ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಧಿ ರಫ್ತು ನಿಷೇಧ: ಚಂಡಿಗಡದಲ್ಲಿ ರೈತರ ಭಾರೀ ಪ್ರತಿಭಟನೆಗೆ ಸಿದ್ಧತೆ

Last Updated 17 ಮೇ 2022, 14:24 IST
ಅಕ್ಷರ ಗಾತ್ರ

ಚಂಡಿಗಡ: ಗೋಧಿ ಬೆಳೆಗೆ ಬೋನಸ್ ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಚಂಡಿಗಡದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಹಲವಾರು ರೈತ ಸಂಘಟನೆಗಳು ಘೋಷಿಸಿದ್ದರಿಂದ ರೈತರನ್ನು ತಡೆಯಲು ಚಂಡೀಗಡ- ಮೊಹಾಲಿ ಗಡಿಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇಳುವರಿ ಕುಸಿದಿರುವುದರಿಂದ ಗೋಧಿ ಬೆಳೆಗೆ ಬೋನಸ್‌ ನೀಡಬೇಕು. ಮೆಕ್ಕೆಜೋಳ ಹಾಗೂ ಹೆಸರು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಭತ್ತ ಬಿತ್ತನೆಗೆ ಜೂನ್‌ 10 ರಿಂದಲೇ ಅವಕಾಶ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ವಿದ್ಯುತ್‌ ಹೊರೆ ಕಡಿಮೆ ಮಾಡಲು ಹಾಗೂ ಅಂತರ್ಜಲ ಸಂರಕ್ಷಿಸುವ ಉದ್ದೇಶದಿಂದ ಜೂನ್‌ 18 ರಿಂದ ಭತ್ತ ಬಿತ್ತನೆಗೆ ಅವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ನಡೆಸಿದ ಪ್ರತಿಭಟನೆ ರೀತಿಯಲ್ಲಿಯೇ ಚಂಡಿಗಡದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಹಲವಾರು ರೈತ ಸಂಘಗಳು ಕರೆ ನೀಡಿವೆ. ರೈತರು ಚಂಡಿಗಡ ಪ್ರವೇಶಿಸದಂತೆ ತಡೆಯಲು ಗಡಿಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳು ಅಳವಡಿಸಿದ್ದು, ಟಿಪ್ಪರ್‌ಗಳನ್ನು ಇರಿಸಿದ್ದಾರೆ.

ಪಂಜಾಬ್‌ನ ವಿವಿಧ ಭಾಗಗಳಿಂದ ಬಂದಿರುವ ರೈತರು ಮೊಹಾಲಿಯ ಅಂಬ್ ಸಾಹಿಬ್ ಗುರುದ್ವಾರದಲ್ಲಿ ಸಮಾವೇಶಗೊಂಡಿದ್ದಾರೆ. ಆಹಾರಧಾನ್ಯ, ಹಾಸಿಗೆ, ಫ್ಯಾನ್, ಕೂಲರ್, ಅಡುಗೆ ಅನಿಲ ಸಿಲಿಂಡರ್ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಹೊತ್ತು ಟ್ರ್ಯಾಕ್ಟರ್, ಬಸ್ ಮತ್ತಿತರ ವಾಹನಗಳಲ್ಲಿ ರೈತರು ಬಂದಿದ್ದಾರೆ.

‘ಚಂಡಿಗಡಕ್ಕೆ ಹೋಗುವುದನ್ನು ತಡೆದಿರುವ ಸ್ಥಳದಲ್ಲಿಯೇ ರೈತರು ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಭಾರತಿ ಕಿಸಾನ್ ಯೂನಿಯನ್ (ಲಖೋವಾಲ್) ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲಖೋವಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT