ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳನ್ನು ಪುನರಾರಂಭಿಸಿ ಎಂದು ಹೇಳಲು ಸಾಧ್ಯವಿಲ್ಲ: ‘ಸುಪ್ರೀಂ’

ದೇಶದಾದ್ಯಂತ ಶಾಲೆ ಆರಂಭಿಸಲು ಕೋರಿ ಸಲ್ಲಿಸಿದ್ದ ದೆಹಲಿ ವಿದ್ಯಾರ್ಥಿಯ ಮನವಿ ನಿರಾಕರಣೆ
Last Updated 20 ಸೆಪ್ಟೆಂಬರ್ 2021, 19:40 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಡ್ ಎರಡನೇ ಅಲೆಯಿಂದ ದೇಶವು ಹೊರಬಂದಿದೆಯಾದರೂ, ಮುಂದಿನ ಅಲೆ ಯಾವಾಗ ಅಪ್ಪಳಿಸಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಹಾಗಾಗಿ, ರಾಜ್ಯ ಸರ್ಕಾರಗಳಿಗೆ ಶಾಲೆಗಳನ್ನು ಪುನರಾರಂಭಿಸಿ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

‘ಶಾಲೆಗಳನ್ನು ತೆರೆದು ಭೌತಿಕವಾಗಿ ತರಗತಿ ಆರಂಭಿಸುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ದೆಹಲಿಯ 12ನೇ ತರಗತಿ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿ ಪರಿಗಣಿಸಲುನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಹಾಗೂ ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠವು ನಿರಾಕರಿಸಿದೆ.

‘ಶಾಲೆಗಳನ್ನು ತೆರೆಯಿರಿ ಎಂದು ನಾವು ರಾಜ್ಯಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಮುಂದಿನ ಅಲೆಯ ದಾಳಿ ಹೇಗಿರುತ್ತದೆ ಎಂಬುದು ನಮಗೆ ತಿಳಿದಿಲ್ಲ. ಮಕ್ಕಳು ಶಾಲೆಗಳಿಗೆ ಹೋಗುವುದಾಗಿ ಒಪ್ಪಿಕೊಂಡರೂ, ಅದನ್ನು ರಾಜ್ಯಗಳೇ ನಿರ್ಧರಿಸಬೇಕು, ನ್ಯಾಯಾಲಯವು ಆಡಳಿತಾತ್ಮಕ ವಿಷಯಗಳನ್ನು ನಿರ್ಧರಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

‘ಕೋವಿಡ್‌ನಂಥ ಸಂಭವನೀಯ ಸೋಂಕಿಗೆ ಮಕ್ಕಳನ್ನು ಒಡ್ಡುವ ಬಗ್ಗೆ ರಾಜ್ಯ ಸರ್ಕಾರಗಳು ಎಚ್ಚರದಿಂದಿರಬೇಕು. ಲಸಿಕೆ ಹಾಕುವ ಕಾರ್ಯ ವೇಗವನ್ನು ಪಡೆದುಕೊಂಡಿದೆಯಾದರೂ, ಶಾಲಾ ಆರಂಭದ ಬಗ್ಗೆ ಸರ್ಕಾರಗಳೇ ನಿರ್ಧಾರ ತೆಗೆದುಕೊಳ್ಳಬೇಕಿದೆ. ನಮ್ಮ ಮುಂದೆ ಯಾವುದೇ ವೈಜ್ಞಾನಿಕ ಅಂಕಿ– ಅಂಶ ಇಲ್ಲ. ಅಲ್ಲದೇ ಮುಂದಿನ ಅಲೆಯ ಬಗ್ಗೆಯೂ ಸಂಪೂರ್ಣ ಮಾಹಿತಿ ಇಲ್ಲ’ ಎಂದು ಪೀಠವು ಹೇಳಿತು.

‘ಮಾಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲಾಗಿದೆ’ ಎನ್ನುವುದನ್ನು ನ್ಯಾಯಾಲಯದ ಗಮನಕ್ಕೆ ತಂದ, ಅರ್ಜಿದಾರರ ಪರ ವಕೀಲ ಅಮರ್ ಪ್ರೇಮ್ ಪ್ರಕಾಶ್ ಅವರು, ‘ಶಾಲೆಗಳನ್ನು ತೆರೆಯದಿರುವುದರಿಂದ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯಲ್ಲಿ ಏರಿಳಿತಗಳಾಗಿವೆ. ಲಸಿಕೆ ಹಾಕಿಸಿಕೊಂಡವರಿಗೆ ಸಾರ್ವಜನಿಕ ಸ್ಥಳಗಳನ್ನು ತೆರೆಯಲಾಗಿದೆ. ಆದರೆ, ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಏಕೆ ಆದ್ಯತೆ ನೀಡಬಾರದು’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘ಅರ್ಜಿದಾರ ವಿದ್ಯಾರ್ಥಿಯು ತನ್ನ ಅಧ್ಯಯನದ ಕಡೆಗೆ ಗಮನ ಕೇಂದ್ರೀಕರಿಸಬೇಕು. ಮಕ್ಕಳು ಇಂತಹ ಮನವಿಗಳನ್ನು ಸಲ್ಲಿಸುವುದನ್ನು ತಡೆಯಬೇಕು. ಏಕೆಂದರೆ ಎಲ್ಲಾ ರಾಜ್ಯಗಳಲ್ಲೂ ಒಂದೇ ರೀತಿಯ ಪರಿಸ್ಥಿತಿ ಇರುವುದಿಲ್ಲ. ಎಲ್ಲಾ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಿ ಎಂದು ನಾವು ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು ಹೇಳಿ, ಅರ್ಜಿಯನ್ನು ಹಿಂಪಡೆಯುವಂತೆ ಅರ್ಜಿದಾರರಿಗೆ ಸೂಚನೆ ನೀಡಿತು.

‘ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ನಿಜ. ಆದರೆ, ಮಕ್ಕಳಿಗೆ ಇನ್ನೂ ಲಸಿಕೆ ಬಂದಿಲ್ಲ. ಅನೇಕ ಶಿಕ್ಷಕರು ಕೂಡಾ ಲಸಿಕೆ ಹಾಕಿಸಿಕೊಳ್ಳದೇ ಇರಬಹುದು. ಇಂಥ ಸಂದರ್ಭದಲ್ಲಿ ಎಲ್ಲಾ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಿ ಎಂದು ನಾವು ಹೇಳಲು ಸಾಧ್ಯವಿಲ್ಲ. ಆಡಳಿತಾತ್ಮಕವಾದ ಸಮಸ್ಯೆಗಳೂ ಇವೆ’ ಎಂದು ಪೀಠ ತಿಳಿಸಿತು.

ಅಂಗವಿಕಲರಿಗೆ ಲಸಿಕೆ: ಪ್ರತಿಕ್ರಿಯೆ ಕೇಳಿದ ಸುಪ್ರೀಂ
ಅಶಕ್ತರು ಮತ್ತು ಅಂಗವಿಕಲರ ‘ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ‘ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಈ ಕುರಿತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿರುವ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠ, ‘ಅಂಗವಿಕಲರಿಗೆ ಲಸಿಕೆ ನೀಡಲು ಈವರೆಗೆ ಕೇಂದ್ರ ಕೈಗೊಂಡಿರುವ ಕ್ರಮಗಳು ಮತ್ತು ಹೊಸ ಕ್ರಮಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಿರುವ ಕುರಿತು ಮಾಹಿತಿ ನೀಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೇಳಿದೆ.

ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಇವರಾ ಫೌಂಡೇಷನ್‌ ಸ್ವಯಂ ಸೇವಾ ಸಂಸ್ಥೆ ಪರ ಹಾಜರಾಗಿದ್ದ ವಕೀಲ ಪಂಕಜ್‌ ಸಿನ್ಹಾ, ‘ಮನೆ ಮನೆಗೆ ತೆರಳಿ ಕೋವಿಡ್‌ ಲಸಿಕೆ ನೀಡುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಯನ್ನು ನೀಡಬಹುದು‘ ಎಂದು ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿರುವ ದಾಖಲೆ ಸೇರಿದಂತೆ ಎರಡು ದಾಖಲೆಯನ್ನು ಉಲ್ಲೇಖಿಸಿದರು.

ಹೆಚ್ಚುವರಿ ಲಸಿಕೆ ರಫ್ತು– ಕೇಂದ್ರ
‘ಲಸಿಕೆ ಮೈತ್ರಿ’ ಯೋಜನೆಯಡಿ ಭಾರತವು ಹೆಚ್ಚುವರಿಯಾಗಿ ಲಭ್ಯವಿರುವ ಕೋವಿಡ್ ಲಸಿಕೆಗಳ ರಪ್ತು ಪ್ರಕ್ರಿಯೆಗೆ ಮುಂದಿನ ತಿಂಗಳು ಚಾಲನೆ ನೀಡಲಿದೆ.

‘ಜಗತ್ತಿನ ಲಸಿಕೆ ಬೇಡಿಕೆ ಈಡೇರಿಸಲು ಕೋವ್ಯಾಕ್ಸ್‌ ಬದ್ಧತೆಯಂತೆ ರಫ್ತು ಮಾಡಲಾಗುತ್ತದೆ. ಆದರೆ, ದೇಶದ ಜನರಿಗೆ ಲಸಿಕೆ ನೀಡುವುದೇ ಮೊದಲ ಆದ್ಯತೆ’ ಎಂದು ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT