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಭಾರತದಲ್ಲಿ ಫೇಸ್‌ಬುಕ್ ಸಂಸ್ಥೆಯು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ನಿಯಂತ್ರಣದಲ್ಲಿದೆ. ಅವರ ಆಣತಿಯಂತೆ ಕೆಲಸ ಮಾಡುತ್ತದೆ’ ಎಂದು ಭಾನುವಾರ ಆರೋಪಿಸಿದ್ದರು. ಇದನ್ನು ಖಂಡಿಸಿದ್ದ ಬಿಜೆಪಿಯು ‘ಫೇಸ್‌ಬುಕ್‌ ಸಂಸ್ಥೆಯು ರಾಷ್ಟ್ರೀಯವಾದಿಗಳ ಧ್ವನಿಯನ್ನು ಅಡಗಿಸುತ್ತಿದೆ’ ಎಂದಿತ್ತು.

‘ಫೇಸ್‌ಬುಕ್‌ ಸಂಸ್ಥೆಯು ಅಕ್ರಮವಾಗಿ ಭಾರತದ ಚುನಾವಣಾ ವ್ಯವಸ್ಥೆಯೊಳಗೆ ಪ್ರವೇಶಿಸಿ, ಬಿಜೆಪಿಯ ಕಾರ್ಯಸೂಚಿಯನ್ನು ಉತ್ತೇಜಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ದೊಡ್ಡ ಪ್ರಮಾಣದ ಹೂಡಿಕೆ ಮತ್ತು ಸಮುದಾಯಗಳ ಮಧ್ಯೆ ದ್ವೇಷವನ್ನು ಬಿತ್ತುವುದರಲ್ಲಿ ಆ ಪಕ್ಷದ ಪಾತ್ರದ ಬಗ್ಗೆ, ‘ವಾಲ್‌ಸ್ಟ್ರೀಟ್‌ ಜರ್ನಲ್‌’ನ ವರದಿಯು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ’ ಎಂದು ಸಿಪಿಎಂ ಮುಖಂಡ ಸೀತಾರಾಮ್‌ ಯೆಚೂರಿ ಹೇಳಿದ್ದಾರೆ.

ದೇಶದಲ್ಲಿ ಪರಿಣಾಮಕಾರಿಯಾದ ಸಾಮಾಜಿಕ ಮಾಧ್ಯಮ ನೀತಿ ಇಲ್ಲ. ರಿಲಯನ್ಸ್‌ ಸಂಸ್ಥೆಯಲ್ಲಿ ಫೇಸ್‌ಬುಕ್‌ ಇತ್ತೀಚೆಗೆ ದೊಡ್ಡ ಪ್ರಮಾಣದ ಹೂಡಿಕೆ ನಡೆಸಿದೆ. ಇವೆಲ್ಲವೂ ಈ ಕ್ಷೇತ್ರದಲ್ಲಿ ಏಕಸ್ವಾಮ್ಯ ಸ್ಥಾಪಿಸುವ ಪ್ರಯತ್ನ ನಡೆದಿದೆ ಎಂಬ ಸಂದೇಹವನ್ನು ಮೂಡಿಸುತ್ತಿವೆ ಎಂದು ಸಿಪಿಎಂ ಹೇಳಿದೆ.

‘ಆರೋಪಿಗಳನ್ನು ನಿರ್ಬಂಧಿಸಲು ಸಿದ್ಧ’
ಮುಂಬೈ: ‘
ಕೇಂದ್ರ ಸರ್ಕಾರ ಅಥವಾ ನ್ಯಾಯಾಲಯವು ಸೂಚಿಸಿದರೆ, ಕೋಮು ಸಂಘರ್ಷ ಉಂಟುಮಾಡುವ ಉದ್ದೇಶದಿಂದ ದ್ವೇಷಭಾಷಣ ಪ್ರಸಾರ ಮಾಡಿದ ಆರೋಪಿ, ಎಐಎಂಐಎಂ ಬೆಂಬಲಿಗ ಅಬು ಫೈಜಲ್‌ಗೆ ತಮ್ಮ ವೆಬ್‌ಸೈಟ್‌ಗೆ ಪ್ರವೇಶ ನಿರಾಕರಿಸಲು ಸಿದ್ಧ’ ಎಂದು ಫೇಸ್‌ಬುಕ್‌ ಹಾಗೂ ಯೂಟ್ಯೂಬ್‌ ಸಂಸ್ಥೆಗಳು ಬಾಂಬೆ ಹೈಕೋರ್ಟ್‌ಗೆ ತಿಳಿಸಿವೆ.

ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಭಾಷಣ ಅಪ್‌ಲೋಡ್‌ ಮಾಡುತ್ತಿರುವ ಫೈಜಲ್‌ ಎಂಬುವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಇಲ್ಲಿನ ನಿವಾಸಿ ಇಮ್ರಾನ್‌ ಖಾನ್‌ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಹಾಗೂ ನ್ಯಾಯಮೂರ್ತಿ ಮಾಧವ ಜಾಮದಾರ ಅವರನ್ನೊಳಗೊಂಡ ಪೀಠವು ನಡೆಸುತ್ತಿದೆ.

‘ಆರೋಪಿ ಫೈಜಲ್‌ ಅವರು ಅಸಾದುದ್ದೀನ್‌‌ ಒವೈಸಿ ಅವರ ಎಐಎಂಐಎಂ ಬೆಂಬಲಿಗರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ಶಾಶ್ವತ ನಿಷೇಧ ಜಾರಿ ಮಾಡಬೇಕು. ಅವರು ಅಪ್‌ಲೋಡ್‌ ಮಾಡಿರುವ ವಿಡಿಯೊಗಳನ್ನು ತೆಗೆದುಹಾಕಬೇಕು’ ಎಂದು ದೂರುದಾರರ ಪರ ವಕೀಲರು ವಾದಿಸಿದ್ದರು. ಈ ಅರ್ಜಿಯ ಆಧಾರದಲ್ಲಿ ನ್ಯಾಯಾಲಯವು ಫೈಜಲ್‌ ಅಪ್‌ಲೋಡ್‌ ಮಾಡಿದ್ದ ವಿಡಿಯೊಗಳನ್ನು ತೆಗೆದುಹಾಕುವಂತೆ ಕಳೆದ ಮೇ ತಿಂಗಳಲ್ಲಿ ಫೇಸ್‌ಬುಕ್‌ ಹಾಗೂ ಯೂಟ್ಯೂಬ್‌ ಸಂಸ್ಥೆಗಳಿಗೆ ಸೂಚನೆ ನೀಡಿತ್ತು.

‘ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮಾವಳಿಯಡಿ ಕೇಂದ್ರ ಸರ್ಕಾರವು ಒಂದು ಆದೇಶವನ್ನು ನೀಡಿದರೆ, ಈ ವ್ಯಕ್ತಿಗೆ (ಫೈಜಲ್) ನಮ್ಮ ವೆಬ್‌ಸೈಟ್‌ಗೆ ಪ್ರವೇಶ ನಿರಾಕರಿಸಲು ಸಾಧ್ಯವಿದೆ’ ಎಂದು ಫೇಸ್‌ಬುಕ್‌ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಡೇರಿಯಸ್‌ ಖಂಬಾಟಾ ತಿಳಿಸಿದರು. ವಿಚಾರಣೆ ಮುಗಿಸಿರುವ ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿದೆ.

‘ದ್ವೇಷ ಪ್ರಸಾರಕ್ಕೆ ಅವಕಾಶವಿಲ್ಲ’
‘ದ್ವೇಷ ಭಾಷಣ ಹಾಗೂ ಹಿಂಸೆಯನ್ನು ಪ್ರಚೋದಿಸುವ ಪೋಸ್ಟ್‌ಗಳನ್ನು ಫೇಸ್‌ಬುಕ್‌ ನಿಷೇಧಿಸಿದೆ. ಯಾವುದೇ ರಾಜಕೀಯ ಸಿದ್ಧಾಂತಕ್ಕೆ ಒಳಪಡದೆ, ಜಾಗತಿಕ ಮಟ್ಟದಲ್ಲಿ ಈ ನೀತಿಯನ್ನು ಜಾರಿ ಮಾಡಲಾಗಿದೆ’ ಎಂದು ಫೇಸ್‌ಬುಕ್‌ ಸಂಸ್ಥೆ ಸೋಮವಾರ ಸ್ಪಷ್ಟಪಡಿಸಿದೆ.

ಸಂಸ್ಥೆಯ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ವಕ್ತಾರ, ‘ವ್ಯಕ್ತಿಯ ರಾಜಕೀಯ ಹಿನ್ನೆಲೆ ಅಥವಾ ಸ್ಥಾನಮಾನ ಏನೇ ಇರಲಿ, ದ್ವೇಷಭಾಷಣ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಪೋಸ್ಟ್‌ಗಳನ್ನು ನಿಷೇಧಿಸುವ ನಿಲುವನ್ನು ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ತೆಗೆದುಕೊಂಡಿದೆ. ಈ ವಿಚಾರದಲ್ಲಿ ಆಗಬೇಕಾದ ಕೆಲಸ ಇನ್ನೂ ಸಾಕಷ್ಟಿದೆ ಎಂಬುದೂ ನಿಜ. ಆ ದಿಸೆಯಲ್ಲಿ ನಾವು ಸುಧಾರಣೆಗಳನ್ನು ಮಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT