ಭಾನುವಾರ, ಮಾರ್ಚ್ 7, 2021
32 °C
ಸಂಧಾನ ಸಮಿತಿ ಸದಸ್ಯ ಹೇಳಿಕೆ; ಸಮಿತಿ ಎದುರು ಅಭಿಪ್ರಾಯ ಮಂಡಿಸುವಂತೆ ರೈತರಿಗೆ ಕರೆ

ರೈತ ಪ್ರತಿಭಟನೆ: ವೈಯಕ್ತಿಕ ಅಭಿಪ್ರಾಯ ಬದಿಗೆ–ಅನಿಲ್ ಘನವತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೃಷಿ ಕಾನೂನುಗಳ ಕುರಿತು ಸುಪ್ರೀಂ ಕೋರ್ಟ್ ನೇಮಿಸಿರುವ ಸಂಧಾನ ಸಮಿತಿಯ ಸದಸ್ಯರು ಚರ್ಚೆ ನಡೆಸುವ ವೇಳೆ ತಮ್ಮ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಮುಂದಿಡುವುದಿಲ್ಲ ಎಂದು ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಅನಿಲ್ ಘನವತ್ ಅವರು ಮಂಗಳವಾರ ‍‍ಪ್ರತಿಪಾದಿಸಿದ್ದಾರೆ. ಸದಸ್ಯರು ಸರ್ಕಾರ ಅಥವಾ ಯಾವುದೇ ಪಕ್ಷ ಪರವಾಗಿ ಇಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆದ ಮೊದಲ ಸಭೆಯ ನಂತರ ಮಾತನಾಡಿದ ಅವರು, ರೈತರು ಮತ್ತು ಸಂಬಂಧ ಪಟ್ಟವರ ಜೊತೆಗೆ  ಗುರುವಾರ ಸಮಾಲೋಚನೆ ನಿಗದಿಯಾಗಿದೆ ಎಂದು ಹೇಳಿದ್ದಾರೆ.

ಜನವರಿ 11ರಂದು ಸುಪ್ರೀಂ ಕೋರ್ಟ್ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿತ್ತು. ಸಮಿತಿಯ ಕೆಲವು ಸದಸ್ಯರು ಈ ಹಿಂದೆ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದು, ಅವರಿಂದ ನಿಷ್ಪಕ್ಷಪಾತ ನಿಲುವು ಹೊರಬರಲಾರದು ಎಂಬುದು ರೈತರ ವಾದವಾಗಿದೆ.

ಈ ಮಧ್ಯೆ, ಸರ್ಕಾರ ಹಾಗೂ ರೈತರ ನಡುವೆ ಈವರೆಗೆ 9 ಸುತ್ತಿನ ಮಾತುಕತೆಗಳು ನಡೆದಿದ್ದು, ಎಲ್ಲವೂ ವಿಫಲವಾಗಿವೆ.  ಹೀಗಾಗಿ ಸಂಧಾನ ಸಮಿತಿಯು ಜನವರಿ 21ರಂದು ರೈತರ ಜತೆ ಮೊದಲ ಸುತ್ತಿನ ಮಾತುಕತೆ ನಡೆಸಲಿದೆ ಎಂದು ಶೇತ್ಕಾರಿ ಸಂಘಟನೆಯ ಅಧ್ಯಕ್ಷರೂ ಆಗಿರುವ ಘನವತ್ ಹೇಳಿದ್ದಾರೆ.

‘ಸಮಿತಿಯ ಮುಂದಿರುವ ದೊಡ್ಡ ಸವಾಲು ಎಂದರೆ, ನಮ್ಮೊಂದಿಗೆ ಬಂದು ಮಾತನಾಡುವಂತೆ ಪ್ರತಿಭಟನಾನಿರತ ರೈತರ ಮನವೊಲಿಸುವುದು. ನಾವು ನಮ್ಮ ಯತ್ನ ಮಾಡುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲದೆ ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರು ಮತ್ತು ಇತರ ಎಲ್ಲ ಪಾಲುದಾರರ ಅಭಿಪ್ರಾಯಗಳನ್ನು ಪಡೆಯುತ್ತೇವೆ’ ಎಂದಿದ್ದಾರೆ.

ಕಾಯ್ದೆಗಳಿಂದ ಕೃಷಿ ನಾಶ: ರಾಹುಲ್

ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ಕೃಷಿ ಕ್ಷೇತ್ರವನ್ನು ನಾಶಮಾಡಲು ವಿನ್ಯಾಸಗೊಳಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದರು. ರೈತರ ಸಮಸ್ಯೆಗೆ ಏಕೈಕ ಪರಿಹಾರವೆಂದರೆ ಈ ಕಾಯ್ದೆಗಳನ್ನು ರದ್ದುಪಡಿಸುವುದು ಎಂದಿದ್ದಾರೆ.

ಕೃಷಿ ಕಾನೂನುಗಳಿಗೆ ಸಂಬಂಧಿಸಿ ರೈತರ ‘ಅವಸ್ಥೆ’ಯನ್ನು ಎತ್ತಿ ತೋರಿಸುವ ಕಿರುಪುಸ್ತಕವನ್ನು ಅವರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

‘ಪ್ರಧಾನಿ ಮೋದಿ ಸೇರಿದಂತೆ ನಾನು ಯಾರಿಗೂ ಹೆದರುವುದಿಲ್ಲ. ನಾನು ಶುಭ್ರ ವ್ಯಕ್ತಿ. ಅವರು ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ಅವರು ನನಗೆ ಗುಂಡಿಕ್ಕಬಹುದು, ಆದರೆ ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ನಾನು ದೇಶಭಕ್ತ ಮತ್ತು ನನ್ನ ದೇಶವನ್ನು ರಕ್ಷಿಸುವ ಕೆಲಸ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ಮಾತುಕತೆಗೆ ಕಾಂಗ್ರೆಸ್ ಬಿಡುತ್ತಿಲ್ಲ’

ಸರ್ಕಾರ ಮತ್ತು ರೈತ ಸಂಘಗಳ ನಡುವೆ ನಡೆಯುತ್ತಿರುವ ಮಾತುಕತೆಗಳನ್ನು ತಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ಮಂಗಳವಾರ ಆರೋಪಿಸಿದೆ. 

‘ಮಾತುಕತೆ ಯಶಸ್ವಿಯಾಗಲು ವಿರೋಧ ಪಕ್ಷ ಬಯಸುತ್ತಿಲ್ಲ. ಹೀಗಾಗಿ ಪ್ರತಿರೋಧಕ ತಂತ್ರಗಳನ್ನು ನಡೆಸುತ್ತಿದೆ. ಬುಧವಾರ ನಿಗದಿಯಾಗಿರುವ ಮಾತುಕತೆ ಯಶ ಕಾಣಲಿದೆ’ ಎಂದು ಬಿಜೆಪಿ ಹಿರಿಯ ಮುಖಂಡ ಮತ್ತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಮೂರ್ನಾಲ್ಕು ಜನರ ಕೈಯಲ್ಲಿ ಆರ್ಥಿಕತೆ ಏಕಸ್ವಾಮ್ಯ ಇದೆ ಎಂಬ ರಾಹುಲ್ ಆರೋಪಕ್ಕೆ ತಿರುಗೇಟು ನೀಡಿರುವ ಜಾವಡೇಕರ್, ಕಾಂಗ್ರೆಸ್ ಆಳ್ವಿಕೆಯಲ್ಲಿ ‘ಒಂದು ಕುಟುಂಬ’ವು ದೇಶವನ್ನು ಮುನ್ನಡೆಸಿತ್ತು. ಅವರ ಕುಟುಂಬ ಆಡಳಿತ ಮುಗಿದ ಕಾರಣ ರಾಹುಲ್ ಅತೃಪ್ತರಾಗಿದ್ದಾರೆ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಷ್ಟ್ರದ ಜನರು ಅಧಿಕಾರದಲ್ಲಿದ್ದಾರೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು