ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಂಟ್ರಿಕ್ಸ್-ದೇವಾಸ್‌ ಡೀಲ್ ಕಾಂಗ್ರೆಸ್‌ ಅಧಿಕಾರ ದುರ್ಬಳಕೆಗೆ ಸಾಕ್ಷಿ: ನಿರ್ಮಲಾ

Last Updated 18 ಜನವರಿ 2022, 14:21 IST
ಅಕ್ಷರ ಗಾತ್ರ

ನವದೆಹಲಿ: ಆ್ಯಂಟ್ರಿಕ್ಸ್-ದೇವಾಸ್‌ ಒಪ್ಪಂದದ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವು ಕಾಂಗ್ರೆಸ್‌ನ ಅಧಿಕಾರ ದುರ್ಬಳಕೆಗೆ ಪುರಾವೆಯಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಈ ಪ್ರಕರಣವು 2005ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಾಣಿಜ್ಯ ವಿಭಾಗ ಆ್ಯಂಟ್ರಿಕ್ಸ್ ಮತ್ತು ಬೆಂಗಳೂರು ಮೂಲದ ಸ್ಟಾರ್ಟಪ್ ದೇವಾಸ್ ಮಲ್ಟಿಮೀಡಿಯಾ ನಡುವೆ ಉಪಗ್ರಹ ಒಪ್ಪಂದಕ್ಕೆ ಸಂಬಂಧಿಸಿದ್ದಾಗಿದ್ದು, 2011ರಲ್ಲಿ ಒಪ್ಪಂದವನ್ನು ರದ್ದುಗೊಳಿಸಲಾಗಿತ್ತು.

ಆ್ಯಂಟ್ರಿಕ್ಸ್ ಮತ್ತು ದೇವಾಸ್ ನಡುವಿನ ದಶಕದ ಸುದೀರ್ಘ ಕಾನೂನು ಹೋರಾಟವು ಸೋಮವಾರ ದೇವಾಸ್ ಮಲ್ಟಿಮೀಡಿಯಾವನ್ನು ಮುಚ್ಚುವಂತೆ ಸುಪ್ರೀಂ ಕೋರ್ಟ್ ಆದೇಶಿಸುವುದರೊಂದಿಗೆ ಕೊನೆಗೊಂಡಿತ್ತು. ‘ಇದು ದೊಡ್ಡ ಪ್ರಮಾಣದ ವಂಚನೆಯ ಪ್ರಕರಣವಾಗಿದೆ’ಎಂದು ನ್ಯಾಯಾಲಯ ಹೇಳಿತ್ತು.

ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಇದು ಭಾರತದ ಜನರಿಗೆ ಮಾಡಿದ ವಂಚನೆ, ದೇಶದ ವಿರುದ್ಧದ ವಂಚನೆ. ಆ್ಯಂಟ್ರಿಕ್ಸ್- ದೇವಾಸ್ ಒಪ್ಪಂದದಲ್ಲಿ ವಂಚನೆ ಅಡಗಿರುವುದು ಸ್ಪಷ್ಟವಾಗಿತ್ತು. ಸುಪ್ರೀಂ ಕೋರ್ಟ್‌ನ ಆದೇಶವು ಕಾಂಗ್ರೆಸ್‌ನ ಅಧಿಕಾರ ದುರುಪಯೋಗಕ್ಕೆ ಪುರಾವೆಯಾಗಿದೆ’ಎಂದು ಅವರು ಕಿಡಿ ಕಾರಿದರು.

‘ಯುಪಿಎ ಇದನ್ನು ದುರಾಸೆಯಿಂದ ಮಾಡಿದೆ. ವಂಚಕರು ಪಾರಾಗದಂತೆ ನೋಡಿಕೊಳ್ಳಲು ನಮ್ಮ ಸರ್ಕಾರವು ಪ್ರತಿ ನ್ಯಾಯಾಲಯದಲ್ಲಿ ಹೋರಾಡುತ್ತಿದೆ. ನಾವು ತೆರಿಗೆದಾರರ ಹಣವನ್ನು ಉಳಿಸಲು ಹೋರಾಡುತ್ತಿದ್ದೇವೆ, ಇಲ್ಲದಿದ್ದರೆ ಆಂಟ್ರಿಕ್ಸ್-ದೇವಾಸ್ ವಂಚನೆಯ ಒಪ್ಪಂದಕ್ಕೆ ಹಣ ಹೋಗುತ್ತಿತ್ತು’ಎಂದು ಸೀತಾರಾಮನ್ ಹೇಳಿದರು.

2011ರಲ್ಲಿ ಒಪ್ಪಂದವನ್ನು ರದ್ದುಗೊಳಿಸಿ ಮಧ್ಯಸ್ಥಿಕೆ ಪ್ರಾರಂಭವಾದಾಗ, ಸರ್ಕಾರವನ್ನು ರಕ್ಷಿಸಲು ಮಧ್ಯಸ್ಥಿಕೆಗಾರನನ್ನು ನೇಮಿಸುವಂತೆ ಕೇಳಲಾಗಿತ್ತು. ಆದರೆ, ಸರ್ಕಾರ ಮಧ್ಯಸ್ಥಿಕೆಗಾರನನ್ನು ನೇಮಕ ಮಾಡಲಿಲ್ಲ ಎಂದು ಅವರು ಆರೋಪಿಸಿದರು.

2005ರ ಒಪ್ಪಂದದ ಅಡಿಯಲ್ಲಿ, ಆ್ಯಂಟ್ರಿಕ್ಸ್ ನಿರ್ಧರಿಸಿದ್ದ ಎರಡು ಉಪಗ್ರಹಗಳನ್ನು ನಿರ್ಮಿಸುವ, ಉಡಾವಣೆ ಮಾಡುವ ಮತ್ತು ನಿರ್ವಹಿಸುವ ಯೋಜನೆಯಡಿ ಉಪಗ್ರಹ ಟ್ರಾನ್ಸ್‌ಪಾಂಡರ್ ಸಾಮರ್ಥ್ಯದ ಶೇಕಡ 90 ರಷ್ಟನ್ನು ದೇವಾಸ್‌ಗೆ ಗುತ್ತಿಗೆಗೆ ನೀಡಬೇಕಿತ್ತು, ಈ ಮೂಲಕ ದೇಶದಲ್ಲಿ ಹೈಬ್ರಿಡ್ ಉಪಗ್ರಹ ಮತ್ತು ಭೂಮಂಡಲದ ಸಂವಹನ ಸೇವೆಗಳನ್ನು ಒದಗಿಸಲು ಯೋಜಿಸಲಾಗಿತ್ತು.

ಒಪ್ಪಂದವು ₹ 1,000 ಕೋಟಿ ಮೌಲ್ಯದ 70 ಎಂಎಚ್‌ಜೆಡ್ ಎಸ್-ಬ್ಯಾಂಡ್ ಸ್ಪೆಕ್ಟ್ರಂ ಅನ್ನು ಸಹ ಒಳಗೊಂಡಿತ್ತು. ಈ ಸ್ಪೆಕ್ಟ್ರಮ್ ಅನ್ನು ಭದ್ರತಾ ಪಡೆಗಳು ಮತ್ತು ಸರ್ಕಾರ ನಡೆಸುವ ಟೆಲಿಕಾಂ ಕಂಪನಿಗಳ ಬಳಕೆಗೆ ನಿರ್ಬಂಧಿಸಲಾಗಿದೆ.

ಭದ್ರತಾ ಕಾರಣಗಳನ್ನು ಮುಂದಿಟ್ಟು ಅಂದಿನ ಯುಪಿಎ ಸರ್ಕಾರ ಒಪ್ಪಂದವನ್ನು ರದ್ದುಗೊಳಿಸಿತ್ತು. 2016 ರಲ್ಲಿ, ದೇವಾಸ್‌ಗೆ ₹ 578 ಕೋಟಿ ಲಾಭವನ್ನು ಒದಗಿಸಿದ ಆರೋಪದಲ್ಲಿ ಇಸ್ರೋ ಮಾಜಿ ಮುಖ್ಯಸ್ಥ ಜಿ ಮಾಧವನ್ ನಾಯರ್ ಮತ್ತು ಇತರ ಅಧಿಕಾರಿಗಳ ವಿರುದ್ಧ ಸಿಬಿಐ ಆರೋಪ ಹೊರಿಸಿತ್ತು.

ದೇವಾಸ್‌ನ ವಿದೇಶಿ ಹೂಡಿಕೆದಾರರು ಅಂತರಾಷ್ಟ್ರೀಯ ನ್ಯಾಯಾಲಯಗಳ ಮೊರೆ ಹೋಗಿದ್ದರು. 2020ರಲ್ಲಿ,ಆಂಟ್ರಿಕ್ಸ್ $1.2 ಬಿಲಿಯನ್ ಪರಿಹಾರವನ್ನು ದೇವಾಸ್‌ಗೆ ಪಾವತಿಸಲು ಇಂಟರ್‌ ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ ನಿರ್ದೇಶಿಸಿತು. ಸುಪ್ರೀಂ ಕೋರ್ಟ್ ಈ ಆದೇಶವನ್ನು ತಡೆಹಿಡಿಯಿತು.

2021ರಲ್ಲಿ, ಕಂಪನಿಗಳ ಕಾಯಿದೆ ಅಡಿಯಲ್ಲಿ ದೇವಾಸ್ ಕಂಪನಿಯನ್ನು ಮುಚ್ಚಲು ಅರ್ಜಿಯನ್ನು ಸಲ್ಲಿಸುವಂತೆ ಸರ್ಕಾರವು ಆಂಟ್ರಿಕ್ಸ್‌ಗೆ ನಿರ್ದೇಶನ ನೀಡಿತ್ತು. ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ದೇವಾಸ್ ಮಲ್ಟಿಮೀಡಿಯಾವನ್ನು ಮುಚ್ಚುವ ಕುರಿತಾದ ಆದೇಶವನ್ನು ಪುರಸ್ಕರಿಸಿತ್ತು. ನಿನ್ನೆ ಸುಪ್ರೀಂ ಕೋರ್ಟ್ ಸಹ ಈ ಆದೇಶವನ್ನು ಎತ್ತಿ ಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT