ಮಂಗಳವಾರ, ಜನವರಿ 31, 2023
19 °C

ಬಲವಂತದ ಮತಾಂತರ ಸಂವಿಧಾನ ವಿರೋಧಿ: ಸುಪ್ರೀಂ ಕೋರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಲವಂತದ ಮತಾಂತರವು ಗಂಭೀರವಾದ ವಿಚಾರವಾಗಿದ್ದು, 'ಸಂವಿಧಾನ ವಿರೋಧಿ' ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಬೆದರಿಕೆ ಅಥವಾ ಆಮಿಷಗಳನ್ನು ಒಡ್ಡುವ ಮೂಲಕ ಜನರನ್ನು ವಂಚಿಸಿ ಮತಾಂತರಗೊಳಿಸುವುದಕ್ಕೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಅಶ್ವಿನಿ ಕುಮಾರ್‌ ಉಪಾದ್ಯಾಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

ಈ ವೇಳೆ, ಮತಾಂತರಕ್ಕೆ ಸಂಬಂಧಿಸಿದ ಮಾಹಿತಿಯನ್ನು ರಾಜ್ಯಗಳಿಂದ ಸಂಗ್ರಹಿಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ ಕೇಂದ್ರ ಸರ್ಕಾರವು ಸಮಯಾವಕಾಶ ನೀಡುವಂತೆ ಮನವಿ ಮಾಡಿತು.

ನ್ಯಾಯಮೂರ್ತಿ ಎಂ.ಆರ್‌.ಶಾ ಮತ್ತು ಸಿ.ಟಿ.ರವಿಕುಮಾರ್‌ ಅವರಿದ್ದ ಪೀಠದೆದುರು ಹಾಜರಾದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರು, 'ನಾವು ರಾಜ್ಯಗಳಿಂದ ಮಾಹಿತಿ ಕಲೆಹಾಕುತ್ತಿದ್ದೇವೆ. ನಮಗೆ ಒಂದು ವಾರದ ಸಮಯ ನೀಡಿ' ಎಂದು ಕೋರಿದರು.

ಅರ್ಜಿಯ ನಿರ್ವಹಣೆ ಕುರಿತು ವಕೀಲರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೀಠ, 'ಅಷ್ಟು ತಾಂತ್ರಿಕವಾಗಿ ಇರಬೇಡಿ. ಒಂದು ಕಾರಣದಿಂದಾಗಿ ಹಾಗೂ ಪರಿಹಾರ ಕಂಡುಕೊಳ್ಳುವ ಸಲುವಾಗಿ ನಾವು ಇಲ್ಲಿದ್ದೇವೆ. ಸರಿಪಡಿಸುವ ಉದ್ದೇಶದಿಂದ ಸೇರಿದ್ದೇವೆ. ನಿಮ್ಮನ್ನು ವಿರೋಧಿಸುತ್ತಿದ್ದೇವೆ ಎಂದು ಭಾವಿಸಬೇಡಿ. ಇದು ಗಂಭೀರವಾದ ವಿಚಾರ. ಅಂತಿಮವಾಗಿ ಈ ವಿಚಾರವು (ಬಲವಂತದ ಮತಾಂತರವು) ನಮ್ಮ ಸಂವಿಧಾನಕ್ಕೆ ವಿರೋಧಿಯಾದದ್ದು. ಭಾರತದಲ್ಲಿ ಬದುಕುವವರು ಈ ದೇಶದ ಸಂಸ್ಕೃತಿಗೆ ಅನುಸಾರವಾಗಿ ನಡೆಯಬೇಕು' ಎಂದು ಹೇಳಿದೆ.

ಹಾಗೆಯೇ, ಮುಂದಿನ ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು