ಸೋಮವಾರ, ಜುಲೈ 4, 2022
25 °C

'ಜಿ-23 ನಾಯಕರು' ಕಾಂಗ್ರೆಸ್ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ: ಖರ್ಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ (ಸಿಡಬ್ಲ್ಯುಸಿ) ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಸೇರಿ ಎಲ್ಲ ವಿಷಯಗಳನ್ನು ಚರ್ಚಿಸಿದ ನಂತರವೂ ಸಭೆ ನಡೆಸುವುದನ್ನು ಮುಂದುವರೆಸುವ ಮೂಲಕ ಜಿ-23 ನಾಯಕರು ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆರೋಪಿಸಿದ್ದಾರೆ.

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ, ಏಕೆಂದರೆ 'ಬೀದಿಗಳಿಂದ ಹಿಡಿದು ರಾಷ್ಟ್ರ ರಾಜಧಾನಿಯವರೆಗೆ' ಇಡೀ ಕಾಂಗ್ರೆಸ್ ಪಕ್ಷ ಅವರೊಂದಿಗಿದೆ ಎಂದಿದ್ದಾರೆ.

ಭಾನುವಾರ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಸೋನಿಯಾ ಗಾಂಧಿ ಅವರ ಮೇಲೆ ಸಂಪೂರ್ಣ ನಂಬಿಕೆಯನ್ನಿಟ್ಟು, ಅವರೇ ಅಧ್ಯಕ್ಷರಾಗಿ ಮುಂದುವರಿಯಲು ಕೇಳಲಾಗಿತ್ತು. ಹೀಗಿದ್ದರೂ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರ ನಿವಾಸದಲ್ಲಿ ಸಭೆ ನಡೆಸಿರುವ ಜಿ-23 ನಾಯಕರ ಮೇಲೆ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಅವರು ಬೇಕಿದ್ದರೆ 100 ಸಭೆಗಳನ್ನು ಮಾಡಲಿ. ಸೋನಿಯಾ ಗಾಂಧಿ ಅವರನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಬೀದಿಯಿಂದ ದೆಹಲಿಯವರೆಗೂ ಕಾಂಗ್ರೆಸ್ ಪಕ್ಷದ ಹಲವಾರು ಜನರು ಅವರ ಜೊತೆಗಿದ್ದಾರೆ. ಈ ಜನರು ಭೇಟಿಯಾಗುವುದು ಮತ್ತು ಭಾಷಣ ಮಾಡುವುದನ್ನು ಮುಂದುವರಿಸಲಿ' ಎಂದು ಅವರು ಹೇಳಿದ್ದಾರೆ.

'ಸಿಡಬ್ಲ್ಯುಸಿಯಲ್ಲಿ ಚರ್ಚಿಸಿದ ಎಲ್ಲಾ ಕ್ರಮಗಳನ್ನು ಸೋನಿಯಾ ಗಾಂಧಿ ತೆಗೆದುಕೊಳ್ಳುತ್ತಿದ್ದಾರೆ. ಅವರು (ಜಿ-23 ನಾಯಕರು) ಇನ್ನೂ ಈ ರೀತಿಯೇ ಮಾತನಾಡುತ್ತಿದ್ದಾರೆ ಎಂದರೆ, ಅವರು ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ' ಎಂದು ಖರ್ಗೆ ಕಿಡಿಕಾರಿದ್ದಾರೆ.

ಪಕ್ಷದ ನಾಯಕತ್ವ ಬದಲಾಗಬೇಕು, ರಚನಾತ್ಮಕವಾಗಿಯೂ ಪಕ್ಷದಲ್ಲಿ ಕೆಲವು ಬದಲಾವಣೆಗಳು ಆಗಬೇಕು ಎಂದು ಒತ್ತಾಯಿಸಿ 2020ರ ಆಗಸ್ಟ್‌ ತಿಂಗಳಲ್ಲಿ ಪಕ್ಷದ 23 ನಾಯಕರ ಗುಂಪು (ಜಿ–23) ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿತ್ತು. ಅದಾಗಿ ಸ್ವಲ್ಪ ಕಾಲ ಎಲ್ಲವೂ ಶಾಂತವಾದಂತೆ ಕಂಡುಬಂದರೂ ಐದು ವಿಧಾನಸಭೆಗಳಿಗೆ ನಡೆದ ಚುನಾವಣಾ ಫಲಿತಾಂಶದ ಬಳಿಕ ಮತ್ತೆ ನಾಯಕತ್ವ ಬಿಕ್ಕಟ್ಟಿನ ವಿಚಾರ ಮುನ್ನೆಲೆಗೆ ಬಂದಿದೆ. ಜಿ–23 ನಾಯಕರು ಜಮ್ಮುವಿನಲ್ಲಿ ಸಭೆ ಸೇರಿ ‘ಕಾಂಗ್ರೆಸ್‌ ದುರ್ಬಲವಾಗಿದೆ’ ಎಂದಿದ್ದಾರೆ.

ಓದಿ...  ‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾಗೆ ಕಾಂಗ್ರೆಸ್ ವಿರೋಧ ಏಕೆ: ಬಿಜೆಪಿ ಹೇಳಿದ್ದೇನು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು