ಸೋಮವಾರ, ಜೂನ್ 27, 2022
24 °C

ಅಜಿತ್ ಪವಾರ್ ಅವರೊಂದಿಗೆ ಸೇರಿ ಸರ್ಕಾರ ರಚಿಸಿದ್ದು ತಪ್ಪು: ದೇವೇಂದ್ರ ಫಡಣವಿಸ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರೊಂದಿಗೆ ಸೇರಿಕೊಂಡು ರಾಜ್ಯದಲ್ಲಿ ಅಲ್ವಾವಧಿಯ 80 ಗಂಟೆಗಳ ಸರ್ಕಾರವನ್ನು ರಚಿಸಿದ್ದು ತಪ್ಪು. ಆದರೆ ಅದಕ್ಕಾಗಿ ವಿಷಾದವಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ತಿಳಿಸಿದ್ದಾರೆ.

'ನಾನು ವಿಷಾದಿಸುವುದಿಲ್ಲ ಆದರೆ ನಾವು ಅಂತಹ ಸರ್ಕಾರವನ್ನು ರಚಿಸಬಾರದಿತ್ತು. ಇದು ತಪ್ಪು' ಎಂದು ಮರಾಠಿ ದಿನಪತ್ರಿಕೆ ಲೋಕಸತ್ತ ಸಂಪಾದಕರೊಂದಿಗಿನ ಆನ್‌ಲೈನ್ ಸಂವಾದದ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹೇಳಿದ್ದಾರೆ.

ನವೆಂಬರ್ 23, 2019 ರಂದು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ಬಿಜೆಪಿ ಅಲ್ಲದ ಸರ್ಕಾರವನ್ನು ರಚಿಸಲು ಕಸರತ್ತು ನಡೆಸುತ್ತಿರುವ ಮಧ್ಯೆಯೇ, ಫಡಣವಿಸ್ ಮತ್ತು ಪವಾರ್ ಅವರು ಮುಂಜಾನೆಯೇ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.

ಮತದಾನ ಪೂರ್ವದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ನಂತರ 'ನಿರಾಕರಿಸಿದ್ದನ್ನು' ಉಲ್ಲೇಖಿಸಿದ ಅವರು, 'ಇದು (ಅಜಿತ್ ಪವಾರ್ ಅವರೊಂದಿಗೆ ಸರ್ಕಾರ ರಚಿಸಿದ್ದು) ತಪ್ಪಾಗಿದ್ದರೂ, ನೀವು ಬೆನ್ನಿಗೆ ಇರಿದಾಗ, ನಾವು ರಾಜಕೀಯದಲ್ಲಿ ಜೀವಂತವಾಗಿರಲೇಬೇಕಾಗುತ್ತದೆ' ಎಂದು ತಿಳಿಸಿದ್ದಾರೆ.

'ರಾಜಕೀಯದಲ್ಲಿ ಜೀವಂತವಾಗಿರಲು ನೀವು ಮಾಡಬೇಕಾದುದನ್ನು ಮಾಡಬೇಕು. ಆಗ ನಿಮ್ಮ ಬೆನ್ನಿಗೆ ಚೂರಿ ಇರಿದಾಗ, ನೀವು ಅವರಿಗೆ ಸೂಕ್ತ ಪ್ರತಿಕ್ರಿಯೆಯನ್ನು ನೀಡಬೇಕಾಗುತ್ತದೆ'. ಪವಾರ್ ಅವರೊಂದಿಗೆ ಸರ್ಕಾರ ರಚಿಸುವ ನಿರ್ಧಾರವು ಕೋಪವನ್ನು ಒಳಗೊಂಡ 'ಮಿಶ್ರ ಭಾವನೆಗಳ' ಪರಿಣಾಮವಾಗಿತ್ತು' ಎಂದು ಅವರು ಹೇಳಿದರು.

'ಆದ್ದರಿಂದ ಒಂದು ಅವಕಾಶ ಬಂದಾಗ, ನಾವು ಅದನ್ನು ಬಳಸಿಕೊಂಡಿದ್ದೇವೆ. ಆಗ ನಾವು ಮಾಡಿದ್ದು ನಮ್ಮ ಬೆಂಬಲಿಗರು ಮತ್ತು ಬಿಜೆಪಿ ಬೆಂಬಲಿಗರಿಗೂ ಇಷ್ಟವಾಗಿರಲಿಲ್ಲ ಎಂದು ಈಗ ನಾನು ಹೇಳಬಲ್ಲೆ' ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಫಡಣವಿಸ್ ಹೇಳಿದ್ದಾರೆ.

'ನಮ್ಮ ಬೆಂಬಲಿಗರ ದೃಷ್ಟಿಯಲ್ಲಿ ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ. ನಾವು ಏನು ಮಾಡಿದೆವೋ ಅದನ್ನು ನಾವು ಪ್ರಯತ್ನಿಸದಿದ್ದಲ್ಲಿ ಉತ್ತಮವಾಗಿರುತ್ತಿತ್ತು. ಆದರೆ ಆ ಸಮಯದಲ್ಲಿ ಅದು ಸರಿಯಾದ ನಿರ್ಧಾರ ಎಂದು ನಾನು ಭಾವಿಸಿದೆ' ಎಂದು ತಿಳಿಸಿದ್ದಾರೆ.

ತರಾತುರಿಯಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅಜಿತ್ ಪವಾರ್ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ ಮೂರು ದಿನಗಳ ನಂತರ 2019 ರ ನವೆಂಬರ್‌ನಲ್ಲಿ ಫಡಣವಿಸ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು