ದೆಹಲಿಯಲ್ಲಿ ಜಿ 20 ಶೃಂಗಸಭೆ: ಸಾವಿರಕ್ಕೂ ಹೆಚ್ಚು ಭಿಕ್ಷುಕರ ಸ್ಥಳಾಂತರ

ನವದೆಹಲಿ: ಇಲ್ಲಿನ ಕಾಶ್ಮೀರಿ ಗೇಟ್ ಅಂತರರಾಜ್ಯ ಬಸ್ ಟರ್ಮಿನಲ್ (ಐಟಿಬಿಟಿ) ಸಮೀಪದ ಹನುಮಾನ್ ಮಂದಿರ ಪ್ರದೇಶದಲ್ಲಿರುವ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಭಿಕ್ಷುಕರಿಗೆ ರಾತ್ರಿ ತಂಗುದಾಣ ವ್ಯವಸ್ಥೆ ಕಲ್ಪಿಸಿ ಜನವರಿ ಮೊದಲ ವಾರದಲ್ಲಿ ಸ್ಥಳಾಂತರಿಸಲಾಗುವುದು. ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆಯಲಿರುವ ಜಿ–20 ಶೃಂಗಸಭೆಯ ನಿಮಿತ್ತ ಈ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹನುಮಾನ್ ಮಂದಿರ ಪ್ರದೇಶದಲ್ಲಿನ ಭಿಕ್ಷುಕರನ್ನು ತೆರವುಗೊಳಿಸಿ, ಅವರಿಗೆ ಇತರೆಡೆ ಆಶ್ರಯ ಕಲ್ಪಿಸುವಂತೆ ಕೋರಿ ಸರ್ಕಾರವು ಡಿ. 15ರಂದು ದೆಹಲಿಯ ನಗರ ಆಶ್ರಯ ಸುಧಾರಣಾ ಮಂಡಳಿಯನ್ನು (ಡಿಯುಎಸ್‌ಐಬಿ) ಕೇಳಿಕೊಂಡಿತ್ತು.
‘ಭಿಕ್ಷುಕರ ಸ್ಥಳಾಂತರಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಲು ಡಿಯುಎಸ್‌ಐಬಿಯ ಮುಖ್ಯ ಎಂಜಿನಿಯರ್ ನೇತೃತ್ವದಲ್ಲಿ ನಾಲ್ಕು ಸದಸ್ಯರ ಸಮಿತಿ ರಚಿಸಲಾಗಿದೆ. ಜನವರಿ ಮೊದಲ ವಾರದಲ್ಲಿ ಭಿಕ್ಷುಕರನ್ನು ಸ್ಥಳಾಂತರಿಸಲಾಗುವುದು’ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ವಿರೋಧ: ಭಿಕ್ಷುಕರನ್ನು ಸ್ಥಳಾಂತರಿಸುವುದಕ್ಕೆ ದೆಹಲಿಯ ನಿರಾಶ್ರಿತರ ಕಲ್ಯಾಣ ಪರ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ. ಈ ರೀತಿಯ ಸ್ಥಳಾಂತರವು 2018ರಲ್ಲಿ ದೆಹಲಿ ಹೈಕೋರ್ಟ್ ನೀಡಿರುವ ಆದೇಶದ ಉಲ್ಲಂಘನೆ ಎಂದೂ ಎನ್‌ಜಿಒಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.