ಗುರುವಾರ , ಆಗಸ್ಟ್ 11, 2022
23 °C

ತೀವ್ರಗೊಂಡ ರೈತರ ಪ್ರತಿಭಟನೆ: ಹರಿಯಾಣದ ಟೋಲ್‌ ಪ್ಲಾಜಾಗಳಿಗೆ ಮುತ್ತಿಗೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಚಂಡೀಗಡ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರು ಹರಿಯಾಣದ ಟೋಲ್‌ ಪ್ಲಾಜಾಗಳಿಗೆ ಮುತ್ತಿಗೆ ಹಾಕಿದ್ದಾರೆ. ಆ ಮೂಲಕ ಪ್ರಯಾಣಿಕರಿಂದ ಶುಲ್ಕ ಸಂಗ್ರಹಿಸಲು ಟೋಲ್‌ ಪ್ಲಾಜಾಗಳ ನೌಕರರಿಗೆ ರೈತರು ಅವಕಾಶ ನೀಡಿಲ್ಲವೆಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಎರಡು ವಾರಗಳಿಂದ ದೆಹಲಿಯ ಗಡಿ ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಜೊತೆಗಿನ ಸಂಧಾನ ಸಭೆಗಳು ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆಯನ್ನು ರೈತರು ನೀಡಿದ್ದರು.

'ಭಾರತೀಯ ಕಿಸಾನ್ ಯೂನಿಯನ್' ಮುಖಂಡರಾದ ಮಲ್ಕಿತ್ ಸಿಂಗ್ ಮತ್ತು ಮನೀಶ್ ಚೌಧರಿ ನೇತೃತ್ವದಲ್ಲಿ ನೂರಾರು ರೈತರು ಅಂಬಾಲಾ-ಹಿಸಾರ್ ಹೆದ್ದಾರಿಯ ಟೋಲ್ ಪ್ಲಾಜಾದ ಮೇಲೆ ಶನಿವಾರ ಮುತ್ತಿಗೆ ಹಾಕಿದ್ದಾರೆ. ಆ ವೇಳೆಯಲ್ಲಿ, ವಾಹನಗಳಿಗೆ ಯಾವುದೇ ಶುಲ್ಕ ತೆಗೆದುಕೊಳ್ಳದಂತೆ ಟೋಲ್ ಪ್ಲಾಜಾ ನೌಕರರ ಮೇಲೆ ರೈತರು ಒತ್ತಡ ಹೇರಿದ್ದಾರೆ. ಆ ನಂತರ ವಾಹನಗಳ ಶುಲ್ಕ ಮುಕ್ತ ಸಂಚಾರಕ್ಕೆ ನೌಕರರು ಅವಕಾಶ ಮಾಡಿಕೊಟ್ಟಿದ್ದಾರೆಂದು ತಿಳಿದುಬಂದಿದೆ.

ಹರಿಯಾಣದ ಕರ್ನಾಲ್‌ನ ಬಸ್ತಾರಾ ಮತ್ತು ಪಿಯೊಂಟ್ ಟೋಲ್ ಪ್ಲಾಜಾಗಳಲ್ಲಿ ಪ್ರಯಾಣಿಕರಿಂದ ಶುಲ್ಕ ಸಂಗ್ರಹಿಸಲು ರೈತರು ಅವಕಾಶ ನೀಡಿಲ್ಲವೆಂದು ವರದಿಯಾಗಿದೆ.

ಹಿಸಾರ್ ಜಿಲ್ಲೆಯ ನಾಲ್ಕು ಟೋಲ್ ಪ್ಲಾಜಾಗಳು, ಜಿಂದ್-ನಿರ್ವಾಣ ಹೆದ್ದಾರಿಯ ಟೋಲ್ ಪ್ಲಾಜಾ, ಚಾರ್ಖಿ ದಾದ್ರಿ ರಸ್ತೆಯಲ್ಲಿರುವ ಕಿಟ್ಲಾನಾ ಟೋಲ್ ಪ್ಲಾಜಾ, ದಬ್ವಾಲಿ ರಸ್ತೆಯಲ್ಲಿರುವ ಟೋಲ್ ಪ್ಲಾಜಾ ಸೇರಿದಂತೆ ರಾಜ್ಯದ ಹಲವು ಟೋಲ್‌ ಪ್ಲಾಜಾಗಳಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಹರಿಯಾಣದ ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು