ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ ನೀಡಲು ಒಂದು ಕೋಟಿ ಆರೋಗ್ಯ ಕಾರ್ಯಕರ್ತರ ಗುರುತಿಸಿದ ಸರ್ಕಾರ

Last Updated 24 ನವೆಂಬರ್ 2020, 10:06 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ಲಸಿಕೆ ದೊರೆತ ಕೂಡಲೇ ಮೊದಲ ಡೋಸ್‌ ನೀಡಲು ಅಂದಾಜು ಒಂದು ಕೋಟಿ ಆರೋಗ್ಯ ಕಾರ್ಯಕರ್ತರನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಇದರಲ್ಲಿ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ ಆಸ್ಪತ್ರೆಗಳ ಶೇ 92, ಖಾಸಗಿ ಆಸ್ಪತ್ರೆಗಳ ಶೇ 55ರಷ್ಟು ಆರೋಗ್ಯ ಕಾರ್ಯಕರ್ತರು ಇದ್ದಾರೆ ಎಂದು ಅಧಿಕೃತ ಮೂಲಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿವೆ.

ಲಸಿಕೆ ಲಭ್ಯವಾದ ಕೂಡಲೇ, ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದ (ಯುಐಪಿ) ಅಡಿ ಅಸ್ತಿತ್ವದಲ್ಲಿರುವ ತಂತ್ರಜ್ಞಾನ, ಸಂಪರ್ಕ ಜಾಲ ಮತ್ತು ಪ್ರಕ್ರಿಯೆಗಳನ್ನು ಬಳಸಿಕೊಂಡು ವಿಶೇಷ ಕಾರ್ಯಕ್ರಮದ ಮೂಲಕ ವಿತರಣೆ ನಡೆಸಲಾಗುವುದು. ಈ ವಿಶೇಷ ಕಾರ್ಯಕ್ರಮವು ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಕ್ಕೆ ಪರ್ಯಾಯವಾಗಿ ಕಾರ್ಯನಿರ್ವಹಿಸಲಿದೆ.

ಆರಂಭಿಕ ಹಂತದಲ್ಲಿ ಲಸಿಕೆ ನೀಡಲು ಆದ್ಯತೆಯ ಸುಮಾರು 30 ಕೋಟಿ ಮಂದಿಯ ಪಟ್ಟಿಯನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ನೆರವಿನೊಂದಿಗೆ ಕೇಂದ್ರ ಸರ್ಕಾರವು ಸಿದ್ಧಪಡಿಸುತ್ತಿದೆ ಎಂದೂ ಮೂಲಗಳು ತಿಳಿಸಿವೆ.

ಲಸಿಕೆ ವಿತರಣೆ ನಿಟ್ಟಿನಲ್ಲಿ ಸರ್ಕಾರ ಒಟ್ಟು ನಾಲ್ಕು ವಿಭಾಗಗಳನ್ನು ಮಾಡಿದ್ದು, ಇವುಗಳಲ್ಲಿ ಒಂದರಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳು, ಶುಶ್ರೂಷಕಿಯರು, ಆಶಾ ಕಾರ್ಯಕರ್ತರು ಸೇರಿದಂತೆ ಒಂದು ಕೋಟಿ ಆರೋಗ್ಯ ವೃತ್ತಿಪರರು ಇರಲಿದ್ದಾರೆ. ಪುರಸಭೆ ನಿಗಮಗಳ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ ಮತ್ತು ಸಶಸ್ತ್ರ ಪಡೆಗಳ ಎರಡು ಕೋಟಿ ಮಂದಿ ಇನ್ನೊಂದು ವಿಭಾಗದಲ್ಲಿ ಇರಲಿದ್ದಾರೆ. 50 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಹಾಗೂ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿಶೇಷ ನಿಗಾ ಬೇಕಿರುವ 26 ಕೋಟಿ ಮಂದಿ ಇನ್ನೊಂದು ವಿಭಾಗದಲ್ಲಿ ಇರಲಿದ್ದಾರೆ.

ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಇತರ ಸಿಬ್ಬಂದಿಗೆ ಲಸಿಕೆ ನೀಡಿಕೆ ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದ ತರಬೇತಿ ನೀಡಲಾಗುತ್ತದೆ.

ಸಾರ್ವತ್ರಿಕ ಲಸಿಕೆ ನೀಡಿಕೆ ಕಾರ್ಯಕ್ರಮದಲ್ಲಿ ಸದ್ಯ ಆರೋಗ್ಯ ಸಚಿವಾಲಯ ಬಳಸುತ್ತಿರುವ eViN ಡಿಜಿಟಲ್ ಮಾಧ್ಯಮವನ್ನು ಕೋವಿಡ್ ಲಸಿಕೆ ವಿತರಣೆಗೂ ಬಳಸಲಾಗುವುದು. ಇದನ್ನು ಬಳಸಿಕೊಂಡು ಫಲಾನುಭವಿಗಳಿಗೆ ಲಸಿಕೆ ನೀಡಿಕೆ ಸಮಯ ದಿನಾಂಕ ಮತ್ತು ಸ್ಥಳಕ್ಕೆ ಸಂಬಂಧಿಸಿದ ಸಂದೇಶ ಕಳುಹಿಸಲಾಗುವುದು ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT