ಶುಕ್ರವಾರ, ಆಗಸ್ಟ್ 19, 2022
27 °C
ಲೂಧಿಯಾನದಿಂದ ಪ್ರತಿಭಟನೆಗೆ ತೆರಳುತ್ತಿರುವ ಮಹಿಳೆಯರು

ದೆಹಲಿ: ರೈತರ ಪ್ರತಿಭಟನೆಗೆ ಮಹಿಳೆಯರ ಸಾಥ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೊಟ್ಟಿಗೆ, ಅವರ ಕುಟುಂಬದ ಮಹಿಳೆಯರು ಜತೆಯಾಗುತ್ತಿದ್ದಾರೆ.

‘ನಾವು ಗೃಹಿಣಿಯರು. ಮನೆ ನಡೆಸುವವರು ಹಾಗೆಯೇ ಕೃಷಿ ಮಾಡುವವರೂ ಸಹ. ಹಾಗಾಗಿ, ನಾವೂ ಪ್ರತಿಭಟನೆಗೆ ಹೊರಟಿದ್ದೇವೆ‘ ಎನ್ನುತ್ತಾರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಪಂಜಾಬ್‌ನ ಲೂಧಿಯಾನದ 53 ವರ್ಷದ ಮಹಿಳೆ ಮಂದೀಪ್ ಕೌರ್‌.

‘ಕೃಷಿ ವೃತ್ತಿಯನ್ನು ಲಿಂಗಾಧಾರಿತವಾಗಿ ವ್ಯಾನಿಸಿಲ್ಲ. ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಕೆಲಸ ಮಾಡಿದಾಗ, ಹೊಲಗಳಲ್ಲಿ ಬೆಳೆಗಳೇನು ಭಿನ್ನವಾಗಿ ಬೆಳೆಯುವುದಿಲ್ಲ. ನಾವೂ ಕೃಷಿ ಕೆಲಸಗಳಲ್ಲಿ ಸದಾ ಅವರೊಂದಿಗಿರುತ್ತೇವೆ. ಹಾಗಿದ್ದಾಗ, ನಾವು ಏಕೆ ಮನೆಯಲ್ಲಿ ಕುಳಿತುಕೊಳ್ಳಬೇಕು? ನಾವು ಪ್ರತಿಭಟನೆಗೆ ಜತೆಯಾಗುತ್ತೇವೆ‘ ಎಂದು ಅವರು ಹೇಳಿದ್ದಾರೆ.

‘ನಾವು ಮನೆಯನ್ನೂ ನೋಡಿಕೊಳ್ಳಬೇಕು. ಜತೆಗೆ ಹೋರಾಟವನ್ನೂ ಬೆಂಬಲಿಸಬೇಕು. ಎರಡೂ ಪಾತ್ರ ನಿರ್ವಹಿಸಬೇಕಿರುವುದರಿಂದ ಊರಿಗೆ ಮರಳುತ್ತಿದ್ದೇನೆ. ‘ನಾನು ಇಲ್ಲಿಗೆ ಬರುವ ಮೊದಲು, ಗದ್ದೆಗೆ ನೀರು ಹಾಯಿಸಿದ್ದೆ. ನಾನು ಹಿಂದಿರುಗಿ ಹೋಗುವವರೆಗೂ, ಆ ನೀರು ನನ್ನ ಭೂಮಿಯನ್ನು ರಕ್ಷಿಸುತ್ತಿರುತ್ತದೆ‘ ಎಂದು ಅವರು ಭಾವನಾತ್ಮಕವಾಗಿ ವಿವರಿಸಿದರು.

ಲೂಧಿಯಾನದಿಂದ ಸಿಂಘು ಗಡಿ ಪ್ರದೇಶಕ್ಕೆ ಬಸ್‌ನಲ್ಲಿ ಐದು ಗಂಟೆ ಕಾಲ ಪ್ರಯಾಣ ಬೆಳೆಸಿರುವ ಮಂದೀಪ್ ಅವರು,  ತನ್ನ ಒಡನಾಡಿ 68ರ ಹರೆಯದ ಸುಖ್ವೀಂದರ್ ಅವರನ್ನು ಜತೆಯಲ್ಲಿ ಕರೆದೊಯ್ದಿದ್ದಾರೆ. ಸುಖ್ವಿಂದರ್ ಕೌರ್ ಕೂಡ ಉತ್ಸಾಹದಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ‘ನನ್ನ ಸಹೋದರ, ಸೋದರ ಅಳಿಯ, ನಮ್ಮ ಎಲ್ಲ ರೈತ ಬಂಧುಗಳು ಪ್ರತಿಭಟನಾ ನಿರತರಾಗಿದ್ದಾಗ, ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ರಾತ್ರಿ ನಿದ್ರೆ ಬರಲಿಲ್ಲ. ಹಾಗಾಗಿ, ನಾನು ಇಲ್ಲಿಗೆ ಬಂದು ನಂತರ, ಸಮಾಧಾನವಾಯಿತು‘ ಎಂದು ಸುಖ್ವಿಂದರ್ ಕೌರ್ ಪ್ರತಿಕ್ರಿಯಿಸಿದರು.

ಸುಖ್ವಿಂದರ್, ಮಂದೀಪ್ ಸೇರಿದಂತೆ ಪ್ರತಿಭಟನೆಗೆ ಸಾಥ್ ನೀಡಲು ದೂರದೂರುಗಳಿಂದ ಬಂದಿರುವ ಮಹಿಳೆಯರು,  ವಿದೇಶಿ ಸ್ವಯಂ ಸೇವಾ ಸಮಸ್ಥೆ ಖಲ್ಸಾ ಏಡ್‌ ವ್ಯವಸ್ಥೆ ಮಾಡಿರುವ ವಾಟರ್‌ಫ್ರೂಪ್‌ ಟೆಂಟ್‌ಗಳಲ್ಲಿ ರಾತ್ರಿ ಮಲಗುತ್ತಿದ್ದಾರೆ. ‘ಇಲ್ಲಿ ಶೌಚಾಲಯ ಬಹಳ ದೂರವಿದೆ. ಆದರೆ, ಅದೆಲ್ಲ ದೊಡ್ಡ ವಿಚಾರವೇ ಅಲ್ಲ‘ ಎನ್ನುತ್ತಾರೆ ಸುಖ್ವಿಂದರ್ ಕೌರ್.

ಪಂಜಾಬ್‌ನ ಪ್ರಮುಖ ನಗರಗಳಿಂದ ಪುರುಷರು ಪ್ರತಿಭಟನೆ ನಡೆಯುತ್ತಿರುವ ಟಿಕ್ರಿ ಮತ್ತು ಸಿಂಘು ಗಡಿಯತ್ತ ತೆರಳಿ, ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದರೆ. ಹಾಗೆಯೇ, ಅನೇಕ ಮಹಿಳೆಯರು, ಹಳ್ಳಿಗಳಿಂದ ಪ್ರತಿಭಟನಾ ಸ್ಥಳಕ್ಕೆ ಬಸ್‌ನಲ್ಲಿ ಹೋಗಿ ಬಂದು ಮಾಡುತ್ತಿದ್ದಾರೆ. ಊರಲ್ಲಿ ಹೊಲ, ಗದ್ದೆಗಳಲ್ಲಿ ಕೆಲಸ ಮಾಡುತ್ತಾ, ಪ್ರತಿಭಟನೆಗೂ ಸಾಥ್ ನೀಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು