ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೂದೆಗೆ ಮಾತಿನ ಬಲ: ಸ್ವತಃ ಸಮರ್ಥನೆಗಿಳಿದ ಪ್ರಧಾನಿ ನರೇಂದ್ರ ಮೋದಿ

ಉದ್ಯಮಿಗಳ ಪರ: ವಿಪಕ್ಷ ಆರೋಪ
Last Updated 18 ಸೆಪ್ಟೆಂಬರ್ 2020, 19:28 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಕ್ಷೇತ್ರದ ಸುಧಾರಣೆಯ ಉದ್ದೇಶದಿಂದ ಸರ್ಕಾರ ರೂಪಿಸಿರುವ ಮೂರು ಮಸೂದೆಗಳು ರೈತರಿಗೆ ಸ್ವಾತಂತ್ರ್ಯ ತಂದು ಕೊಡಲಿವೆ ಮತ್ತು ಅವರ ರಕ್ಷಾ ಕವಚವಾಗಿ ಕೆಲಸ ಮಾಡಲಿವೆ. ಆದರೆ, ವಿರೋಧ ಪಕ್ಷಗಳು ಸುಳ್ಳು ಹೇಳುವ ಮೂಲಕ ರೈತರನ್ನು ದಾರಿ ತಪ್ಪಿಸುತ್ತಿವೆ. ಮಧ್ಯವರ್ತಿಗಳ ಪರವಾಗಿ ನಿಂತಿವೆ ಎಂದು ಮೋದಿ ಹೇಳಿದ್ದಾರೆ.

ಈ ಮಸೂದೆಗಳು ಚಾರಿತ್ರಿಕ. ರೈತರು ತಮ್ಮ ಉತ್ಪನ್ನಗಳನ್ನು ಉತ್ತಮ ಬೆಲೆಗೆ ತಮಗೆ ಬೇಕಾದಲ್ಲಿ ಮಾರಾಟ ಮಾಡಲು ಅವಕಾಶ ಕೊಡುತ್ತವೆ. ಈ ಮೂಲಕ, ರೈತರನ್ನು ಸಂಕೋಲೆಯಿಂದ ಬಿಡಿಸಲಿವೆ ಎಂದು ಪ್ರತಿಪಾದಿಸಿದ್ದಾರೆ.

ಬಿಹಾರದ ಹಲವು ರೈಲ್ವೆ ಯೋಜನೆಗಳಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ ಮೋದಿ ಅವರು ಮಸೂದೆಗಳ ಬಗ್ಗೆ ದೀರ್ಘವಾಗಿ ಮಾತನಾಡಿದರು.

ಮಸೂದೆಗಳ ಬಗ್ಗೆ ರೈತರಲ್ಲಿ ಇರುವ ಅನುಮಾನಗಳನ್ನು ಪರಿಹರಿಸಲು ಪ್ರಧಾನಿಯತ್ನಿಸಿದರು. ಕೃಷಿ ಉತ್ಪನ್ನಗಳನ್ನು ಸರ್ಕಾರವು ಖರೀದಿ ಮಾಡುವುದು ಮತ್ತು ಬೆಂಬಲ ಬೆಲೆ ನೀಡಿಕೆ ಪದ್ಧತಿ ಮುಂದುವರಿಯಲಿದೆ ಎಂದು ಭರವಸೆ ನೀಡಿದರು.

ಬೆಂಬಲ ಬೆಲೆಯ ಪ್ರಯೋಜನವನ್ನುರೈತರಿಗೆ ದೊರೆಯದಂತೆ ಸರ್ಕಾರ ಮಾಡಲಿದೆ ಎಂಬ ತಪ್ಪು ಮಾಹಿತಿ ಹರಡಲಾಗುತ್ತಿದೆ. ಗೋಧಿ, ಅಕ್ಕಿ
ಮತ್ತು ಇತರ ಧಾನ್ಯಗಳನ್ನು ಸರ್ಕಾರ ಖರೀದಿಯೇ ಮಾಡುವುದಿಲ್ಲ ಎಂದು ಸುಳ್ಳು ಹೇಳಲಾಗುತ್ತಿದೆ. ರೈತರನ್ನು ವಂಚಿಸುವುದು ಹೀಗೆ ಸುಳ್ಳು ಹೇಳುತ್ತಿರುವವರ ಉದ್ದೇಶ ಎಂದು ಮೋದಿ ಆರೋಪಿಸಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆಯ‌ಲ್ಲಿ ಬದಲಾವಣೆ ತರುವುದಾಗಿ ಈಗ ಮಸೂದೆಯನ್ನು ವಿರೋಧಿಸುತ್ತಿರುವ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದವು. ಆದರೆ, ಬಿಜೆಪಿ ನೇತೃತ್ವದ ಸರ್ಕಾರವು ಮಸೂದೆಗಳನ್ನು ರೂಪಿಸಿದಾಗ ಅವೇ ಪಕ್ಷಗಳು ವಿರೋಧಿಸುತ್ತಿವೆ ಎಂದರು.

ಈ ಮಸೂದೆಗಳು ರೈತರನ್ನು ದೊಡ್ಡ ಕಂಪನಿಗಳ ಶೋಷಣೆಗೆ ಒಳಪಡಿಸಲಿವೆ. ಬಿಜೆಪಿಯೇತರ ಪಕ್ಷಗಳೆಲ್ಲವೂ ರಾಜ್ಯಸಭೆಯಲ್ಲಿ ಒಂದಾಗಿ, ಮಸೂದೆಗಳನ್ನು ಸೋಲಿಸಬೇಕು ಎಂಬುದು ನನ್ನ ವಿನಂತಿ. ಎಲ್ಲ ಸಂಸದರೂ ಹಾಜರಿರುವಂತೆ ನೋಡಿಕೊಳ್ಳಿ, ಸಭಾತ್ಯಾಗದ ನಾಟಕ ಬೇಡ. ದೇಶದ ರೈತರೆಲ್ಲರೂ ನಿಮ್ಮನ್ನು ಗಮನಿಸುತ್ತಿದ್ದಾರೆ.

ಮೂರು ಮಸೂದೆಗಳು

ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು) ಮಸೂದೆ ಮತ್ತು ಬೆಲೆ ಖಾತರಿ ಹಾಗೂ ಬೇಸಾಯ ಸೇವೆಗಳಿಗೆ ರೈತರ ಒಪ್ಪಿಗೆ (ಸಶಕ್ತೀಕರಣ ಹಾಗೂ ರಕ್ಷಣೆ) ಮಸೂದೆಗೆ ಲೋಕಸಭೆಯು ಗುರುವಾರ ಅನುಮೋದನೆ ನೀಡಿದೆ. ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಬೇಕಿದೆ. ಕೃಷಿ ಉತ್ಪನ್ನಗಳ ಅನಿರ್ಬಂಧಿತ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಪ್ರಸ್ತಾವ ಈ ಮಸೂದೆಗಳಲ್ಲಿ ಇದೆ.ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆಗೆ ಲೋಕಸಭೆಯಒಪ್ಪಿಗೆ ದೊರೆತಿದೆ.

***

ರೈತರನ್ನು ನಾಶ ಮಾಡಿ, ಪಂಜಾಬ್‌ ಅನ್ನು ನಾಶ ಮಾಡಿ ಎಂಬ ಕೇಂದ್ರ ಸರ್ಕಾರದ ಪಿತೂರಿಯ ಭಾಗವಾಗಿ ಕೃಷಿ ಕ್ಷೇತ್ರದ ಮಸೂದೆಗಳನ್ನು ದೇಶದ ಮೇಲೆ ಹೇರಲಾಗುತ್ತಿದೆ. ಬಿಜೆಪಿ ಮತ್ತು ಅಕಾಲಿ ದಳದವರಿಗೆ ಪಂಜಾಬ್‌ನ ಮೇಲೆ ಇರುವ ಶತ್ರುತ್ವ ಏನು, ಅವರು ನಮ್ಮನ್ನು ಏಕೆ ನಾಶ ಮಾಡಲು ಹೊರಟಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ.
-ಅಮರಿಂದರ್‌ ಸಿಂಗ್‌, ಪಂಜಾಬ್‌ ಮುಖ್ಯಮಂತ್ರಿ

***

ದೊಡ್ಡ ಉದ್ಯಮಿಗಳಿಗೆ ಈ ಮಸೂದೆಗಳಿಂದ ಲಾಭ. ಗುತ್ತಿಗೆ ಮತ್ತು ಕಾರ್ಪೊರೇಟ್‌ ಬೇಸಾಯ ವ್ಯಾಪಕವಾಗಿ ರೈತರು ಕಾರ್ಮಿಕರಾಗಲಿದ್ದಾರೆ. ಈ ಮಸೂದೆಗಳಿಂದ ರೈತರಿಗೆ ನಷ್ಟವಾಗಲಿದೆ. ಕಾಳದಂಧೆ ಹೆಚ್ಚಲಿದೆ. ಮಂಡಿ ವ್ಯವಸ್ಥೆಯು ನಾಶವಾಗಲಿದೆ.
-ಗೋವಿಂದ ಸಿಂಗ್‌ ಡೊಟಾಸ್ರ, ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ

***

ಸುಗ್ರೀವಾಜ್ಞೆಗಳನ್ನು ಸಿದ್ಧಪಡಿಸಿದಾಗಲೇ ನಾನು ಪ್ರತಿಭಟಿಸಿದ್ದೇನೆ. ರೈತರ ಅನುಮಾನ ಮತ್ತು ಭೀತಿಯನ್ನು ಪರಿಹರಿಸಲು ಕೃಷಿಕರು ಮತ್ತು ಸರ್ಕಾರದ ನಡುವಣ ಸೇತುವೆಯಂತೆ ಕೆಲಸ ಮಾಡಿದ್ದೇನೆ. ರೈತರ ಕಳವಳಗಳು ಪರಿಹಾರ ಆಗುವ ತನಕ ಈ ಮಸೂದೆಗಳನ್ನು ಮಂಡಿಸಬಾರದು ಎಂದು ನಾನು ಒತ್ತಾಯಿಸುತ್ತಲೇ ಇದ್ದೆ. ಈ ಮಸೂದೆಗಳನ್ನು ಖಂಡಿಸಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.
-ಹರ್‌ಸಿಮ್ರತ್‌ ಕೌರ್‌ ಬಾದಲ್‌, ಕೇಂದ್ರ ಆಹಾರ ಸಂಸ್ಕರಣೆ ಉದ್ಯಮದ ಮಾಜಿ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT