ಬುಧವಾರ, ಮಾರ್ಚ್ 22, 2023
32 °C

Gujarat Election Results: 7ನೇ ಬಾರಿ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಸಜ್ಜು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಗುಜರಾತ್‌ನಲ್ಲಿ ಹೊಸ ದಾಖಲೆ ಬರೆಯುವ ಉಮೇದಿನಲ್ಲಿ ಬಿಜೆಪಿ ಇದೆ. ಸತತ ಆರು ಚುನಾವಣೆಗಳನ್ನು (27 ವರ್ಷ) ಕಮಲ ಪಾಳಯ ಗೆದ್ದಿದೆ. ಒಂದು ವೇಳೆ, ಈ ಸಲ ಗೆದ್ದರೆ ಪಶ್ಚಿಮ ಬಂಗಾಳದ ಎಡರಂಗದ ಸರ್ಕಾರದ ದಾಖಲೆಯನ್ನು ಸರಿಗಟ್ಟಿದಂತಾಗುತ್ತದೆ.

ಇಂದು (ಗುರುವಾರ) ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ಅಧಿಕಾರ ಗದ್ದುಗೆ ಏರುವ ಸಾಧ್ಯತೆ ಹೆಚ್ಚಿದೆ. 

2017ಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ಪಕ್ಷ ಉತ್ತಮ ಸಾಧನೆ ಮಾಡಲಿದೆ ಎಂಬುದು ಕಾಂಗ್ರೆಸ್‌ ನಾಯಕರ ವಿಶ್ವಾಸ. ತಮ್ಮ ಪಕ್ಷವು ಉತ್ತಮ ಸಾಧನೆ ಮಾಡಲಿದೆ ಎಂದು ಆಮ್‌ ಆದ್ಮಿ ಪಕ್ಷದ ನಾಯಕರು ಭರವಸೆಯಾಗಿದೆ. 

182 ಸದಸ್ಯ ಬಲದ ವಿಧಾನಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ನಡುವೆ ತ್ರಿಕೋನ ಸ್ಪರ್ಧೆ ಇದೆ. ಗುಜರಾತ್ 27 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ.

ಗುಜರಾತ್‌ ವಿಧಾನಸಭೆ ಚುನಾವಣೆ ಡಿಸೆಂಬರ್ 1 ಮತ್ತು 5ರಂದು ಎರಡು ಹಂತದಲ್ಲಿ ನಡೆದಿತ್ತು. ಡಿ.1ರಂದು ನಡೆದಿದ್ದ ಮೊದಲ ಹಂತದ ಚುನಾವಣೆಯಲ್ಲಿ ಶೇ 63.31ರಷ್ಟು ಮತದಾನವಾಗಿತ್ತು. ಗುಜರಾತ್ ವಿಧಾನಸಭೆಗೆ ಡಿ.5ರಂದು ನಡೆದಿದ್ದ ಎರಡನೇ ಹಂತದ ಚುನಾವಣೆಯಲ್ಲಿ ಶೇ 59.19ರಷ್ಟು ಮತದಾನವಾಗಿತ್ತು. 2017ರ ಚುನಾವಣೆಯಲ್ಲಿ ಒಟ್ಟಾರೆ 68.41ರಷ್ಟು ಮತದಾನವಾಗಿತ್ತು.

ಓದಿ... ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ: ಮತ ಎಣಿಕೆ ಆರಂಭ

ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ನೇತೃತ್ವದ ಎಡರಂಗಗಳ ಸರ್ಕಾರ ಸತತ ಏಳು ಬಾರಿ ಅಧಿಕಾರಕ್ಕೆ ಏರಿತ್ತು. ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ 1995ರಿಂದ 6 ಬಾರಿ ಸತತವಾಗಿ ಅಧಿಕಾರ ನಡೆಸಿದೆ. ಒಂದು ವೇಳೆ, ಈ ಬಾರಿಯೂ ಅಧಿಕಾರ ಹಿಡಿದರೆ, ಸಿಪಿಎಂ ದಾಖಲೆಯನ್ನು ಸರಿಗಟ್ಟಿದಂತಾಗುತ್ತದೆ. ಬಿಜೆಪಿಯು ನರೇಂದ್ರ ಮೋದಿ ನೇತೃತ್ವದಲ್ಲಿ ನಾಲ್ಕು ಚುನಾವಣೆಗಳನ್ನು (2002, 2007, 2012 ಹಾಗೂ 2017) ಎದುರಿಸಿದೆ. 2002ರಲ್ಲಿ ಕೋಮು ದಂಗೆಯ ಬೆನ್ನಲ್ಲೇ ನಡೆದ ಚುನಾವಣೆಯಲ್ಲಿ ಬಿಜೆಪಿ 127 ಸ್ಥಾನಗಳನ್ನು ಗಳಿಸಿತು. 2007ರಲ್ಲಿ 117 ಹಾಗೂ 2012ರಲ್ಲಿ 115 ಸ್ಥಾನಗಳನ್ನು ಪಡೆಯಿತು. 2017ರಲ್ಲಿ ಬಿಜೆಪಿ ತಿಣುಕಾಡಿ ಗೆದ್ದಿದ್ದು 99 ಸ್ಥಾನಗಳನ್ನು. 

ಬಳಿಕ ಚುರುಕಾದ ಕೇಸರಿ ಪಡೆ 2020ರಲ್ಲಿ ಕಾಂಗ್ರೆಸ್‌ನ 16 ಶಾಸಕರನ್ನು ಸೆಳೆದುಕೊಂಡಿತು. ಕಳೆದೊಂದು ತಿಂಗಳಲ್ಲೇ ಹಲವು ಕೈ ಮುಖಂಡರು ಬಿಜೆಪಿ ಪಾಳಯ ಸೇರಿಕೊಂಡಿದ್ದಾರೆ. 2017ರ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭೀತಿ ಹುಟ್ಟಿಸಿದ್ದ ಯುವ ಮುಖಂಡರಾದ ಹಾರ್ದಿಕ್‌ ಪಟೇಲ್‌ ಹಾಗೂ ಅಲ್ಫೇಶ್‌ ಠಾಕೂರ್ ಅವರು ಈಗ ಮೋದಿ ನೆರಳಲ್ಲೇ ಆಶ್ರಯ ಪಡೆದಿದ್ದಾರೆ. ಕಮಲದ ಪಾಳಯದಲ್ಲೇ ಭವಿಷ್ಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಪಕ್ಷವು ‘ಅಭಿನವ ಪ್ರಯೋಗ’ದ ಹೆಸರಿನಲ್ಲಿ ಕಳೆದ ವರ್ಷ ಮುಖ್ಯಮಂತ್ರಿ ಹಾಗೂ ಇಡೀ ಸಚಿವ ಸಂಪುಟವನ್ನು ಬದಲಿಸಿತು. ಈ ಚುನಾವಣೆಯಲ್ಲಿ 42 ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿದೆ. ಇದು ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಜೋಡಿ ಚಾಣಾಕ್ಷ ನಡೆಗೆ ಸಾಕ್ಷಿ. ಇದರಿಂದ ಭರಪೂರ ಚುನಾವಣಾ ಫಸಲು ಸಿಗಲಿದೆ ಎಂದೂ ಬಿಜೆಪಿ ಕಾರ್ಯಕರ್ತರು ಹೇಳುತ್ತಾರೆ. 

ಓದಿ... Himachal Pradesh: ಹೊಸ ದಾಖಲೆಯತ್ತ ಬಿಜೆಪಿ, ಕಾಂಗ್ರೆಸ್‌ಗೆ ಬಹುಮತದ ವಿಶ್ವಾಸ

 

ಗುಜರಾತ್ ವಿಧಾನಸಭೆ

ಸಮೀಕ್ಷೆ; ಬಿಜೆಪಿ; ಕಾಂಗ್ರೆಸ್‌; ಎಎಪಿ

ನ್ಯೂಸ್‌ ಎಕ್ಸ್‌–ಜನ್‌ ಕೀ ಬಾತ್;117–140;34–51;6–13

ಟಿವಿ9 ಗುಜರಾತಿ;125–130;40–50;3–5

ರಿಪಬ್ಲಿಕ್‌ ಟಿ.ವಿ.–ಪಿ ಮಾರ್ಕ್‌;128–148;30–42;2–10

ಝೀ ನ್ಯೂಸ್‌–ಬಾರ್ಕ್;110–125;45–60;1–5

ಟೈಮ್ಸ್‌ ನೌ–ಇಟಿಜಿ;139;30;11

ಎಬಿಪಿ–ಸಿವೋಟರ್‌;128–140;31–43;3–11

ಆಜ್‌ತಕ್‌–ಆಕ್ಸಿಸ್ ಮೈ ಇಂಡಿಯಾ;129–151;16–30;9–21

ಎಲ್ಲ ಸಮೀಕ್ಷೆಗಳ ಸರಾಸರಿ;132;38;8

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು