ಶುಕ್ರವಾರ, ಜನವರಿ 27, 2023
17 °C

ಗುಜರಾತ್ ವಿಧಾನಸಭಾ ಚುನಾವಣೆ: ಮೊದಲ ಹಂತದ ಮತದಾನ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್: ಗುಜರಾತ್ ವಿಧಾನಸಭೆಗೆ ಗುರುವಾರ (ಡಿ.1) ಮೊದಲ ಹಂತದ ಮತದಾನ ನಡೆಯಲಿದೆ. ಸೌರಾಷ್ಟ್ರ, ಕಛ್, ರಾಜ್ಯದ ದಕ್ಷಿಣ ಭಾಗ ಒಳಗೊಂಡ 19 ಜಿಲ್ಲೆಗಳ 89 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 70 ಮಹಿಳೆಯರು ಸೇರಿ ಒಟ್ಟಾರೆ 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

14,382 ಮತಗಟ್ಟೆಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. 2017ರ ಚುನಾವಣೆಯಲ್ಲಿ ಈ 89 ಕ್ಷೇತ್ರಗಳ ಪೈಕಿ 48 ಕ್ಷೇತ್ರಗಳನ್ನು ಆಡಳಿತಾರೂಢ ಬಿಜೆಪಿ ಗೆದ್ದುಕೊಂಡಿತ್ತು. 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. 

ಬಿಜೆಪಿ, ಕಾಂಗ್ರೆಸ್, ಎಎಪಿ ಸೇರಿದಂತೆ 36 ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. 339 ಪಕ್ಷೇತರ ಅಭ್ಯರ್ಥಿಗಳೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಗುರುವಾರ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಎಎ‍ಪಿ ಮುಖ್ಯಮಂತ್ರಿ ಅಭ್ಯರ್ಥಿ ಈಸುದಾನ್ ಗಢವಿ, ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಅವರು ಸ್ಪರ್ಧಿಸಿರುವ ಕ್ಷೇತ್ರಗಳೂ ಇವೆ. ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ
ರಿವಾ ಜಡೇಜಾ, ಶಾಸಕರಾದ ಹರ್ಷ ಸಂಘವಿ, ಪೂರ್ಣೇಶ್ ಮೋದಿ, ಪುರುಷೋತ್ತಮ್ ಸೋಳಂಕಿ
ಅವರು ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಮುಖರಾಗಿದ್ದಾರೆ. 

ರಾಜ್ಯದ ಒಟ್ಟು 4.91 ಕೋಟಿ ಮತದಾರರ ಪೈಕಿ 2.39 ಕೋಟಿ ಮತದಾರರು ಮೊದಲ ಹಂತದಲ್ಲಿ ಹಕ್ಕು ಚಲಾವಣೆಗೆ ಸಜ್ಜಾಗಿದ್ದಾರೆ. ಇದೇ 5ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, 8ರಂದು ಮತ ಎಣಿಕೆ ನಡೆಯಲಿದೆ. 

ಆಯೋಗಕ್ಕೆ ಕಾಂಗ್ರೆಸ್‌ ದೂರು

ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಇನ್ನೂ ಮತದಾನ ನಡೆಯಬೇಕಿದೆ. ಆದರೆ ಅದಕ್ಕೂ ಮುನ್ನವೇ ಕೆಲವು ಸುದ್ದಿವಾಹಿನಿಗಳು ಸಮೀಕ್ಷಾ ವರದಿಗಳನ್ನು ಪ್ರಸಾರ ಮಾಡಿವೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು ನೀಡಿದೆ.

ಕಾಂಗ್ರೆಸ್‌ ಕಾನೂನು ಘಟಕದ ಅಧ್ಯಕ್ಷ ವಿವೇಕ್ ಟಂಖಾ ನೇತೃತ್ವದ ನಿಯೋಗವು ದೆಹಲಿಯಲ್ಲಿರುವ ಆಯೋಗದ ಕಚೇರಿಗೆ ಭೇಟಿ ನೀಡಿ, ದೂರು ಸಲ್ಲಿಸಿದೆ. ‘ಈ ಸಮೀಕ್ಷಾ ವರದಿಗಳನ್ನು ಕೆಲವು ಪಕ್ಷಗಳು ಪ್ರಾಯೋಜಿಸಿವೆ. ಅವುಗಳ ಪ್ರಾಯೋಜಕತ್ವದಲ್ಲಿ ಕೆಲವು ಸುದ್ದಿ ವಾಹಿನಿಗಳು ವರದಿ ಪ್ರಸಾರ ಮಾಡಿವೆ. ಇದು ಮತದಾನದ ಮೇಲೆ ಪ್ರಭಾವ ಬೀರುತ್ತದೆ’ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

ನಮ್ಮ ದೂರನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನುಡಿ–ಕಿಡಿ

ಈ ಬಾರಿ ಗುಜರಾತ್‌ನಲ್ಲಿ ಮತದಾನವು ಧರ್ಮ ಮತ್ತು ಜಾತಿಯ ಆಧಾರದಲ್ಲಿ ನಡೆಯುವುದಿಲ್ಲ. ಬದಲಿಗೆ ನಿರುದ್ಯೋಗ, ಬೆಲೆ ಏರಿಕೆ, ಬಡತನ, ಅಭಿವೃದ್ಧಿಯು ಚುನಾವಣೆಯ ವಿಷಯಗಳಾಗಿವೆ

- ಜಿಗ್ನೇಶ್ ಮೆವಾನಿ, ಗುಜರಾತ್ ಕಾಂಗ್ರೆಸ್‌ ಉಪಾಧ್ಯಕ್ಷ

––––

ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಅಸಾಧಾರಣ ಗೆಲುವನ್ನು ದಾಖಲಿಸಲಿದೆ. ನಮ್ಮ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಜನರು ವಿಶ್ವಾಸ ಇರಿಸಿದ್ದಾರೆ. ಬಹುಶಃ ಈ ಚುನಾವಣೆಯಲ್ಲಿ ಎಎಪಿ ಖಾತೆ ತೆರೆಯುವುದೇ ಇಲ್ಲ

- ಅಮಿತ್ ಶಾ, ಕೇಂದ್ರ ಗೃಹ ಸಚಿವ

––––

ಮಹಾತ್ಮ ಗಾಂಧಿ ಮತ್ತು ಸರ್ದಾರ್ ಪಟೇಲರು 20ನೇ ಶತಮಾನದಲ್ಲಿ ಗುಜರಾತ್‌ನ ಹೆಮ್ಮೆಯಾಗಿದ್ದರು. 21ನೇ ಶತಮಾನದಲ್ಲಿ ಮೋದಿ ಅವರು ಗುಜರಾತ್‌ನ ಹೆಮ್ಮೆಯಾಗಿದ್ದಾರೆ. ಅಂತಹವರನ್ನು ತೆಗಳುವ ಕಾಂಗ್ರೆಸ್‌ಗೆ ಗುಜರಾತಿಗಳು ತಕ್ಕಪಾಠ ಕಲಿಸಲಿದ್ದಾರೆ

- ರಾಜನಾಥ್ ಸಿಂಗ್‌, ಕೇಂದ್ರ ರಕ್ಷಣಾ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು