ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ಕೋವಿಡ್ ಲಸಿಕೆ ಎಲ್ಲರಿಗೂ ಉಚಿತ: ಪ್ರಧಾನಿ ಮೋದಿ

ರಾಜ್ಯ ಸರ್ಕಾರಗಳ ಪಾಲಿನ ಲಸಿಕೆಯನ್ನೂ ಕೇಂದ್ರ ಸರ್ಕಾರವೇ ಖರೀದಿಸಿ ಆಯಾ ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ: ಪ್ರಧಾನಿ
Last Updated 7 ಜೂನ್ 2021, 21:08 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19ರ ಲಸಿಕೆ ನೀತಿಯಲ್ಲಿನ ಗೊಂದಲ ಪರಿಹರಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಹೆಜ್ಜೆ ಇರಿಸಿದೆ. 18 ವರ್ಷಕ್ಕಿಂತ ಮೇಲಿನ ಎಲ್ಲರಿಗೂ ಕೋವಿಡ್‌ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಘೋಷಿಸಿದ್ದಾರೆ. ಈ ಲಸಿಕೆಗಳನ್ನು ರಾಜ್ಯಗಳಿಗೆ ಕೇಂದ್ರವು ಪೂರೈಸಲಿದೆ. ಜೂನ್‌ 21ರಿಂದ ಇದು ಜಾರಿಗೆ ಬರಲಿದೆ.

ಭಾರತದಲ್ಲಿ ಲಸಿಕೆ ತಯಾರಿಸುತ್ತಿರುವ ಕಂಪನಿಗಳಿಂದ ಶೇ 75ರಷ್ಟು ಡೋಸ್‌ ಲಸಿಕೆಗಳನ್ನು ಕೇಂದ್ರ ಸರ್ಕಾರವು ಖರೀದಿಸಲಿದೆ. ರಾಜ್ಯ ಸರ್ಕಾರಗಳಿಗೆ ನಿಗದಿ ಮಾಡಲಾಗಿದ್ದ ಶೇ 25ರಷ್ಟು ಡೋಸ್‌ ಲಸಿಕೆಗಳು ಇದರಲ್ಲಿ ಸೇರಿವೆ. ಉಳಿದ ಶೇ 25ರಷ್ಟು ಡೋಸ್‌ ಲಸಿಕೆಗಳು ಖಾಸಗಿ ಆಸ್ಪತ್ರೆಗಳಿಗೆ ಈಗಿನಂತೆಯೇ ಲಭ್ಯವಾಗಲಿವೆ ಎಂದು ಪ್ರಧಾನಿಯವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ.

ಲಸಿಕೆಯ ನಿಗದಿತ ದರದ ಜತೆಗೆ, ಗರಿಷ್ಠ ₹150 ಸೇವಾ ಶುಲ್ಕವನ್ನುಖಾಸಗಿ ಆಸ್ಪತ್ರೆಗಳು ಪಡೆಯಬಹುದು.

ಏಳು ಸಂಸ್ಥೆಗಳು ಕೋವಿಡ್‌ ವಿರುದ್ಧದ ಲಸಿಕೆಯನ್ನು ದೇಶದಲ್ಲಿ ತಯಾರಿಸುತ್ತಿವೆ. ಮೂರು ಲಸಿಕೆಗಳ ಪ್ರಯೋಗವು ಅಂತಿಮ ಹಂತಕ್ಕೆ ಬಂದಿವೆ. ಬೇರೆ ದೇಶಗಳಿಂದ ಲಸಿಕೆ ಖರೀದಿಸುವ ಪ್ರಕ್ರಿಯೆಗೆ ವೇಗ ತುಂಬಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಇದ್ದ ಲಸಿಕೆ ನೀತಿಯ ಪ್ರಕಾರ, ಕಂಪನಿಗಳು ತಯಾರಿಸುವ ಲಸಿಕೆಗಳ ಪೈಕಿ ಶೇ 25ರಷ್ಟನ್ನು ರಾಜ್ಯ ಸರ್ಕಾರಗಳು ನೇರವಾಗಿ ಖರೀದಿ ಮಾಡಬೇಕಿತ್ತು. 18–44ರ ವಯೋಮಾನದವರಿಗೆ ಹಾಕಲು ಈ ಲಸಿಕೆಗಳನ್ನು ಬಳಸಬೇಕಿತ್ತು.ಆದರೆ, ಜಾಗತಿಕ ಟೆಂಡರ್‌ ಕರೆದರೂ ಲಸಿಕೆ ಖರೀದಿ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಕೇಂದ್ರವೇಲಸಿಕೆಗಳನ್ನು ಪೂರೈಸಬೇಕು ಎಂದು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿಗೆ ಪತ್ರ ಬರೆದಿದ್ದರು. ಕೇಂದ್ರವು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.

ಬಿಜೆಪಿ–ವಿಪಕ್ಷ ಜಟಾಪಟಿ:

ಜನವರಿ 16ರಿಂದ ಏಪ್ರಿಲ್ 30ರವರೆಗೆ ತಯಾರಾದ ಎಲ್ಲ ಲಸಿಕೆಗಳನ್ನೂ ಕೇಂದ್ರವೇ ಖರೀದಿಸಿತ್ತು. ಲಸಿಕೆ ಖರೀದಿಯನ್ನು ವಿಕೇಂದ್ರೀಕರಿಸಬೇಕು ಎಂದು ರಾಜ್ಯಗಳು ಬೇಡಿಕೆ ಇಟ್ಟ ಕಾರಣಕ್ಕೆ ಶೇ 25ರಷ್ಟು ಡೋಸ್‌ ಲಸಿಕೆ ಖರೀದಿಗೆ ರಾಜ್ಯಗಳಿಗೆ ಅವಕಾಶ ಕೊಡಲಾಯಿತು ಎಂದು ಪ್ರಧಾನಿ ಹೇಳಿದ್ದಾರೆ. ಆದರೆ, ವಿರೋಧ ಪಕ್ಷಗಳು ಈ ವಾದವನ್ನು ತಿರಸ್ಕರಿಸಿವೆ. ಈಗಿನ ಗೊಂದಲಮಯ ಸ್ಥಿತಿಗೆ ಕೇಂದ್ರವೇ ಹೊಣೆ ಎಂದಿವೆ.

‘ಲಸಿಕೆಯನ್ನು ಕೇಂದ್ರೀಕೃತವಾಗಿ ಖರೀದಿ ಮಾಡಬೇಕು ಮತ್ತು 18–44ರ ವಯೋಮಾನದವರಿಗೆ ಉಚಿತವಾಗಿ ಹಾಕಿಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ಒಪ್ಪುವ ಮುನ್ನ ಪ್ರಧಾನಿಯವರು ದೇಶದ ಜನರ ಮೇಲೆ ಭಾರಿ ಹೊರೆ ಹೊರಿಸಿದ್ದಾರೆ. ಪ್ರಧಾನಿಯ ನಿರಂತರ ಸುಳ್ಳುಗಳಿಗೆ ಲಸಿಕೆಯೇ ಇಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಪ್ರಧಾನಿಯವರು ತಮ್ಮ ಗೊಂದಲಮಯ ಮತ್ತು ತಾರತಮ್ಯದಿಂದ ಕೂಡಿದ ಲಸಿಕೆ ನೀತಿಯನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಮತ್ತು ಬಿಜೆಪಿಯೇತರ ಪಕ್ಷಗಳ ಸರ್ಕಾರ ಇರುವ ರಾಜ್ಯಗಳ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.

ಇದನ್ನು ಸರ್ಕಾರ ಮೊದಲೇ ಮಾಡಬಹುದಾಗಿತ್ತು. ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶದಿಂದಾಗಿಯೇ ಎಲ್ಲರಿಗೂ ಉಚಿತ ಲಸಿಕೆ ಸಿಗುವಂತಾಯಿತು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಧಾನಿಯ ಕ್ರಮವನ್ನು ಶ್ಲಾಘಿಸಿದ್ದಾರೆ. ಬಿಕ್ಕಟ್ಟುಗಳು ಕಾಣಿಸಿಕೊಂಡಾಗಲೆಲ್ಲ ಮೋದಿ ಅವರು ಮುಂಚೂಣಿಯಲ್ಲಿ ನಿಂತಿದ್ದಾರೆ ಎಂದಿದ್ದಾರೆ.

ದೀಪಾವಳಿವರೆಗೂ ಉಚಿತ ಪಡಿತರ ವಿಸ್ತರಣೆ:

ಕೋವಿಡ್‌-19 ಸಂಕಷ್ಟದಲ್ಲಿ ದೇಶದ ಬಡವರಿಗೆ ಉಚಿತ ಪಡಿತರ ನೀಡುವ ಯೋಜನೆಯನ್ನು ನವೆಂಬರ್‌ವರೆಗೂ ವಿಸ್ತರಿಸಿದ್ದೇವೆ ಎಂದು ಮೋದಿ ಅವರು ಪ್ರಕಟಿಸಿದ್ದಾರೆ.

‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ನಿಗದಿ ಮಾಡಲಾದ ಪಡಿತರದ ಜತೆಗೆ, ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ನೀಡುವ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್ ಅನ್ನ ಯೋಜನೆಯನ್ನು ದೀಪಾವಳಿವರೆಗೆ ವಿಸ್ತರಿಸಿದ್ದೇವೆ’ ಎಂದು ಮೋದಿ ಘೋಷಿಸಿದ್ದಾರೆ.

2020ರ ಮಾರ್ಚ್‌ನಲ್ಲಿ ಕೋವಿಡ್‌ ಲಾಕ್‌ಡೌನ್ ಘೋಷಿಸಿದ ನಂತರ ಮೂರು ತಿಂಗಳ ಅವಧಿಗಾಗಿ ಈ ಯೋಜನೆಯನ್ನು ಆರಂಭಿಸಲಾಗಿತ್ತು. ಆದರೆ ನಂತರ ಯೋಜನೆಯನ್ನು ನವೆಂಬರ್‌ವರೆಗೂ ವಿಸ್ತರಿಸಲಾಗಿತ್ತು. ಈಗ ದೇಶದಾದ್ಯಂತ ಕೋವಿಡ್‌ನ ಎರಡನೇ ಅಲೆಯಲ್ಲಿ ಭಾಗಶಃ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಮೇ ಮತ್ತು ಜೂನ್‌ ತಿಂಗಳಿಗಾಗಿ ಈ ಯೋಜನೆಯನ್ನು ಪುನಃ ಆರಂಭಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT