ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

150 ದೇಶಗಳಿಗೆ ಭಾರತದಿಂದ ಕೋವಿಡ್ ನೆರವು:‌ ಮೋದಿ ಮಾತು ಅಲ್ಲಗಳೆದ ಆರ್‌ಟಿಐ ಮಾಹಿತಿ

Last Updated 29 ಅಕ್ಟೋಬರ್ 2020, 11:02 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ಭಾರತವು 150 ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ಮತ್ತು ಇತರ ನೆರವು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜುಲೈ ಮಧ್ಯದಲ್ಲಿ ವಿಶ್ವಸಂಸ್ಥೆ ವೇದಿಕೆಯಲ್ಲಿ ತಿಳಿಸಿದ್ದರು. ಆದರೆ, ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗೆ ಕೇಂದ್ರ ಸರ್ಕಾರ ಬೇರೆಯದ್ದೇ ಉತ್ತರ ನೀಡಿದೆ. ಕೇಂದ್ರವು ಆಗಸ್ಟ್‌ ಮೊದಲ ವಾರದ ಹೊತ್ತಿಗೆ 81 ದೇಶಗಳಿಗೆ, ₹97.73 ಕೋಟಿಯಷ್ಟು ನೆರವು ನೀಡಿದೆ ಎಂದು ತಿಳಿಸಿದೆ.

ಆಗಸ್ಟ್‌ 5ರ ವರೆಗಿನ ಮಾಹಿತಿ ಪ್ರಕಾರ ಚೀನಾ ಭಾರತದಿಂದ ₹1.87 ಮೊತ್ತದ ನೆರವು ಪಡೆದುಕೊಂಡಿದೆ ಎಂದು ವಿದೇಶಾಂಗ ಇಲಾಖೆಯು, ಆರ್‌ಟಿಐ ಕಾರ್ಯಕರ್ತ ವೆಂಕಟೇಶ್‌ ನಾಯಕ್‌ ಎಂಬುವವರಿಗೆ ನೀಡಿದ ಮಾಹಿತಿಯಲ್ಲಿ ಉಲ್ಲೇಖಿಸಿದೆ.

ಇನ್ನೂ ಕುತೂಹಲಕಾರಿ ವಿಷಯವೆಂದರೆ, ₹1.87 ಕೋಟಿ ಮೊತ್ತದ ಈ ನೆರವಿನ ಸಾರಿಗೆ ವೆಚ್ಚವಾಗಿ ಭಾರತ ₹4.24 ಕೋಟಿಯನ್ನು ಖರ್ಚು ಮಾಡಿದೆ ಎಂದು ಕೇಂದ್ರವೇ ನೀಡಿದ ಮಾಹಿತಿಯಲ್ಲಿ ಹೇಳಲಾಗಿದೆ. ವೆಂಕಟೇಶ್‌ ನಾಯಕ್‌ ಅವರು ಮಾಹಿತಿ ಕೋರಿ ಮೇ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರಾದರೂ, ಪ್ರತಿಕ್ರಿಯೆ ಸಿಕ್ಕಿರುವುದು ಸೆಪ್ಟೆಂಬರ್‌ನಲ್ಲಿ.

ಆದರೆ, ಕೇಂದ್ರ ಸರ್ಕಾರ ನೀಡಿರುವ ಈ ಮಾಹಿತಿಯು ಮಾರ್ಚ್‌ 18ರಂದು ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ ಮುರಳೀಧರನ್‌ ಅವರು ಲೋಕಸಭೆಯಲ್ಲಿ ನೀಡಿದ ಮಾಹಿತಿಗೆ ವ್ಯತಿರಿಕ್ತವಾಗಿದೆ. ಅಂದು ಲೋಕಸಭೆಗೆ ಮಾಹಿತಿ ನೀಡಿದ್ದ ಸಚಿವ ಮುರುಳಿಧರನ್‌ ಅವರು, ಚೀನಾಕ್ಕೆ ₹2.11 ಕೋಟಿ ಮೊತ್ತದ ವೈದ್ಯಕೀಯ ನೆರವು ನೀಡಿರುವುದಾಗಿ ಹೇಳಿದ್ದರು.

ಫೆಬ್ರವರಿ 26 ರಂದು ಭಾರತ ಸರ್ಕಾರವು ಒಂದು ಲಕ್ಷ ಸರ್ಜಿಕಲ್‌ ಮಾಸ್ಕ್‌, ಐದು ಲಕ್ಷ ಗ್ಲೌಸ್‌, 75 ಇನ್ಫ್ಯೂಷನ್ ಪಂಪ್‌ಗಳು, 30 ಎಂಟರಲ್ ಫೀಡಿಂಗ್ ಪಂಪ್‌ಗಳು, 21 ಡಿಫಿಬ್ರಿಲೇಟರ್‌ಗಳು ಮತ್ತು 4,000 ಎನ್-95 ಮಾಸ್ಕ್‌ಗಳನ್ನು ಒಳಗೊಂಡ ₹2.11 ಕೋಟಿ ಮೊತ್ತದ 15 ಟನ್ ವೈದ್ಯಕೀಯ ಸಹಾಯವನ್ನು ಚೀನಾಕ್ಕೆ ಒದಗಿಸಿದೆ. ಭಾರತೀಯ ವಾಯುಪಡೆಯ ಸಿ–17 ವಿಮಾನವು ಇವುಗಳನ್ನು ಹೊತ್ತು ವುಹಾನ್‌ಗೆ ತಲುಪಿಸಿದೆ ಎಂದು ಸಚಿವರು ಲೋಕಸಭೆಯಲ್ಲಿ ಹೇಳಿದ್ದರು.

ಜುಲೈ 17 ರಂದು ನಡೆದ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಅಧಿವೇಶನದ ಉನ್ನತ ಮಟ್ಟದ ಸಮಾರಂಭದಲ್ಲಿ ಪ್ರಧಾನಿ ಮಾಡಿದ್ದ ಭಾಷಣಕ್ಕೂ, ಈಗ ಸರ್ಕಾರವೇ ನೀಡಿರುವ ಅಂಕಿ ಅಂಶಗಳಿಗೂ ವ್ಯತ್ಯಾಸಗಳು ಕಂಡು ಬಂದಿದೆ. ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ‘ಕೋವಿಡ್-19 ವಿರುದ್ಧದ ನಮ್ಮ ಜಂಟಿ ಹೋರಾಟದಲ್ಲಿ, ನಾವು 150 ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ಮತ್ತು ಇತರ ನೆರವಿನ ಸಹಾಯ ಹಸ್ತ ಚಾಚಿದ್ದೇವೆ,’ ಎಂದು ಹೇಳಿದ್ದರು.
ಆದರೆ, ವಿದೇಶಾಂಗ ಇಲಾಖೆ ನೀಡಿರುವ ಆಗಸ್ಟ್ 5ರ ವರೆಗಿನ ಮಾಹಿತಿ ಪ್ರಕಾರ 81 ದೇಶಗಳಿಗೆ ಮಾತ್ರ ನೆರವು ನೀಡಲಾಗಿದೆ.

‘ಭಾರತವು 150 ದೇಶಗಳಿಗೆ ನೆರವು ನೀಡಿದೆ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ವಿದೇಶಾಂಗ ಇಲಾಖೆ ನೀಡಿದ ಇತ್ತೀಚಿನ ಮಾಹಿತಿ ಪ್ರಕಾರ 81 ದೇಶಗಳಿಗೆ ನೆರವು ಸೀಮಿತವಾಗಿದೆ. ಭಾರತದಿಂದ ನೆರವು ಪಡೆದ ಉಳಿದ ದೇಶಗಳು ಯಾವುವು ಎಂಬುದು ತಿಳಿಯುತ್ತಿಲ್ಲ’ ಎಂದು ಆರ್‌ಟಿಐ ಕಾರ್ಯಕರ್ತ ವೆಂಕಟೇಶ್‌ ನಾಯಕ್‌ ‘ಪ್ರಜಾವಾಣಿ’ಯ ಸೋದರ ಪತ್ರಿಕೆ ‘ಡೆಕ್ಕನ್‌ ಹೆರಾಲ್ಡ್‌’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT