ಶುಕ್ರವಾರ, ಮಾರ್ಚ್ 31, 2023
26 °C

ಉತ್ತರ ಕಾಶ್ಮೀರದಲ್ಲಿ ತನ್ನ ನೆಲೆ ಪುನರ್‌ಸ್ಥಾಪಿಸಲು ಹಿಜ್ಬುಲ್‌ ಪ್ರಯತ್ನ: ಸೇನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಉತ್ತರ ಕಾಶ್ಮೀರದಲ್ಲಿ ತನ್ನ ನೆಲೆಯನ್ನು ಪುನರ್‌ಸ್ಥಾಪಿಸಲು ಉಗ್ರ ಸಂಘಟನೆ ಹಿಜ್ಬುಲ್‌ ಮುಜಾಹಿದ್ದೀನ್‌(ಎಚ್‌ಎಂ) ಪ್ರಯತ್ನಿಸುತ್ತಿದೆ ಎಂದು ಸೇನೆಯು ಶನಿವಾರ ತಿಳಿಸಿದೆ. 

ಬಾರಾಮುಲ್ಲಾ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯ ಮೂವರು ಉಗ್ರರು ಹತರಾಗಿದ್ದರು. ಈ ಕುರಿತು ಶನಿವಾರ ಉತ್ತರ ಕಾಶ್ಮೀರ ಪ್ರದೇಶದ ಐಜಿಪಿ ಮುಹಮ್ಮದ್‌ ಸುಲೈಮಾನ್‌ ಚೌಧರಿ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದ ಸೇನೆಯ ರಾಷ್ಟ್ರೀಯ ರೈಫಲ್ಸ್‌ನ ಕಮಾಂಡರ್‌ ಬ್ರಿಗೇಡಿಯರ್‌ ಎನ್‌.ಕೆ.ಮಿಶ್ರಾ, ‘ಈ ಭಾಗದಲ್ಲಿ ಲಷ್ಕರ್‌ ಎ ತಯಬಾ(ಎಲ್‌ಇಟಿ) ಹಾಗೂ ಜೈಶ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯ ಉಗ್ರರಷ್ಟೇ ಸಕ್ರಿಯರಾಗಿದ್ದರು. ಹಲವು ಸಮಯದ ಬಳಿಕ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯ ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ಭಾಗದಲ್ಲಿ ಈ ಉಗ್ರ ಸಂಘಟನೆಯ ಚಟುವಟಿಕೆ ಬಹಳ ಕಡಿಮೆ. ಇದೀಗ ಈ ಭಾಗದಲ್ಲಿ ಮತ್ತೆ ತನ್ನ ನೆಲೆಯನ್ನು ಸ್ಥಾಪಿಸಲು ಹಿಜ್ಬುಲ್‌ ಮುಜಾಹಿದ್ದೀನ್‌ ಪ್ರಯತ್ನಿಸುತ್ತಿದೆ’ ಎಂದರು. 

‘ಆದರೆ, ಇವರನ್ನು ಮಟ್ಟಹಾಕಲು ಸೇನೆಯು ಸಜ್ಜಾಗಿದೆ. ಯಾರಾದರೂ ಸಮಾಜದ ಮುಖ್ಯವಾಹಿನಿಗೆ ಆಗಮಿಸಲು ಇಚ್ಛಿಸಿದರೆ, ಅವರಿಗೆ ಸ್ವಾಗತ. ಆದರೆ, ಯಾರಾದರೂ ಭಯೋತ್ಪಾದಕರಾಗಬೇಕು ಎಂದು ಹೊರಟರೆ, ಅವರಿಗೆ ಯಾವ ಆಯ್ಕೆಯನ್ನೂ ನಾವು ನೀಡುವುದಿಲ್ಲ’ ಎಂದು ಎಚ್ಚರಿಸಿದರು.

ಹತ್ಯೆಯಾದ ಇಬ್ಬರು ಉಗ್ರರು ಸ್ಥಳೀಯರಾಗಿದ್ದು, ಶಫ್ಕತ್‌ ಅಲಿ ಖಾನ್‌ ಹಾಗೂ ಹನಾನ್‌ ಬಿಲಾಲ್‌ ಸೋಫಿ ಎಂದು ಗುರುತಿಸಲಾಗಿದೆ. ಮೂರನೇ ಉಗ್ರನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಸ್ಥಳದಿಂದ ಎರಡು ಎ.ಕೆ 47 ರೈಫಲ್‌ಗಳು, ನಾಲ್ಕು ಮ್ಯಾಗಜಿನ್‌, ಒಂದು ಪಿಸ್ತೂಲ್‌ ವಶಕ್ಕೆ ಪಡೆಯಲಾಗಿದೆ. ಮನೆಯಲ್ಲಿ ಅಡಗಿಕೊಂಡಿದ್ದ ಉಗ್ರರು ಮಕ್ಕಳು ಸೇರಿದಂತೆ 12 ನಾಗರಿಕರನ್ನು ಒತ್ತೆಯಾಳಾಗಿರಿಸಿದ್ದರು. ಉಗ್ರರು ಹಾಗೂ ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಸೇನೆಯ ಒಬ್ಬರು ಅಧಿಕಾರಿ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದರು. ‌ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು