ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ರೈತರ ಆಂತರಿಕ ಸಭೆ | 18 ತಿಂಗಳು ಕಾಯ್ದೆ ಸ್ಥಗಿತ: ಪ್ರಸ್ತಾವ

10ನೇ ಸುತ್ತಿನ ಮಾತುಕತೆಯಲ್ಲೂ ಸಿಗದ ಫಲ
Last Updated 21 ಜನವರಿ 2021, 0:56 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಬೇಡಿಕೆಗೆ ಸ್ವಲ್ಪ ಮಟ್ಟಿಗೆ ಸರ್ಕಾರವು ಮಣಿದಂತೆ ಕಾಣುತ್ತಿದೆ. ಮೂರು ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ಅಮಾನತಿನಲ್ಲಿಟ್ಟು, ಕಾಯ್ದೆಗಳ ಬಗ್ಗೆ ಚರ್ಚಿಸಲು ಜಂಟಿ ಸಮಿತಿಯನ್ನು ರಚಿಸುವುದಾಗಿ ಸರ್ಕಾರವು ರೈತರ ಎದುರು ಪ್ರಸ್ತಾವ ಇರಿಸಿತು. ಬುಧವಾರ 10ನೇ ಸುತ್ತಿನ ಮಾತುಕತೆಯಲ್ಲಿ ಈ ಪ್ರಸ್ತಾವ ಇರಿಸಲಾಗಿದೆ. ರೈತರು ಈ ಪ್ರಸ್ತಾವಕ್ಕೆ ತಕ್ಷಣ ಒಪ್ಪಿಗೆ ಸೂಚಿಸಲಿಲ್ಲ. ಬದಲಾಗಿ, ಆಂತರಿಕ ಸಭೆ ನಡೆಸಿ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಇಲ್ಲಿನ ವಿಜ್ಞಾನ ಭವನದಲ್ಲಿ ಸರ್ಕಾರ ಹಾಗೂ ರೈತ ಪ್ರತಿನಿಧಿಗಳ ನಡುವೆ ಐದು ಗಂಟೆಗಳ ಕಾಲ ಮಾತುಕತೆ ನಡೆಯಿತು. ಗುರುವಾರ ರೈತರು ಸಭೆ ಸೇರಿ ನಿರ್ಧಾರ ತೆಗೆದುಕೊಂಡ ಬಳಿಕ ಜನವರಿ 22ಕ್ಕೆ ಮುಂದಿನ ಮಾತುಕತೆ ನಿಗದಿ ಮಾಡಲಾಗಿದೆ.

ಮೂರು ಕೃಷಿ ಕಾನೂನುಗಳನ್ನು ನಿಗದಿತ ಅವಧಿಯವರೆಗೆ ಸ್ಥಗಿತಗೊಳಿಸಿ, ಜಂಟಿ ಸಮಿತಿ ರಚನೆ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಲು ಸರ್ಕಾರ ಪ್ರಸ್ತಾಪ ಇರಿಸಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.

ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಬೇಡಿಕೆಗೆ ರೈತ ಸಂಘಟನೆಗಳು ಈಗಲೂ ಬದ್ಧ. ಆದರೆ ಸರ್ಕಾರ ಮುಂದಿಟ್ಟಿರುವ ಪ್ರಸ್ತಾವವನ್ನು ಕುರಿತು ಚರ್ಚಿಸುತ್ತೇವೆ. ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದೇವೆ’ ಎಂದು ರೈತ ನಾಯಕರು ಹೇಳಿದ್ದಾರೆ.

ತಿದ್ದುಪಡಿ ಪ್ರಸ್ತಾವ: ಕಾಯ್ದೆ ತಿದ್ದುಪಡಿಗೆ ಸರ್ಕಾರ ಪ್ರಸ್ತಾವ ಮಂಡಿಸಿತು. ಆದರೆ ರೈತರು ತಮ್ಮ ಬೇಡಿಕೆಗೆ ಅಂಟಿಕೊಂಡಿದ್ದರು. ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ನೀಡುವ ಚರ್ಚೆಯನ್ನು ಕೇಂದ್ರ ದಿಕ್ಕು ತಪ್ಪಿಸುತ್ತಿದೆ ಎಂದು ರೈತರು ಆರೋಪಿಸಿದರು.

ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಎರಡೂ ಕಡೆಯವರು ತಮ್ಮ ಪಟ್ಟು ಸಡಿಲಿಸದ ಕಾರಣ ಮಾತುಕತೆ ಬಿಕ್ಕಟ್ಟಿನಲ್ಲಿ ಕೊನೆಗೊಂಡಿತು. 11ನೇ ಸುತ್ತಿನ ಮಾತುಕತೆ ದಿನಾಂಕವನ್ನು ನಿಗದಿಪಡಿಸಿದ್ದನ್ನು ಹೊರತುಪಡಿಸಿ ಯಾವುದೇ ಸಕಾರಾತ್ಮಕ ಫಲಿತಾಂಶ ಹೊರಬರಲಿಲ್ಲ.

ರಚಿಸಲಾಗುವ ಜಂಟಿ ಸಮಿತಿಯಲ್ಲಿ ರೈತ ಸಂಘದ ಮುಖಂಡರು ಮತ್ತು ಸರ್ಕಾರದ ಪ್ರತಿನಿಧಿಗಳು ಇರಲಿ
ದ್ದಾರೆ ಎಂಬುದಾಗಿ ಸರ್ಕಾರ ಪ್ರಸ್ತಾವ ಮಂಡಿಸಿತು. ಸಮಿತಿಯು ತನ್ನ ವರದಿಯನ್ನು ನೀಡುವವರೆಗೂ ಕಾನೂನುಗಳನ್ನು ಅಮಾನತಿನಲ್ಲಿ ಇಡಲಾಗುವುದು. ಹೀಗಾಗಿ ಆ ಸಮಯದವರೆಗೆ ರೈತರು ತಮ್ಮ ಚಳವಳಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಸಚಿವರು ಒತ್ತಾಯಿಸಿದರು.

ಬಿಕ್ಕಟ್ಟು ಪರಿಹರಿಸಲು ಸಮಿತಿಯನ್ನು ರಚಿಸಿರುವ ಸುಪ್ರೀಂ ಕೋರ್ಟ್, ಮುಂದಿನ ಆದೇಶದವರೆಗೆ ಕಾನೂನು ಜಾರಿಗೆ ತಡೆ ನೀಡಿದೆ. ಮಂಗಳವಾರ ತನ್ನ ಮೊದಲ ಸಭೆ ನಡೆಸಿದ್ದ ಸಮಿತಿಯು ಗುರುವಾರ ವಿವಿಧ ಪಾಲುದಾರರೊಂದಿಗೆ ಸಮಾಲೋಚನೆ ಆರಂಭಿಸಲಿದೆ. ಎರಡು ತಿಂಗಳಲ್ಲಿ ವರದಿ ನೀಡುವಂತೆ ಸಮಿತಿಯನ್ನು ಕೋರಲಾಗಿದೆ.

ಎನ್‌ಐಎ ನೋಟಿಸ್‌ಗೆ ಆಕ್ರೋಶ: ಪ್ರತಿಭಟನಾನಿರತ ಕೆಲವು ರೈತರಿಗೆ ಎನ್‌ಐಎ ನೋಟಿಸ್ ನೀಡುತ್ತಿರುವ ವಿಷಯವನ್ನು ರೈತ ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು. ಚಳವಳಿಯನ್ನು ಬೆಂಬಲಿಸುವವರಿಗೆ ಕಿರುಕುಳ ನೀಡುವುದಕ್ಕಾಗಿಯೇ ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಸರ್ಕಾರದ ಪ್ರತಿನಿಧಿಗಳು ಹೇಳಿದರು.

ಟಿಕ್ರಿ ಗಡಿಯಲ್ಲಿ ರೈತ ಆತ್ಮಹತ್ಯೆ

ದೆಹಲಿಯ ಟಿಕ್ರಿ ಗಡಿಯಲ್ಲಿ ಬುಧವಾರ ಪ್ರತಿಭಟನೆ ನಡೆಸುತ್ತಿದ್ದ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಹರಿಯಾಣದ ರೋಹ್ಟಕ್ ಜಿಲ್ಲೆಯ ಪ್ರಕಾಸ್ಮಾ ಗ್ರಾಮದ ಜೈ ಭಗವಾನ್ ರಾಣಾ (42) ಎಂದು ಗುರಿತಿಸಲಾಗಿದೆ. ಮಂಗಳವಾರ ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರಾಣಾ ಅವರು ಸಲ್ಫಸ್ ಮಾತ್ರೆಗಳನ್ನು ಸೇವಿಸಿದ್ದರು. ಸಂಜಯ್ ಗಾಂಧಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಡಿಸಿಪಿ ಎ. ಕೋಯನ್ ಅವರು ತಿಳಿಸಿದ್ದಾರೆ.

ರಾಣಾ ಅವರ ಬರೆದಿದ್ದು ಎನ್ನಲಾದ ಮರಣಪತ್ರವೊಂದು ದೊರೆತಿದೆ. ‘ವಿಚಾರವು ಕೇವಲ ಎರಡು ರಾಜ್ಯಗಳಿಗೆ ಸಂಬಂಧಿಸಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಇಲ್ಲಿ ದೇಶದಾದ್ಯಂತ ರೈತರು ಭಾಗಿಯಾಗಿದ್ದಾರೆ. ಕಾಯ್ದೆಗಳನ್ನು ವಿರೋಧಿಸಿ ನನ್ನಂತಹ ಸಣ್ಣ ರೈತರೂ ಬೀದಿಗೆ ಇಳಿದಿದ್ದೇವೆ. ಇದು ಚಳವಳಿ ಅಲ್ಲ. ಇದು ವಿಷಯಾಧಾರಿತ ಹೋರಾಟ. ಸಂಧಾನ ಮಾತುಕತೆಗಳು ವೈಫಲ್ಯ ಕಾಣುತ್ತಿವೆ’ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಕಳೆದ ತಿಂಗಳು ಪಂಜಾಬ್‌ನ ವಕೀಲರೊಬ್ಬರು ಟಿಕ್ರಿ ಗಡಿಯಿಂದ ಸ್ವಲ್ಪ ದೂರದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಂಘು ಗಡಿಯಲ್ಲಿ ಸಿಖ್ ಧರ್ಮಪ್ರಚಾರಕ ಸಂತ ರಾಮ್‌ಸಿಂಗ್ ಎಂಬುವರೂ ಸಹ ಜೀವನ ಪಯಣ ಮುಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT