ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಚಿಕೆಯಿಂದ ತಲೆ ತಗ್ಗಿಸುತ್ತೇನೆ: ನ್ಯಾಯಾಂಗದ ಸ್ಥಿತಿ ಬಗ್ಗೆ ಕಪಿಲ್‌ ಸಿಬಲ್‌

ಮಹಮ್ಮದ್‌ ಜುಬೈರ್‌, ತೀಸ್ತಾ ಸೆಟಲ್‌ವಾಡ್‌ ಬಂಧನದ ಬಗ್ಗೆ ಮಾತನಾಡಿದ ರಾಜ್ಯಸಭಾ ಸಂಸದ
Last Updated 3 ಜುಲೈ 2022, 13:01 IST
ಅಕ್ಷರ ಗಾತ್ರ

ನವದೆಹಲಿ: ಪ್ರಸ್ತುತ ನ್ಯಾಯಾಂಗದ ಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜಸ್ಯಭಾ ಸಂಸದ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು, ನ್ಯಾಯಾಂಗದ ಕೆಲವು ಸದಸ್ಯರು ನಮ್ಮನ್ನು ತಲೆ ತಗ್ಗಿಸುವಂತೆ ಮಾಡಿದರು ಮತ್ತು ಇತ್ತೀಚೆಗೆ ನಡೆದ ಬೆಳವಣಿಗೆಗೆ ಸಂಬಂಧಿಸಿ ನಾನು ನಾಚಿಕೆಯಿಂದ ತಲೆ ತಗ್ಗಿಸುತ್ತೇನೆ ಎಂದಿದ್ದಾರೆ.

ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕ ಮಹಮ್ಮದ್‌ ಜುಬೈರ್‌, ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌ ಬಂಧನ ಹಾಗೂ ಮತ್ತಿತರ ಪ್ರಕರಣಗಳ ಬಗ್ಗೆ ಮಾತನಾಡುತ್ತ ಈ ಮಾತನ್ನು ಹೇಳಿದ್ದಾರೆ.

ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಸಿಬಲ್‌ ಅವರು ಇತ್ತೀಚಿನ ವರ್ಷಗಳಲ್ಲಿ ವಾಕ್‌ ಸ್ವಾತಂತ್ರ್ಯದ ಬಗ್ಗೆ ಮತ್ತು ಅದನ್ನು ಸುಪ್ರೀಂ ಕೋರ್ಟ್‌ ವ್ಯಾಖ್ಯಾನಿಸುತ್ತಿರುವ ಬಗ್ಗೆ ಹಾಗೂ ಸಂವಿಧಾನ ಒಪ್ಪುವಂತಹ ಸಂಗತಿಗಳಿಗೆ ತಡೆಯೊಡ್ಡುತ್ತಿರುವ ಬಗ್ಗೆ ಮಾತನಾಡಿದರು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಪಿಲ್‌ ಸಿಬಲ್‌, ರಾಷ್ಟ್ರದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸಂಸ್ಥೆಗಳ ಕತ್ತು ಹಿಸುಕಲಾಗುತ್ತಿದೆ. ಪ್ರತಿನಿತ್ಯ ಕಾನೂನು ಉಲ್ಲಂಘನೆಗಳು ಸಂಭವಿಸುತ್ತಿವೆ. ಬಿಜೆಪಿಯು ಕೇವಲ ಕಾಂಗ್ರೆಸ್‌ ಮುಕ್ತ ಭಾರತವನ್ನು ಬಯಸುತ್ತಿಲ್ಲ, ಪ್ರತಿಪಕ್ಷಗಳೇ ಇಲ್ಲದ ಭಾರತವನ್ನು ಬಯಸುತ್ತಿದೆ ಎಂದು ಆರೋಪಿಸಿದರು.

ಇಂಗ್ಲೆಂಡ್‌ನಲ್ಲಿರುವ ಕಪಿಲ್‌ ಸಿಬಲ್‌ ದೂರವಾಣಿ ಮೂಲಕ ಮಾತನಾಡಿದರು. ನಾನು 50 ವರ್ಷಗಳಿಂದ ಭಾಗಿಯಾಗಿರುವ ಸಂಸ್ಥೆಯ (ನ್ಯಾಯಾಂಗ) ಕೆಲವು ಸದಸ್ಯರು ನಮ್ಮನ್ನು ತಲೆತಗ್ಗಿಸುವಂತೆ ಮಾಡಿದರು. ಹೀಗಾಗಿದ್ದಕ್ಕೆ ನಾನು ನನ್ನ ತಲೆಯನ್ನು ನಾಚಿಕೆಯಿಂದ ತಗ್ಗಿಸುತ್ತೇನೆ. ಇಂತಹ ವಿಚಾರಗಳಲ್ಲಿ ನ್ಯಾಯಾಂಗ ಕುರುಡಾದರೆ ಕಣ್ಣೆದುರಲ್ಲೇ ಕಾನೂನು ಉಲ್ಲಂಘನೆಯಾಗುತ್ತದೆ ಎಂದರು.

ದೆಹಲಿ ಕೋರ್ಟ್‌ ಮಹಮ್ಮದ್‌ ಜುಬೇರ್‌ಗೆ ಜಾಮೀನು ನಿರಾಕರಿಸಿದ ಬಗ್ಗೆ, ನಾಲ್ಕು ವರ್ಷಗಳ ಹಿಂದಿನ ಒಂದು ಟ್ವೀಟ್‌, ಅದರ ಕಾರಣದಿಂದ ಯಾವುದೇ ಮತೀಯ ಗಲಭೆಗಳು ನಡೆದಿರದಿದ್ದರೂ, ಅವರನ್ನು ಬಂಧಿಸಿರುವುದು ಘೋರವಾದುದು ಎಂದರು.

ಬಂಧನಕ್ಕೆ ಕಾರಣವಾದ ಮೂಲ ಟ್ವೀಟ್‌ನಿಂದ ಏನನ್ನೂ ಸಾಧಿಸಲಾಗದ ತನಿಖಾ ತಂಡವು ಇದೀಗ ಬೇರೆ ವಿಚಾರಗಳನ್ನು ಹುಡುಕುತ್ತಿದೆ. ಇದೊಂದು ದುರುದ್ದೇಶಪೂರಿತ ಬಂಧನ.ನಂತರದ ತನಿಖೆಯೂ ಕುತಂತ್ರದಿಂದ ಕೂಡಿದೆ ಎಂದು ಸಿಬಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT