ಭಾನುವಾರ, ಮೇ 16, 2021
22 °C

ರಾಜ್ಯಗಳಿಗೆ ಲಸಿಕೆ ಪೂರೈಕೆ: ಮಾನದಂಡಕ್ಕೆ ಮಹಾರಾಷ್ಟ್ರ ಆರೋಗ್ಯ ಸಚಿವ ಟೋಪೆ ಒತ್ತಾಯ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ರಾಜ್ಯದ ಜನಸಂಖ್ಯೆ, ಕೊರೊನಾ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆಯಂತಹ ಅಂಶಗಳನ್ನು ಆಧರಿಸಿ, ಕೋವಿಡ್‌ ಲಸಿಕೆ ಹಂಚಿಕೆ ಮಾಡಲು ಮಾನದಂಡಗಳನ್ನು ರೂಪಿಸುವಂತೆ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಶ್, ‘ಜನಸಂಖ್ಯೆ ಮತ್ತು ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರಕ್ಕಿಂತ ಕಡಿಮೆ ಇರುವ ಅನೇಕ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ನೀಡಲಾಗಿದೆ‘ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ಇತ್ತೀಚೆಗೆ 3.5 ಕೋಟಿ ಡೋಸೇಜ್‌ಗಳಷ್ಟು ಲಸಿಕೆಯನ್ನು ಕಳುಹಿಸಿದೆ. ಇಲ್ಲಿವರೆಗೂ ನಾವು 7 ಲಕ್ಷ ಡೋಸೇಜ್‌ಗಳನ್ನು ಪಡೆದುಕೊಂಡಿದ್ದೇವೆ. ನಾವು ಒತ್ತಡ ಹಾಕಿದ ನಂತರ ಇನ್ನೂ 10 ಲಕ್ಷ ಡೋಸೆಜ್‌ಗಳಷ್ಟು ಲಸಿಕೆ ಪೂರೈಸಲು ಕೇಂದ್ರ ಒಪ್ಪಿದೆ‘ ಎಂದರು.

‘ಮಹಾರಾಷ್ಟ್ರದ ಜನಸಂಖ್ಯೆ 12 ಕೋಟಿಗೂ ಹೆಚ್ಚಿದೆ. ದೇಶದಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳ ಶೇ 60ರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲಿವೆ. ಪರೀಕ್ಷೆ ಮಾಡುವುದನ್ನು ಹೆಚ್ಚಿಸಿರುವ ಕಾರಣ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ‘ ಎಂದು ಹೇಳಿದರು.

‘ನಾವು ನಿತ್ಯ 6 ಲಕ್ಷ ಮಂದಿಗೆ ಲಸಿಕೆ ಹಾಕುವಷ್ಟು ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದೇವೆ. ವಾರಕ್ಕೆ 40 ಲಕ್ಷ ಮಂದಿಗೆ ಲಸಿಕೆ ಹಾಕುತ್ತೇವೆ. ಅಂದರೆ ತಿಂಗಳಿಗೆ 1.60 ಕೋಟಿ ಜನರಿಗೆ ಲಸಿಕೆ ಹಾಕಬಹುದು. ಈ ಅಂಕಿ ಅಂಶಕ್ಕೆ ಅನುಗುಣವಾಗಿ ನಮ್ಮ ರಾಜ್ಯಕ್ಕೆ ಲಸಿಕೆ ನೀಡಬೇಕು. ಎಲ್ಲಿ ಪ್ರಕರಣಗಳು ಹೆಚ್ಚಾಗಿವೆಯೋಯೇ, ಅಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಗತ್ಯವಿದೆ. ಅದಕ್ಕಿರುವ ಏಕೈಕ ದಾರಿ ಎಂದರೆ ಲಸಿಕೆ ನೀಡುವ ಪ್ರಮಾಣವನ್ನು ಹೆಚ್ಚಿಸುವುದು‘ ಎಂದು ಹೇಳಿದರು.

‘ಇವತ್ತು 8 ಲಕ್ಷ ಮಂದಿಗೆ ಹಾಕುವಷ್ಟು ಲಸಿಕೆ ಇದೆ. ಸದ್ಯ ನಮಗೆ ಒಂದು ದಿನಕ್ಕೆ 4 ಲಕ್ಷ ಡೋಸೇಜ್‌ ನಷ್ಟು ಲಸಿಕೆ ಪೂರೈಕೆಯಾಗುತ್ತಿದೆ. ಹೀಗೆ ಪ್ರತಿ ದಿನದ ಅಗತ್ಯಕ್ಕೆ ತಕ್ಕಂತೆ ಲಸಿಕೆ ಪೂರೈಸುತ್ತಿದ್ದರೆ ರಾಜ್ಯದ ಇತರ ಭಾಗಗಳಿಗೆ, ಸರಿಯಾದ ಸಮಯಕ್ಕೆ ಲಸಿಕೆಗಳನ್ನು ತಲುಪಿಸುವುದಾದರೂ ಹೇಗೆ‘ ಎಂದು ರಾಜೇಶ್ ಪ್ರಶ್ನಿಸಿದರು.

‌ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನಾ ಮುಖಂಡ ಸಂಜಯ್ ರಾವುತ್‌, ‘ಎಲ್ಲಾ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಬೇಕು‘ ಎಂದು ಹೇಳಿದರು.

ಮಹಾರಾಷ್ಟ್ರದ ನಾಂದೇಡ್‌ನ ಶಾಸಕರೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಸೋಂಕು ದೃಢಪಟ್ಟ ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗವತ್‌ ಅವರನ್ನು ಆಸ್ಪತ್ರೆಗೆ ದಾಖಲಿಲಸಲಾಗಿದೆ. ಕೊರೊನಾ ಸೋಂಕು ಎಲ್ಲ ವರ್ಗವನ್ನೂ ಹೈರಾಣಾಗಿಸಿದೆ.  ಈ ಸಾಂಕ್ರಾಮಿಕ ರೋಗ ನಿಭಾಯಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ವಿರೋಧ ಪಕ್ಷಗಳು, ಆಡಳಿತ ಪಕ್ಷದೊಂದಿಗೆ ಕೈ ಜೋಡಿಸಿ ಸಹಕರಿಸಬೇಕು‘ ಎಂದು ಹೇಳಿದರು.

‘ವಿವಾದಕ್ಕೆ ಆಸ್ಪದ ನೀಡದೇ, ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಲಸಿಕೆಯನ್ನು ಪೂರೈಸಬೇಕು‘ ಎಂದು ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು