ರಾಜ್ಕೋಟ್ನ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಐದು ಮಂದಿ ಸಾವು
ಅಹಮದಾಬಾದ್: ಗುಜರಾತ್ನ ರಾಜಕೋಟ್ನಲ್ಲಿರುವ ಕೋವಿಡ್–19 ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ(ಐಸಿಯು) ಸಂಭವಿಸಿದ ಅಗ್ನಿ ಅವಘಡದಲ್ಲಿ ಐವರು ಕೋವಿಡ್–19 ರೋಗಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಘಟನೆಯ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಈ ಕುರಿತು ವರದಿ ಸಲ್ಲಿಸುವಂತೆ ಗುಜರಾತ್ ಸರ್ಕಾರಕ್ಕೆ ಸೂಚಿಸಿದೆ.
‘ಆಸ್ಪತ್ರೆಯಲ್ಲಿದ್ದ 26 ರೋಗಿಗಳನ್ನು ರಕ್ಷಿಸಲಾಗಿದ್ದು, ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ’ ಎಂದು ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ತಿಳಿಸಿದ್ದಾರೆ. ‘ಆನಂದ್ ಬಂಗ್ಲೊ ಚೌಕ್ ಪ್ರದೇಶದಲ್ಲಿರುವ ನಾಲ್ಕು ಅಂತಸ್ತಿನ ಉದಯ್ ಶಿವಾನಂದ್ ಆಸ್ಪತ್ರೆಯ ಮೊದಲ ಮಹಡಿಯಲ್ಲಿರುವ ಐಸಿಯು ವಾರ್ಡ್ನಲ್ಲಿ ಸೋಮವಾರ ತಡರಾತ್ರಿ 12.30ಕ್ಕೆ ಅಗ್ನಿ ಅವಘಡ ಸಂಭವಿಸಿದ್ದು, ಆಸ್ಪತ್ರೆಯಲ್ಲಿ 31 ರೋಗಿಗಳು ದಾಖಲಾಗಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಅರ್ಧ ಗಂಟೆಯೊಳಗೆ ಬೆಂಕಿಯನ್ನು ನಿಯಂತ್ರಿಸಿದರು. ಮೂವರು ಕೋವಿಡ್–19 ರೋಗಿಗಳು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ಮೃತಪಟ್ಟರು’ ಎಂದು ಪಟೇಲ್ ತಿಳಿಸಿದರು.
ಅವಘಡದ ಬಗ್ಗೆ ತನಿಖೆಗೆ ಆದೇಶಿಸಿರುವ ಮುಖ್ಯಮಂತ್ರಿ ವಿಜಯ್ ರುಪಾನಿ ಅವರು, ಮೃತರ ಕುಟುಂಬಕ್ಕೆ ₹4 ಲಕ್ಷ ಪರಿಹಾರ ಘೋಷಿಸಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಎ.ಕೆ.ರಾಕೇಶ್ ಅವರು ಘಟನೆಯ ತನಿಖೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯು ತಿಳಿಸಿದೆ.
‘ಐಸಿಯುವಿನಲ್ಲಿ ದಾಖಲಾಗಿದ್ದ 11 ಕೋವಿಡ್–19 ರೋಗಿಗಳ ಪೈಕಿ ಐವರು ಮೃತಪಟ್ಟಿದ್ದಾರೆ. ಇತರೆ ಮಹಡಿಗಳಿಗೆ ಬೆಂಕಿ ಪಸರಿಸುವ ಮುನ್ನವೇ ನಿಯಂತ್ರಣಕ್ಕೆ ತರಲಾಯಿತು’ ಎಂದು ರಾಜಕೋಟ್ ಪೊಲೀಸ್ ಆಯುಕ್ತ ಮನೋಜ್ ಅಗರ್ವಾಲ್ ತಿಳಿಸಿದರು.
‘ಪ್ರಾಥಮಿಕ ತನಿಖೆಯಂತೆ, ವೆಂಟಿಲೇಟರ್ನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿದೆ. ಈ ಖಾಸಗಿ ಆಸ್ಪತ್ರೆಯು ಸಮರ್ಪಕವಾದ ನಿರಾಕ್ಷೇಪಣಾ ಪತ್ರವನ್ನು ಹೊಂದಿತ್ತು ಜೊತೆಗೆ ಅಗ್ನಿ ಅವಘಡ ಸಂಭವಿಸಿದರೆ ಅದನ್ನು ನಂದಿಸಲು ಇರಬೇಕಾದಂಥ ಎಲ್ಲ ಉಪಕರಣಗಳೂ ಆಸ್ಪತ್ರೆಯಲ್ಲಿ ಅಳವಡಿಸಲಾಗಿತ್ತು’ ಎಂದು ಪಟೇಲ್ ತಿಳಿಸಿದರು.
ಕಳೆದ ಆಗಸ್ಟ್ನಲ್ಲಿ ಅಹಮದಾಬಾದ್ನ ನಾಲ್ಕು ಅಂತಸ್ತಿನ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಎಂಟು ಕೋವಿಡ್–19 ರೋಗಿಗಳು ಮೃತಪಟ್ಟಿದ್ದರು.
ಶನಿವಾರದೊಳಗೆ ಸಭೆ: ಕೇಂದ್ರದ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ದೇಶದಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ನಿರ್ದೇಶನ ನೀಡಲು ಕೇಂದ್ರ ಗೃಹ ಕಾರ್ಯದರ್ಶಿ ಅವರು ಶನಿವಾರದೊಳಗೆ ಸಭೆ ನಡೆಸಲಿದ್ದಾರೆ’ ಎಂದು ಭರವಸೆ ನೀಡಿದರು.
Gujarat: Five people died after a fire broke out at Shivanand COVID Hospital in Rajkot, last night.
CM Vijay Rupani has ordered a probe into the incident. The cause of the fire is yet to be ascertained. pic.twitter.com/aRXrGrD3NQ
— ANI (@ANI) November 27, 2020
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.