ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್‌ಡಿಎ‘ನಲ್ಲಿ ಮಂದಹಾಸ, ‘ಮಹಾಘಟಬಂಧನ‘ದಲ್ಲಿ ನಿರುತ್ಸಾಹ

ಬಿಹಾರ ಚುನಾವಣೆ; ಫಲಿತಾಂಶದ ಟ್ರೆಂಡ್‌ನ ಪರಿಣಾಮ
Last Updated 10 ನವೆಂಬರ್ 2020, 10:12 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ಚುನಾವಣಾ ಫಲಿತಾಂಶದ ಟ್ರೆಂಡ್‌ ಎನ್‌ಡಿಎ ಮೈತ್ರಿಕೂಟದ ಪರವಾಗಿದ್ದು, ಬಿಜೆಪಿ–ಜೆಡಿಯು ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದರೆ, ತಮ್ಮ ಪರವಾಗಿ ಫಲಿತಾಂಶ ಬರಬಹುದೆಂಬ ನಿರೀಕ್ಷೆಯಲ್ಲಿದ್ದ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಕಾರ್ಯಕರ್ತರ ಮನದಲ್ಲಿ ನಿರಾಸೆ ಭಾವ ಮೂಡಿಸಿದೆ.

ಮತಗಟ್ಟೆ ಸಮೀಕ್ಷೆಗಳು ಪ್ರಕಟವಾದ ನಂತರ ಮೂರು ದಿನಗಳಿಂದ ಮಂಕು ಕವಿದಿದ್ದ ಬಿಹಾರದ ಬಿಯರ್ ಚಂದ್‌ಪಾಟೀಲ್‌ ಪಾತ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಲವಲವಿಕೆ ಕಾಣಿಸುತ್ತಿದೆ. ಬಿಜೆಪಿಯ ಹಲವು ನಾಯಕರು, ಪಕ್ಷದ ಕಾರ್ಯಕರ್ತರ ಮುಖದಲ್ಲಿ ಮಂದಹಾಸ ಮೂಡುತ್ತಿದೆ.

ರಾಜ್ಯ ಬಿಜೆಪಿ ವಕ್ತಾರ ಸಂಜಯ್ ಸಿಂಗ್ ಟೈಗರ್ ಮಾತನಾಡಿ, ‘ಬಿಜೆಪಿ–ಜೆಡಿ(ಯು) ಮೈತ್ರಿಕೂಟ, ಒಂಥರಾ ಡಬಲ್ ಎಂಜಿನ್ ಸರ್ಕಾರಗಳ ಅಡಿಯಲ್ಲಿ ಕೆಲಸ ಮಾಡಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಎನ್‌ಡಿಎ ಒಕ್ಕೂಟ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಹಾಗಾಗಿ ಬಿಹಾರದ ಜನರು ನಮ್ಮನ್ನು ಆಶೀರ್ವದಿಸಿದ್ದಾರೆ‘ಎಂದು ಹೇಳಿದರು.

ಬಿಹಾರದ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದ ಅಭಿವೃದ್ಧಿಗೆ ವೇಗ ತುಂಬುತ್ತಾರೆಂಬ ವಿಶ್ವಾಸವಿಟ್ಟು, ಪುನಃ ಎನ್‌ಡಿಎ ಒಕ್ಕೂಟವನ್ನು ಅಧಿಕಾರಕ್ಕೆ ತರುತ್ತಿದ್ದಾರೆ‘ ಎಂದು ಟೈಗರ್ ಸುದ್ದಿಗಾರರಿಗೆ ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್ ಪಕ್ಷದ ಕಚೇರಿಯಲ್ಲಿ ಕುಳಿತು ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಅಧಿಕೃತ ನಿವಾಸದಲ್ಲೇ ಕುಳಿತು, ಮತ ಎಣಿಕೆ ಗಮನಿಸುತ್ತಿದ್ದಾರೆ.

ಬಿಹಾರದ ಜೆಡಿಯು ಅಧ್ಯಕ್ಷ ವಸಿಷ್ಠ ನಾರಾಯಣ ಸಿಂಗ್, ‘ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಬೇಕೆಂದು ಜನರು ಬಯಸಿದ್ದಾರೆ. ಎನ್‌ಡಿಎ ಒಕ್ಕೂಟ ಆಡಳಿತ ಮುಂದುವರಿಸ ಬೇಕೆಂಬುದು ಜನರ ಅಪೇಕ್ಷೆಯಾಗಿದೆ. ಹಾಗಾಗಿ ನಮ್ಮ ಮೈತ್ರಿ ಸರ್ಕಾರದ ಬಗ್ಗೆ ಮೊದಲಿನಿಂದಲೂ ವಿಶ್ವಾಸ ಹೊಂದಿದ್ದಾರೆ‘ ಎಂದು ಹೇಳಿದರು.

‘ಈ ಚುನಾವಣೆಯಲ್ಲಿ ಜೆಡಿ(ಯು)ಗಿಂತ ಬಿಜೆಪಿ ಉತ್ತಮ ಫಲಿತಾಂಶ ಪಡೆದಿದೆ. ಹಾಗಾಗಿ, ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯಲ್ಲೇ ಮುಂದುವರಿಯುತ್ತಾರೆಯೇ‘ ಎಂದು ಸುದ್ದಿಗಾರರ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣ್ ಸಿಂಗ್, ‘ಮೈತ್ರಿಕೂಟದ ಯಾವುದೇ ಪಕ್ಷಗಳು ಎಷ್ಟೇ ಸ್ಥಾನಗಳನ್ನು ಪಡೆದರೂ, ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಂದು ಬಿಜೆಪಿಯ ಪ್ರಮುಖ ನಾಯಕರು ಹೇಳಿದ್ದಾರೆ. ಹೀಗಿದ್ದಾಗ, ನಾನು ಈ ಪ್ರಶ್ನೆಗೆ ಸ್ಪಷ್ಟನೆ ನೀಡುವ ಅಗತ್ಯವಿದೆಯೇ‘ ಎಂದು ಸುದ್ದಿಗಾರರನ್ನೇ ಪ್ರಶ್ನಿಸಿದರು.

ಜೆಡಿಯು ವಕ್ತಾರ್ ಅಜಯ್ ಲೋಕ್, ‘ಬಿಹಾರದ ಜನರು ನಿತೀಶ್ ಕುಮಾರ್ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದಾರೆ ಎಂಬುದು ಎನ್‌ಡಿಎ ಪರವಾಗಿ ವ್ಯಕ್ತವಾಗುತ್ತಿರುವ ಟ್ರೆಂಡ್‌ನಲ್ಲಿ ಗೋಚರವಾಗುತ್ತಿದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT