ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಟ್ರ್ಯಾಕ್ಟರ್ ಮಗುಚಿ ಮೃತಪಟ್ಟದ್ದು ಆಸ್ಟ್ರೇಲಿಯಾದಿಂದ ಬಂದ ವಿದ್ಯಾರ್ಥಿ

ವಿವಾಹ ಸಂಭ್ರಮಾಚರಣೆಗೆಂದು ತವರಿಗೆ ಬಂದಿದ್ದ ನವರೀತ್ ಸಿಂಗ್
Last Updated 27 ಜನವರಿ 2021, 17:27 IST
ಅಕ್ಷರ ಗಾತ್ರ

ನವದೆಹಲಿ: ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ನಡೆದ ರೈತರ ಪೆರೇಡ್ ವೇಳೆ ಟ್ರ್ಯಾಕ್ಟರ್ ಮಗುಚಿ ಮೃತಪಟ್ಟ ವ್ಯಕ್ತಿ ಆಸ್ಟ್ರೇಲಿಯಾದಿಂದ ತವರಿಗೆ ಮರಳಿದ್ದ ವಿದ್ಯಾರ್ಥಿ ಎಂಬುದು ತಿಳಿದುಬಂದಿದೆ.

ಉತ್ತರ ಪ್ರದೇಶದ ರಾಮ್‌ಪುರದ 27 ವರ್ಷ ವಯಸ್ಸಿನ ನವರೀತ್ ಸಿಂಗ್‌ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಮದುವೆಯ ಸಂಭ್ರಮಾಚರಣೆಗೆಂದು ತವರಿಗೆ ಬಂದವರು ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಭಾಗವಹಿಸಿದ್ದರು. ಅವರ ಹುಟ್ಟೂರಿನಲ್ಲೀಗ ಸಂಭ್ರಮದ ಬದಲು ಸೂತಕದ ಛಾಯೆ ಆವರಿಸಿದೆ. ಅವರ ಸ್ನೇಹಿತರು, ಕುಟುಂಬದವರು ದುಃಖತಪ್ತರಾಗಿದ್ದಾರೆ.

ನವರೀತ್ ಸಿಂಗ್‌ ಕೇಂದ್ರ ದೆಹಲಿಯ ಐಟಿಒದಲ್ಲಿ ಪೊಲೀಸ್‌ ಬ್ಯಾರಿಕೇಡ್‌ನತ್ತ ಟ್ರ್ಯಾಕ್ಟರ್‌ ನುಗ್ಗಿಸಿದ್ದರು. ಅಷ್ಟರಲ್ಲಿ ಅದು ಮಗುಚಿಬಿದ್ದು ಅದರಡಿ ಸಿಲುಕಿದ ಸಿಂಗ್ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ರಾತ್ರಿಯೇ ಮೃತದೇಹ ರಾಮ್‌ಪುರ ತಲುಪಿದ್ದು ಮರಣೊತ್ತರ ಪರೀಕ್ಷೆಯೂ ನಡೆದಿದೆ.

ಅವರು ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯಾದಲ್ಲಿಯೇ ಮದುವೆಯಾಗಿದ್ದರು. ಆ ಪ್ರಯುಕ್ತ ಸಂಭ್ರಮಾಚರಣೆಗೆ ತವರಿಗೆ ಬಂದಿದ್ದರು. ಹೀಗೆ ಬಂದವರನ್ನು ಅವರ ಚಿಕ್ಕಪ್ಪಂದಿರು ಮನವೊಲಿಸಿ ಟ್ರ್ಯಾಕ್ಟರ್ ಪೆರೇಡ್‌ಗೆ ಕರೆದುಕೊಂಡು ಹೋಗಿದ್ದರು ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ.

‘ನಾವು ಜತೆಯಾಗಿಯೇ ರ್‍ಯಾಲಿಗೆ ತೆರಳಿದ್ದೆವು. ಆದರೆ, ಹೀಗಾಗಬಹುದು ಎಂದು ಭಾವಿಸಿರಲಿಲ್ಲ’ ಎಂದು ನವರೀತ್‌ ಸಿಂಗ್ ಅವರ ನೆರೆಮನೆಯವರು ಖೇದ ವ್ಯಕ್ತಪಡಿಸಿದ್ದಾರೆ.

ಸಿಂಗ್ ಅವರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ ಎಂಬ ವದಂತಿಗಳೂ ಮಂಗಳವಾರ ಹರಡಿದ್ದವು. ಆದರೆ, ಸಿಸಿಟಿವಿಯಲ್ಲಿ ಗುಂಡಿನ ದಾಳಿಯ ದೃಶ್ಯವಾಗಲೀ ಶಬ್ದವಾಗಲೀ ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ನವರೀತ್ ಅವರು ಆಸ್ಟ್ರೇಲಿಯಾದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT