ಶುಕ್ರವಾರ, ಅಕ್ಟೋಬರ್ 23, 2020
28 °C
ತನಿಷ್ಕ್‌ ಮಳಿಗೆಯ ಮೇಲೆ ಗುಂಪು ದಾಳಿ ನಡೆದಿದೆ ಎಂದು ಸುದ್ದಿ ಪ್ರಕಟಿಸಿದ್ದ ವಾಹಿನಿ

ಸುಳ್ಳು ಸುದ್ದಿ ಪ್ರಸಾರ ಆರೋಪ: ಎನ್‌ಡಿಟಿವಿ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್‌: ಕಛ್ ಜಿಲ್ಲೆಯ ಗಾಂಧಿಧಾಮದ ತನಿಷ್ಕ್ ಮಳಿಗೆಯ ಮೇಲೆ ಗುಂಪೊಂದು ದಾಳಿ ನಡೆಸಿದೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದ ಮೇಲೆ ಎನ್‌ಡಿಟಿವಿ ಸುದ್ದಿ ವಾಹಿನಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. 

ರಮೇಶ್ ಅಹಿರ್ (ಮೈತ್ರ) ಅನ್ನುವವರು ಎನ್‌ಡಿಟಿವಿ ವಿರುದ್ಧ ದೂರು ದಾಖಲಿಸಿದ್ದಾರೆ.

ಏಕತೆ ವಿಷಯವನ್ನು ಆಧರಿಸಿ ಪ್ರಕಟಿಸಲಾಗಿರುವ ಆಭರಣದ ಜಾಹೀರಾತಿನಲ್ಲಿ ಮುಸ್ಲಿಂ ಕುಟುಂಬದಲ್ಲಿರುವ ಹಿಂದೂ ಮಹಿಳೆಗೆ ಸೀಮಂತ ಕಾರ್ಯಕ್ರಮ ಆಯೋಜಿಸುವ ದೃಶ್ಯಗಳಿದ್ದವು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಗುಂಪೊಂದು ಮಳಿಗೆಯ ಮೇಲೆ ಹಲ್ಲೆ ನಡೆಸಿದೆ ಎಂದು ಅಕ್ಟೋಬರ್‌ 14 ರಂದು ಎನ್‌ಡಿಟಿವಿ ವರದಿ ಮಾಡಿತ್ತು.

ಎನ್‌ಡಿಟಿವಿ ಗುಂಪು ದಾಳಿಯ ಬಗ್ಗೆ ಸುಳ್ಳು ವರದಿ ಮಾಡಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇಬ್ಬರು ಪುರುಷರು ಮಾತ್ರವೇ ಅಂಗಡಿಯೊಳಗೆ ಪ್ರವೇಶಿಸಿದ್ದು, ನಾಲ್ಕರಿಂದ ಐದು ಮಂದಿ ಮಳಿಗೆಯ ಹೊರಗೆ ನಿಂತಿದ್ದರು. ಒಳಗೆ ಪ್ರವೇಶಿಸಿದ್ದ ರಮೇಶ್ ಅಹಿರ್ ಎಂಬುವವರು ಸಿಬ್ಬಂದಿಗೆ ಕ್ಷಮಾಪಣೆ ಪತ್ರ ಬರೆಯುವಂತೆ ಒತ್ತಾಯಿಸಿದ್ದಾರೆ. ಈಗಾಗಲೇ ಇಂಗ್ಲಿಷ್‌ನಲ್ಲಿ ಕ್ಷಮಾಪಣೆ ಪತ್ರ ಬರೆದು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಸ್ಥಳೀಯರಿಗೂ ಅರ್ಥವಾಗುವ ಹಾಗೆ ಗುಜರಾತಿ ಭಾಷೆಯಲ್ಲಿ ಕ್ಷಮಾಪಣೆ ಬರೆಯುವಂತೆ ಅಹಿರ್‌ ಈ ವೇಳೆ ಒತ್ತಾಯಿಸಿದ್ದಾರೆ. ಸಿಬ್ಬಂದಿಗೆ ಗುಜರಾತಿ ಬಾರದ ಕಾರಣ ‘ನೀವೆ ಗುಜರಾತಿಯಲ್ಲಿ ಕ್ಷಮಾಪಣೆ ಬರೆಯಿರಿ’ ಎಂದು ರಮೇಶ್‌ ಅವರಿಗೆ ತಿಳಿಸಿದ್ದಾರೆ. ರಮೇಶ್ ಖಾಲಿ ಕಾಗದದ ಮೇಲೆ ಕ್ಷಮಾಪಣೆ ಬರೆದು, ಮಳಿಗೆಯ ವ್ಯವಸ್ಥಾಪಕರ ಅನುಮೋದನೆ ಪಡೆದು ಅದನ್ನು ಮಳಿಗೆಯ ಪ್ರವೇಶದ್ವಾರದಲ್ಲಿ ಅಂಟಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ನಾನು ತನಿಷ್ಕ್‌ ಮಳಿಗೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದು, ಬೆದರಿಕೆ ಹಾಕಿದ್ದೇನೆ ಎಂದು ಎನ್‌ಡಿಟಿವಿ ಆರೋಪಿಸಿದೆ. ಆದರೆ ವೈರಲ್‌ ಆಗಿರುವ ವಿಡಿಯೊ ನೋಡಿದರೆ ಸತ್ಯ ತಿಳಿಯಲಿದೆ. ಅದರಲ್ಲಿರುವಂತೆ ನಾನು ಜಾಹೀರಾತನ್ನು ಹಿಂಪಡೆಯುವಂತೆ ಷೋರೂಂನ ಸಿಬ್ಬಂದಿಗೆ ಕೈಮುಗಿದು ಮನವಿ ಮಾಡಿದ್ದೇನೆ. ನಾನು ಬಿಜೆಪಿ ಕಾರ್ಯಕರ್ತ. ಚಿಕ್ಕ ಉದ್ಯಮ ನಡೆಸುತ್ತಿದ್ದು ಕೃಷಿ ಮಾಡುತ್ತಿದ್ದೇನೆ. ಹಿಂಸೆಯನ್ನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ’ ರಮೇಶ್ ಅಹಿರ್ ತಿಳಿಸಿದ್ದಾರೆ.

‘ಎನ್‌ಡಿಟಿವಿಯಲ್ಲಿ ಪ್ರಸಾರವಾದ ತನಿಷ್ಕ್‌ ಮಳಿಗೆಯ ಮೇಲಿನ ದಾಳಿ ಸುದ್ದಿ ಸಂಪೂರ್ಣ ನಕಲಿ. ಇದು ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಮತ್ತು ಗುಜರಾತ್‌ನಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಪ್ರಯತ್ನವಾಗಿದೆ. ಈ ನಕಲಿ ಸುದ್ದಿ ಹರಡಿದವರ ವಿರುದ್ಧ ಪ್ರಕರಣ ದಾಖಲಿಸಲು ಮತ್ತು ಕಠಿಣ ಕ್ರಮ ಕೈಗೊಳ್ಳಲು ನಾನು ತಿಳಿಸಿದ್ದೇನೆ’ ಎಂದು ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಗೃಹ ಖಾತೆಯ ರಾಜ್ಯ ಸಚಿವ ಪ್ರದೀಪ್‌ಸಿನ್ಹಾ ಜಡೇಜಾ ಟ್ವೀಟ್‌ ಮಾಡಿದ್ದರು.

 

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು