ಕೋವಿಡ್-19: ಲಸಿಕೆ ಕಾರ್ಯಕ್ರಮ ಕುಂಠಿತ

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೋವಿಡ್ ಲಸಿಕೆ ನೀತಿಯ ಅಡಿ ಜೂನ್ 21ರಂದು ಆರಂಭವಾದ ಲಸಿಕಾ ಕಾರ್ಯಕ್ರಮವು ಈಗ ಬಿರುಸು ಕಳೆದುಕೊಂಡಿದೆ. ಮೊದಲ ವಾರದಲ್ಲಿ ಪ್ರತಿದಿನ 60 ಲಕ್ಷಕ್ಕೂ ಹೆಚ್ಚು ಡೋಸ್‌ಗಳನ್ನು ಹಾಕಲಾಗಿತ್ತು. ಇದೇ ಮಂಗಳವಾರ, ಬುಧವಾರ ಮತ್ತು ಗುರುವಾರ ಕ್ರಮವಾಗಿ 27.54 ಲಕ್ಷ, 36.46 ಲಕ್ಷ ಮತ್ತು 41 ಲಕ್ಷ ಡೋಸ್ ಲಸಿಕೆಗಳನ್ನಷ್ಟೇ ನೀಡಲಾಗಿದೆ.
ನೂತನ ಲಸಿಕೆ ನೀತಿಯ ಅಡಿ ದೇಶದಲ್ಲಿ ತಯಾರಾಗುವ ಒಟ್ಟು ಲಸಿಕೆಯ ಡೋಸ್‌ಗಳಲ್ಲಿ ಶೇ 75ರಷ್ಟನ್ನು ಕೇಂದ್ರ ಸರ್ಕಾರವೇ ಖರೀದಿಸಿ ರಾಜ್ಯಗಳಿಗೆ ಪೂರೈಕೆ ಮಾಡುತ್ತದೆ. ಈ ಕಾರ್ಯಕ್ರಮದ ಅಡಿ ಜೂನ್ ಕೊನೆಯ ಎರಡು ವಾರಗಳಲ್ಲಿ ಪ್ರತಿದಿನ ಸರಾಸರಿ 64 ಲಕ್ಷ ಡೋಸ್‌ಗಳನ್ನು ನೀಡಲಾಗಿದೆ.
ಜೂನ್ 21ರಂದು ಜಾರಿಗೆ ಬಂದ ನೂತನ ನೀತಿಯ ಅಡಿ ಮೊದಲ ದಿನ 91 ಲಕ್ಷಕ್ಕೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿತ್ತು. ನಂತರದ ನಾಲ್ಕು ದಿನ, ಪ್ರತಿದಿನ 60 ಲಕ್ಷಕ್ಕೂ ಹೆಚ್ಚು ಡೋಸ್ ನೀಡಲಾಗಿದೆ. ನಂತರದ ಎರಡು ದಿನ 50 ಲಕ್ಷಕ್ಕೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ. ಜೂನ್ 27ರ ಭಾನುವಾರ 17.15 ಲಕ್ಷ ಡೋಸ್‌ಗಳನ್ನಷ್ಟೇ ನೀಡಲಾಗಿದೆ.
ಕೊನೆಯ ಎರಡು ವಾರದಲ್ಲಿ ಪ್ರತಿದಿನ ಹೆಚ್ಚು ಡೋಸ್‌ಗಳನ್ನು ನೀಡಿದ ಕಾರಣ ಜೂನ್‌ನಲ್ಲಿ ಪ್ರತಿದಿನ ನೀಡಲಾದ ಸರಾಸರಿ ಡೋಸ್‌ಗಳ ಸಂಖ್ಯೆ 40.35 ಲಕ್ಷದಷ್ಟಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಿಗೆ ಹೋಲಿಸಿದರೆ ಈ ಸಂಖ್ಯೆ ಸುಧಾರಿಸಿದೆ. ಏಪ್ರಿಲ್‌ನಲ್ಲಿ ಪ್ರತಿದಿನ ಸರಾಸರಿ 29.96 ಲಕ್ಷ ಡೋಸ್‌ಗಳನ್ನಷ್ಟೇ ನೀಡಲಾಗಿತ್ತು. ಮೇ ತಿಂಗಳಿನಲ್ಲಿ ಈ ಸಂಖ್ಯೆ 19.69 ಲಕ್ಷಕ್ಕೆ ಕುಸಿದಿತ್ತು.
‘ಜುಲೈ ತಿಂಗಳಲ್ಲಿ ಎಲ್ಲಾ ರಾಜ್ಯಗಳಿಗೆ 12 ಕೋಟಿ ಡೋಸ್ ಲಸಿಕೆಗಳನ್ನು ಒದಗಿಸಲಾಗುತ್ತದೆ’ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಹೇಳಿತ್ತು. ಅಷ್ಟೇ ಲಸಿಕೆ ದೊರೆತರೆ ಇಡೀ ತಿಂಗಳಲ್ಲಿ ಪ್ರತಿದಿನ ಸರಾಸರಿ 40 ಲಕ್ಷ ಡೋಸ್‌ಗಳನ್ನಷ್ಟೇ ನೀಡಲು ಸಾಧ್ಯ. ಇದು ಕೇಂದ್ರ ಸರ್ಕಾರದ ಗುರಿಗಿಂತ ಕಡಿಮೆ.
***
ವರ್ಷಾಂತ್ಯಕ್ಕೆ ಎಲ್ಲರಿಗೂ ಲಸಿಕೆ ನೀಡುವುದಾದರೆ, ಪ್ರತಿದಿನ 90 ಲಕ್ಷ ಡೋಸ್ ನೀಡಬೇಕು. ಈ ಸಂಖ್ಯೆ ಇಳಿದಿದ್ದು ಒಳ್ಳೆಯದಲ್ಲ.
-ರಿಜೋ ಜಾನ್, ಕೋಯಿಕ್ಕೋಡ್ ಐಐಎಂ ಪ್ರಾಧ್ಯಾಪಕ
***
12 ಕೋಟಿ ಲಸಿಕೆ ಒದಗಿಸುತ್ತೇವೆ ಎಂದು 15 ದಿನ ಮೊದಲೇ ರಾಜ್ಯಗಳಿಗೆ ಮಾಹಿತಿ ನೀಡಿದ್ದೇವೆ. ಹೀಗಿದ್ದೂ ಪೂರೈಕೆ, ಸಾಗಾಟದಲ್ಲಿ ವ್ಯತ್ಯಯವಾದರೆ ಅದು ರಾಜ್ಯ ಸರ್ಕಾರಗಳದ್ದೇ ತಪ್ಪು.
-ಹರ್ಷವರ್ಧನ್, ಕೇಂದ್ರ ಆರೋಗ್ಯ ಸಚಿವ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.