ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾ ಚುನಾವಣೆ ಫಲಿತಾಂಶ: ಸ್ಟಾಲಿನ್‌, ವಿಜಯನ್‌, ದೀದಿಗೆ ಗದ್ದುಗೆ

ಅಸ್ಸಾಂನಲ್ಲಿ ಅಧಿಕಾರ ಉಳಿಸಿಕೊಂಡ ಬಿಜೆಪಿ : ಎನ್‌.ಆರ್. ಕಾಂಗ್ರೆಸ್‌ಗೆ ಪುದುಚೇರಿ
Last Updated 2 ಮೇ 2021, 22:15 IST
ಅಕ್ಷರ ಗಾತ್ರ

ಬೆಂಗಳೂರು: ರಣಾಂಗಣವೇ ಆಗಿದ್ದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣಾ ಕಣಕ್ಕೆ ‘ಖೇಲೋ ಹೋಬೆ’ (ಆಟ ಶುರು) ಎನ್ನುತ್ತಾ ನುಗ್ಗಿದ್ದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸತತ ಮೂರನೇ ಅವಧಿಗೆ ಅಧಿಕಾರ ಉಳಿಸಿ
ಕೊಂಡಿದ್ದಾರೆ.

ಅಸ್ಸಾಂ ಮತ್ತು ಕೇರಳದಲ್ಲಿ ಕ್ರಮವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸತತ ಎರಡನೇ ಅವಧಿಗೆ ಅಧಿಕಾರ ಉಳಿಸಿಕೊಂಡಿವೆ. ನಾಲ್ಕು ದಶಕಗಳ ಬಳಿಕ ಕೇರಳದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬರುವ ಮೂಲಕ ಎಲ್‌ಡಿಎಫ್‌ ಇತಿಹಾಸ ಸೃಷ್ಟಿಸಿದೆ. ಎಂ.ಕೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ, ದಶಕದ ಬಳಿಕ ತಮಿಳುನಾಡಿನಲ್ಲಿ ಎಐಎಡಿಎಂಕೆ
ಯಿಂದ ಅಧಿಕಾರ ಕಸಿದುಕೊಂಡಿದೆ.

ಇಡೀ ದೇಶದ ಗಮನ ಸೆಳೆದು, ಕುತೂಹಲ ಮೂಡಿಸಿದ್ದ ಈ ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ವಿಧಾನಸಭೆ ಚುನಾವಣೆಯ ಫಲಿತಾಂಶವು ರಾಷ್ಟ್ರ ರಾಜಕಾರಣದಲ್ಲಿ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ‘ಪಶ್ಚಿಮ ಬಂಗಾಳದ ಗೆಲುವಿನ ಬಳಿಕ ದೆಹಲಿಗೆ ಹೋಗುವೆ’ ಎಂದು ಚುನಾವಣಾ ಪ್ರಚಾರ ಸಂದರ್ಭದಲ್ಲಿಯೇ ಮಮತಾ ಅವರು ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೋಡಿಯನ್ನು ಕಟುವಾಗಿ ವಿರೋಧಿಸುವ ನಾಯಕರಾದ ಮಮತಾ ಬ್ಯಾನರ್ಜಿ, ಸ್ಟಾಲಿನ್‌ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪರವಾಗಿ ಜನಾದೇಶ ಬಂದಿದೆ. ಸಂಪನ್ಮೂಲ, ತಳಮಟ್ಟದಲ್ಲಿ ಕಾರ್ಯಕರ್ತರ ಪಡೆ, ಆರ್‌ಎಸ್‌ಎಸ್‌ನ ಸಂಘಟನಾ ಬಲದೊಂದಿಗೆ ಚತುರವಾಗಿ ಚುನಾವಣೆ ಎದುರಿಸುವ ಬಿಜೆಪಿ, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಇರುವಲ್ಲಿ ಹೆಚ್ಚು ಪರಿಣಾಮಕಾರಿ ಅಲ್ಲ ಎಂಬುದನ್ನು ಈ ಫಲಿತಾಂಶವು ಮತ್ತೊಮ್ಮೆ ಸಾಬೀತು ಮಾಡಿದೆ.

ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡಿನಲ್ಲಿ ಮೋದಿ, ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಂತಹ ಉನ್ನತ ನಾಯಕರು ಹತ್ತಾರು ರ್‍ಯಾಲಿಗಳನ್ನು ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರುವುದಾಗಿ ಈ ನಾಯಕರು ಹೇಳಿದ್ದರು. ಟಿಎಂಸಿಯ ಹಲವು ಮುಖಂಡರು ಬಿಜೆಪಿ ಸೇರಿದ್ದು ಈ ವಿಶ್ವಾಸಕ್ಕೆ ಕಾರಣವಾಗಿತ್ತು. ಇಲ್ಲಿ ಅಧಿಕಾರಕ್ಕೆ ಏರಲು ಸಾಧ್ಯವಾಗದೇ ಇದ್ದರೂ ಪ್ರಬಲ ಪ್ರತಿ‍ಪಕ್ಷವಾಗಿ ಬಿಜೆಪಿ ಹೊಮ್ಮಿದೆ. ಕಳೆದ ಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದ್ದ ಬಿಜೆಪಿ ಈ ಮಟ್ಟಕ್ಕೆ ಏರಿದ್ದು ಸಣ್ಣ ಸಾಧನೆ ಏನಲ್ಲ.

ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 120ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ ಇತ್ತು. ಹಾಗಾಗಿ, ಈ ಬಾರಿಯ ಫಲಿತಾಂಶವನ್ನು ಬಿಜೆಪಿಯ ಹಿನ್ನಡೆ ಎಂದೂ ಪರಿಗಣಿಸಲು ಸಾಧ್ಯವಿದೆ.

ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ, ತಮಿಳುನಾಡು ಬಿಟ್ಟು ಚುನಾವಣೆ ನಡೆದ ಎಲ್ಲೆಡೆಯೂ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ, ರಾಜ್ಯ ಮಟ್ಟದ ರಾಜಕಾರಣದಲ್ಲಿಯೂ ಕಾಂಗ್ರೆಸ್‌ ಪಕ್ಷವು ಅಪ್ರಸ್ತುತವಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಈ ಫಲಿತಾಂಶವು ಮುಂದಿಟ್ಟಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೇರಳದ ವಯನಾಡ್‌ನ ಸಂಸದ. ಆ ರಾಜ್ಯದಲ್ಲಿ ಅವರು ವ್ಯಾಪಕವಾಗಿ ಪ್ರಚಾರವನ್ನೂ ಮಾಡಿದ್ದಾರೆ. ಎಲ್‌ಡಿಎಫ್‌, ಯುಡಿಎಫ್‌ ಮೈತ್ರಿಕೂಟಗಳ ಪರ್ಯಾಯ ಆಡಳಿತವು ನಾಲ್ಕು ದಶಕಗಳಿಂದ ಚಾಲ್ತಿಯಲ್ಲಿತ್ತು. ಈ ಬಾರಿ ಅದನ್ನು ಪುನರಾವರ್ತಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಈ ಸೋಲಿನ ಹೊಣೆಯನ್ನು ರಾಹುಲ್‌ ಗಾಂಧಿ ಅವರು ಹೊರಲೇಬೇಕಾಗುತ್ತದೆ.

ಕಾಂಗ್ರೆಸ್‌ ಅಪ್ರಸ್ತುತಗೊಂಡರೆ ಬಿಜೆಪಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳೇ ಎದ್ದು ನಿಲ್ಲಲಿವೆ ಎಂಬ ಅಂಶವನ್ನೂ ಈ ಬಾರಿಯ ಫಲಿತಾಂಶವು ತೆರೆದಿಟ್ಟಿದೆ. ಮೋದಿ–ಶಾ ಜೋಡಿಯ ವಿರುದ್ಧ ಆಕ್ರೋಶಗೊಂಡಿರುವ ಮಮತಾ ಅವರು, ಬಿಜೆಪಿ ವಿರುದ್ಧ ಇತರ ಪಕ್ಷಗಳು ಒಂದಾಗಬೇಕು ಎಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರೆಕೊಟ್ಟಿದ್ದರು. ಶಿವಸೇನಾ, ಸಮಾಜವಾದಿ ಪಕ್ಷ, ಎಎಪಿ, ಡಿಎಂಕೆ ಮುಂತಾದ ಪ್ರಭಾವಿ ಪಕ್ಷಗಳು ಮಮತಾ ಅವರ ಕರೆಗೆ ಸ್ಪಂದಿಸಿದ್ದವು.

ಈ ಹಿನ್ನೆಲೆಯಲ್ಲಿ ಗಮನಿಸಿದರೆ, ಬಿಜೆಪಿಯೇತರ ಪಕ್ಷಗಳು ಮಮತಾ ನೇತೃತ್ವದಲ್ಲಿ ಒಟ್ಟಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಮಮತಾ ಅವರೂ ತಮ್ಮ ರಾಷ್ಟ್ರಮಟ್ಟದ ಮಹತ್ವಾಕಾಂಕ್ಷೆಯನ್ನು ಅಡಗಿಸಿಟ್ಟವರಲ್ಲ. ಈ ಫಲಿತಾಂಶ ಮತ್ತು ಒಟ್ಟು ರಾಜಕೀಯ ಸ್ಥಿತಿಯು ಮಮತಾ ಅವರ ಮಹತ್ವಾಕಾಂಕ್ಷೆಯನ್ನು ನೀರೆರೆದು ಪೋಷಿಸಲಿದೆ.

ತಿರುಗುಬಾಣವಾದ ಕೇರಳ ಪ್ರಯೋಗ

ಕೇರಳದಲ್ಲಿ ಗೆಲ್ಲಲೇಬೇಕು ಎಂಬ ಹಂಬಲದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿ ಭಾರಿ ಪ್ರಚಾರವನ್ನೂ ನಡೆಸಿತ್ತು. ಮೆಟ್ರೊಮ್ಯಾನ್‌ ಎಂದೇ ಖ್ಯಾತರಾಗಿರುವ ತಂತ್ರಜ್ಞ ಇ. ಶ್ರೀಧರನ್‌ ಅವರು ಬಿಜೆಪಿ ಸೇರಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. 88 ವರ್ಷದ ಅವರನ್ನು ಪಾಲಕ್ಕಾಡ್‌ ಕ್ಷೇತ್ರದಿಂದ ಪಕ್ಷವು ಕಣಕ್ಕೆ ಇಳಿಸಿತ್ತು. ಅವರು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅನಧಿಕೃತವಾಗಿ ಹೇಳಲಾಗಿತ್ತು. ಆದರೆ, ಅವರು ಪರಾಜಿತರಾಗಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್‌ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡೂ ಕಡೆ ಸೋತಿದ್ದಾರೆ. ಜನಪ್ರಿಯ ನಟ ಮತ್ತು ರಾಜ್ಯಸಭೆ ಸದಸ್ಯ ಸುರೇಶ್‌ ಗೋಪಿ ಅವರು ತ್ರಿಶ್ಶೂರು ಕ್ಷೇತ್ರದಲ್ಲಿ ಸೋತಿದ್ದಾರೆ. ಕಳೆದ ಬಾರಿ ಪಕ್ಷ ಗೆದ್ದಿದ್ದ ನೇಮಮ್‌ ಕ್ಷೇತ್ರದಲ್ಲಿ ಈ ಬಾರಿ ಕುಮ್ಮನಂ ರಾಜಶೇಖರನ್‌ ಸೋತಿದ್ದಾರೆ. ಇದ್ದ ಒಂದು ಕ್ಷೇತ್ರವನ್ನೂ ಬಿಜೆಪಿ ಈ ಬಾರಿ ಕಳೆದುಕೊಂಡಿದೆ.

‘ಬಂಗಾಳದ ಮಗಳಿಗೆ’ ಮನ್ನಣೆ

ಮೋದಿ ಮತ್ತು ದೀದಿ (ಮಮತಾ) ನಡುವಣ ಹಣಾಹಣಿ ಎಂದು ಚುನಾವಣೆಯನ್ನು ಬಿಂಬಿಸಿದ್ದು ಬಿಜೆಪಿ. ಪಶ್ಚಿಮ ಬಂಗಾಳದವರು ಮತ್ತು ಹೊರಗಿನವರ ನಡುವಣ ಸ್ಪರ್ಧೆ ಎಂದು ಮಮತಾ ಬಿಂಬಿಸಿದರು. ಬಿಜೆಪಿಗೆ ಸ್ಥಳೀಯವಾಗಿ ಜನಪ್ರಿಯ ನಾಯಕ ಇರಲಿಲ್ಲ. ಪ್ರಚಾರದ ಮುನ್ನೆಲೆಯಲ್ಲಿ ಮೋದಿ–ಶಾ ಅವರೇ ಇದ್ದರು. ಹಾಗಾಗಿ, ಹೊರಗಿನವರು ಮತ್ತು ಸ್ಥಳೀಯರು ಎಂಬುದು ಜನರ ಮನಸ್ಸಿಗೆ ಇಳಿಯಿತು. ‘ಬಂಗಾಳದ ಮಗಳು’ ಎಂದು ಮಮತಾ ತಮ್ಮನ್ನು ಬಿಂಬಿಸಿಕೊಂಡರು. ಮಮತಾ ಅವರನ್ನು ಬಿಜೆಪಿಯ ನಾಯಕರು ನಿರಂತರವಾಗಿ ಲೇವಡಿ ಮಾಡಿದ್ದು ಕೂಡ ಅವರ ಪರವಾಗಿ ಕೆಲಸ ಮಾಡಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಅಸ್ತಿತ್ವ ಉಳಿಸಿಕೊಂಡ ಎಐಎಡಿಎಂಕೆ

ತಮಿಳುನಾಡು ರಾಜಕಾರಣದ ಇಬ್ಬರು ಪ್ರಭಾವಿ ನಾಯಕರಾದ ಎಂ. ಕರುಣಾನಿಧಿ ಮತ್ತು ಜೆ.ಜಯಲಲಿತಾ ಅವರು ನಿಧನರಾದ ನಂತರ ನಡೆದ ಮೊದಲ ಚುನಾವಣೆ ಇದು. ಜಯಲಲಿತಾ ಅವರ ಅನುಪಸ್ಥಿತಿಯಲ್ಲಿಯೂ ಪ್ರಬಲ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುವಷ್ಟು ಕ್ಷೇತ್ರಗಳಲ್ಲಿ ಗೆಲ್ಲಲು ಎಐಎಡಿಎಂಕೆಗೆ ಸಾಧ್ಯವಾಗಿದೆ. ದಶಕದ ಬಳಿಕ ರಾಜ್ಯದಲ್ಲಿ ಭಾರಿ ಗೆಲುವು ಸಾಧ್ಯವಾಗಬಹುದು ಎಂಬ ಡಿಎಂಕೆಯ ನಿರೀಕ್ಷೆ ಕೈಗೂಡಿಲ್ಲ.

ನಂದಿಗ್ರಾಮದಲ್ಲಿ ಸೋತ ಮಮತಾ

ಪಕ್ಷಕ್ಕೆ ಭಾರಿ ಗೆಲುವು ತಂದುಕೊಟ್ಟ ಮಮತಾ ಬ್ಯಾನರ್ಜಿ ಅವರು, ತೀವ್ರ ಜಿದ್ದಾಜಿದ್ದಿಯ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಸೇರಿದ್ದ ತಮ್ಮ ಒಂದು ಕಾಲದ ಆಪ್ತ ಸುವೇಂದು ಅವರನ್ನು ಸೋಲಿಸುವ ಪಣ ತೊಟ್ಟು ಅವರು ಸ್ಪರ್ಧಿಸಿದ್ದರು. ಮತ ಎಣಿಕೆಯ ಉದ್ದಕ್ಕೂ ಗೆಲುವು ಇಬ್ಬರ ನಡುವೆ ಕಣ್ಣುಮುಚ್ಚಾಲೆ ಆಡುತ್ತಲೇ ಇತ್ತು. ಕೊನೆಗೂ ಸುವೇಂದು ಅವರು 1,956 ಮತಗಳ ಅಂತರದಿಂದ ಗೆದ್ದರು. ಈ ಗೆಲುವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗುವುದಾಗಿ ಮಮತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT