ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದದ ಕಿಡಿ ಹೊತ್ತಿಸಿದ ಕೋವಿಡ್‌ ಲಸಿಕೆ: ರಾಜಕೀಯ ನಾಯಕರ ಕೆಸರೆರಚಾಟ

Last Updated 3 ಜನವರಿ 2021, 16:16 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಚಿಕಿತ್ಸೆಗಾಗಿ ಭಾರತದಲ್ಲಿ ತಯಾರಿಸಲಾದ ಎರಡು ಲಸಿಕೆಗಳಿಗೆ ಅನುಮೋದನೆ ದೊರೆತಿರುವ ವಿಚಾರವೀಗ ರಾಜಕೀಯ ನಾಯಕರ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದೆ.

ಕೋವಿಡ್‌ ಲಸಿಕೆಗಳ ತುರ್ತುಬಳಕೆಗೆ ಅನುಮೋದನೆ ನೀಡಿರುವುದನ್ನು ಪ್ರಶ್ನಿರುವ ಕಾಂಗ್ರೆಸ್‌ ನಾಯಕ ಶಶಿ ತರೂರ್‌, 'ಕೊವಾಕ್ಸಿನ್‌ನ ಮೂರನೇ ಹಂತದ ಪ್ರಯೋಗಗಳು ಇನ್ನೂ ಮುಗಿದಿಲ್ಲ. ಈ ನಿರ್ಧಾರವು ಸಕಾಲಿಕವಲ್ಲದ್ದು ಮತ್ತು ಅಪಾಯಕಾರಿಯಾಗಿ ಪರಿಣಮಿಸಬಹುದು. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಸ್ಪಷ್ಟಪಡಿಸಬೇಕು. ಕೊನೆಯ ಹಂತದ ಪ್ರಯೋಗಗಳು ಮುಗಿಯುವವರೆಗೆ ಇದರ ಬಳಕೆಯನ್ನು ನಿಲ್ಲಿಸಬೇಕು. ಈ ಮಧ್ಯೆ ಅಸ್ಟ್ರಾಜೆನೆಕಾ ಲಸಿಕೆ ಉಪಯೋಗವನ್ನು ಭಾರತ ಪ್ರಾರಂಭಿಸಬಹುದು' ಎಂದು ಹೇಳಿದ್ದಾರೆ.

ಬಿಜೆಪಿ ನೀಡುತ್ತಿರುವ ಕೋವಿಡ್ ಲಸಿಕೆ ನಂಬಲರ್ಹವಲ್ಲ ಎಂದಿರುವ ಸಮಾಜವಾದಿ ನಾಯಕ ಅಖಿಲೇಶ್‌ ಯಾದವ್‌, 'ಬಿಜೆಪಿ ಸರ್ಕಾರ ನೀಡುತ್ತಿರುವ ಲಸಿಕೆಯನ್ನು ನಾನು ಹಾಕಿಸಿಕೊಳ್ಳುವುದಿಲ್ಲ. ನನಗೆ ಅವರ ಮೇಲೆ ನಂಬಿಕೆ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲರಿಗೂ ಉಚಿತ ಲಸಿಕೆ ನೀಡುತ್ತೇವೆ' ಎಂದು ತಿಳಿಸಿದ್ದಾರೆ.

ಕೋವಿಡ್‌ ಲಸಿಕೆಯ ಬಗೆಗಿನ ವಿರೋಧ ಪಕ್ಷಗಳ ನಾಯಕರ ಈ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, 'ಕಾಂಗ್ರೆಸ್‌ ಸೇರಿದಂತೆ ಇತರ ಪ್ರತಿಪಕ್ಷಗಳು ಭಾರತೀಯತೆಯ ಬಗ್ಗೆ ಹೆಮ್ಮೆ ಪಡುವುದಿಲ್ಲ. ಕೆಲ ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ಕೋವಿಡ್‌ ಲಸಿಕೆಯ ಬಗ್ಗೆ ಸುಳ್ಳನ್ನು ಹಬ್ಬುತ್ತಿವೆ. ಇದನ್ನೇ ಕಾರ್ಯಸೂಚಿಯನ್ನಾಗಿ ಬಳಸಲಾಗುತ್ತಿದೆ. ಈ ಕುರಿತು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಭಾರತದ ಜನರು ಇಂತಹ ರಾಜಕೀಯವನ್ನು ತಿರಸ್ಕರಿಸುತ್ತಿದ್ದಾರೆ ಮತ್ತು ಭವಿಷ್ಯದಲ್ಲಿ ಅದನ್ನು ಮುಂದುವರಿಸುತ್ತಾರೆ' ಎಂದು ಹೇಳಿದ್ದಾರೆ.

'ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷದ ನಾಯಕರು ಜನರ ಮನಸ್ಸಿನಲ್ಲಿ ಭೀತಿ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ. ಇತರ ಸಮಸ್ಯೆಗಳ ಮೇಲೆ ರಾಜಕೀಯ ಮಾಡಲು ನಾನು ಅವರನ್ನು ಒತ್ತಾಯಿಸುತ್ತೇನೆ. ಅವರು ಜನರ ಅಮೂಲ್ಯ ಜೀವನ ಮತ್ತು ಕಷ್ಟಪಟ್ಟು ಸಂಪಾದಿಸಿದ ಜೀವನೋಪಾಯದೊಂದಿಗೆ ಆಟವಾಡುವುದನ್ನು ನಿಲ್ಲಿಸಲಿ' ಎಂದು ನಡ್ಡಾ ಟ್ವೀಟ್‌ ಮಾಡಿದ್ದಾರೆ.

ಲಸಿಕೆಗಳ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದ್ದಕ್ಕಾಗಿ ಕೇಂದ್ರ ಸಚಿವ ಹರ್‌ದೀಪ್‌ ಸಿಂಗ್ ಪುರಿ ಅವರು ಶಶಿ ತರೂರ್ ಹಾಗೂ ಅಖಿಲೇಶ್‌ ಯಾದವ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ಸಿನಿಕರಾಗಿರುವ ಶಶಿ ತರೂರ್ ಮತ್ತು ಅಖಿಲೇಶ್ ಯಾದವ್‌ ತಮ್ಮ ನಿಜ ರೂಪವನ್ನು ತೋರಿಸುತ್ತಿದ್ದಾರೆ. ಅವರು ಮೊದಲು ನಮ್ಮ ಸೈನಿಕರ ಶೌರ್ಯವನ್ನು ಪ್ರಶ್ನಿಸಿದರು. ಈಗ ಭಾರತದಲ್ಲಿ ತಯಾರಿಸಲಾದ ಕೋವಿಡ್‌ ಲಸಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ರಾಜಕೀಯ ಬದುಕಿನ ಅಂತ್ಯದ ಅನ್ವೇಷಣೆಯಲ್ಲಿರುವುದು ಸ್ಪಷ್ಟವಾಗುತ್ತಿದೆ' ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್ ಪುರಿ ಹೇಳಿದ್ದಾರೆ.

ಲಸಿಕೆ ಬಗ್ಗೆ ಅಖಿಲೇಶ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, 'ಇಷ್ಟು ಕಡಿಮೆ ಸಮಯದಲ್ಲಿ ಲಸಿಕೆ ನೀಡಿದ ವಿಜ್ಞಾನಿಗಳ ಶ್ರಮವನ್ನು ಅಖಿಲೇಶ್‌ ಪ್ರಶ್ನಿಸಿದ್ದಾರೆ. ಅವರು ಕ್ಷಮೆಯಾಚಿಸಲಿ' ಎಂದು ಒತ್ತಾಯಿಸಿದ್ದಾರೆ.

ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ ಸಂಸ್ಥೆಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಷರತ್ತುಬದ್ಧ ಲಸಿಕೆ ಬಳಕೆಗೆ ಡಿಸಿಜಿಐ ಭಾನುವಾರ ಅನುಮೋದನೆ ನೀಡಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆಗಳು 'ಕೋವಿಶೀಲ್ಡ್' ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT