ಶನಿವಾರ, ಸೆಪ್ಟೆಂಬರ್ 25, 2021
24 °C

‘ಲವ್‌ಜಿಹಾದ್’ ನಿಷೇಧ ಕಾಯ್ದೆ ಪ್ರಶ್ನಿಸಿದ ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ‘ಅಂತರಧರ್ಮೀಯ ಮದುವೆಯ ನಂತರದ ಮತಾಂತರವನ್ನು ಅಪರಾಧ ಎಂದು ಪರಿಗಣಿಸುವ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ-2021 ಅಥವಾ ಲವ್‌ ಜಿಹಾದ್ ನಿಷೇಧ ಕಾಯ್ದೆ ರಚಿಸಿದ ಹಿಂದಿನ ಕಾರಣವೇನು’ ಎಂದು ಗುಜರಾತ್ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ಕಾಯ್ದೆಯ ವಿರುದ್ಧ ಜಮೀಯತ್ ಉಲೇಮಾ ಎ ಹಿಂದ್ ಸಂಘಟನೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ನೋಟಿಸ್ ಜಾರಿ ಮಾಡಿದೆ. 

‘ಅಂತರಧರ್ಮೀಯ ವಿವಾಹವನ್ನು ಸಂಪೂರ್ಣವಾಗಿ ಅಪರಾಧ ಎಂದು ವ್ಯಾಖ್ಯಾನಿಸಲಾಗಿದೆ. ಸಂವಿಧಾನವು ಕೊಟ್ಟಿರುವ ಮೂಲಭೂತ ಹಕ್ಕನ್ನು ಈ ಕಾಯ್ದೆಯು ಅಪರಾಧ ಎಂದು ಪರಿಗಣಿಸುತ್ತದೆ. ಅಂತರಧರ್ಮೀಯ ವಿವಾಹ ನಡೆದ ಸಂದರ್ಭದಲ್ಲಿ ವಧುವಿನ ತಂದೆ-ತಾಯಿ ಅಥವಾ ರಕ್ತಸಂಬಂಧಿ, ‘ಇದು ಒತ್ತಾಯದ ಮತ್ತು ಮತಾತಂರ ಉದ್ದೇಶದ ಮದುವೆ’ ಎಂದು ದೂರು ನೀಡಿದರೆ ಸಾಕು. ವರನನ್ನು 10 ವರ್ಷ ಜೈಲಿಗೆ ಹಾಕಬಹುದು. ಇದು ಇಬ್ಬರು ವಯಸ್ಕರು ನಿರ್ಧರಿಸಿ ಆದ ಮದುವೆಯನ್ನು ಅಪರಾಧ ಕೃತ್ಯ ಎಂದು ಪರಿಗಣಿಸುತ್ತದೆ. ಈ ಮೂಲಕ ಅವರ ಹಕ್ಕನ್ನು ಕಸಿದುಕೊಳ್ಳುತ್ತದೆ' ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

'ರಾಜ್ಯ ಸರ್ಕಾರವು ಮದುವೆಯ ಮಧ್ಯೆಯೂ ನುಸುಳುತ್ತಿದೆ ಎಂಬುದೇ ಕಳವಳಕಾರಿ ವಿಷಯ. ಸಂವಿಧಾನದ 21ನೇ ವಿಧಿ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪಿನ ಅನ್ವಯ ಮದುವೆಯ ವಿಚಾರದಲ್ಲಿ ರಾಜ್ಯ ಸರ್ಕಾರವು ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ ಈ ಕಾಯ್ದೆಯು ಅಂತರಧರ್ಮೀಯ ಮದುವೆ ಆಗುವವರನ್ನು, ಮದುವೆ ಮಾಡಿಸುವವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಒತ್ತಾಯದ ಮತ್ತು ವಂಚನೆ ರೂಪದ ಮದುವೆಯು ಅಪರಾಧ ಎಂದು ಪರಿಗಣಿಸುವ ಕಾನೂನುಗಳು ಈಗಾಗಲೇ ಇವೆ. ಆದರೆ ಇದಕ್ಕೆ ಈಗ ಅಂತರಧರ್ಮೀಯ ಎಂಬ ಪದ ಸೇರಿಸುವ ಮೂಲಕ, ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ' ಎಂದು ಅರ್ಜಿದಾರರ ಪರ ವಕೀಲರು ಪ್ರತಿಪಾದಿಸಿದ್ದಾರೆ.

***

ಒತ್ತಾಯದ, ವಂಚನೆಯ ಮದುವೆ ಅಪರಾಧ ಎನ್ನುತ್ತಿದ್ದೀರಿ, ಅದು ಸರಿ. ಆದರೆ ಮದುವೆಯ ಕಾರಣಕ್ಕೆ ಮತಾಂತರ ಆಗುವುದು ಹೇಗೆ ಅಪರಾಧವಾಗುತ್ತದೆ? 

-ಗುಜರಾತ್ ಹೈಕೋರ್ಟ್

***

ಹೈಕೋರ್ಟ್‌ನ ಈ ಪ್ರಶ್ನೆಗೆ ಉತ್ತರಿಸಲು ಸಾಕಷ್ಟು ಸಮಯಾವಕಾಶಬೇಕು. ಕಾಯ್ದೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಉತ್ತರ ನೀಡಬೇಕಿದೆ

-ಮನೀಷ್ ಲವಕುಮಾರ್, ಗುಜರಾತ್ ಅಡ್ವೊಕೇಟ್ ಜನರಲ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು