ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಪರಿಸ್ಥಿತಿ ಹದಗೆಡಲು ಮೋದಿ ಸರ್ಕಾರದ ನಿರ್ವಹಣಾ ವೈಫಲ್ಯ ಕಾರಣ: ಕಾಂಗ್ರೆಸ್

Last Updated 27 ಫೆಬ್ರುವರಿ 2021, 5:42 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಜನ ಆರ್ಥಿಕ ಬೆಳವಣಿಗೆ ಕುಂಠಿತ ಹಾಗೂ ಹಣದುಬ್ಬರ ಏರಿಕೆಯ ಎರಡೆರಡು ಹೊಡೆತಕ್ಕೆ ಸಿಲುಕಿದ್ದಾರೆ. ಆರ್ಥಿಕ ಸ್ಥಿತಿಯು ಈ ಮಟ್ಟಕ್ಕೆ ತಲುಪಲು ಮೋದಿ ಸರ್ಕಾರದ ತಪ್ಪು ನಿರ್ವಹಣೆಯೇ ಕಾರಣ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ತಯಾರಿಕೆ, ಕಟ್ಟಡ ನಿರ್ಮಾಣ ಮತ್ತು ಕೃಷಿ ವಲಯಗಳಲ್ಲಿ ಚೇತರಿಕೆ ಕಂಡುಬಂದ ಕಾರಣದಿಂದಾಗಿ ದೇಶದ ಅರ್ಥ ವ್ಯವಸ್ಥೆಯು ಡಿಸೆಂಬರ್‌ ತ್ರೈಮಾಸಿಕದಲ್ಲಿ ಬೆಳವಣಿಗೆಯ ಹಾದಿಗೆ ಮರಳಿದೆ. ಜಿಡಿಪಿಯು 0.4ರಷ್ಟು ಬೆಳವಣಿಗೆ ಕಂಡಿದೆ ಎಂದು ಶುಕ್ರವಾರ ವರದಿಯಾಗಿತ್ತು. ಆದರೆ, ಹಿಂದಿನ ಸತತ ಎರಡು ತ್ರೈಮಾಸಿಕಗಳಲ್ಲಿ ದೇಶದ ಅರ್ಥ ವ್ಯವಸ್ಥೆಯು ಹಿಂಜರಿತ ಅನುಭವಿಸಿತ್ತು.

ಮೂರನೇ ತ್ರೈಮಾಸಿಕದ ಜಿಡಿಪಿ ದತ್ತಾಂಶವು ಭಾರತೀಯ ಆರ್ಥಿಕತೆಯಲ್ಲಿ ದೋಷದ ಅಂಶಗಳು ಹಿಂದೆಂದಿಗಿಂತಲೂ ಹೆಚ್ಚು ಗೋಚರಿಸುತ್ತವೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲ ಹೇಳಿದ್ದಾರೆ.

2020-21ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆರ್ಥಿಕತೆಯು ಕೇವಲ ಶೇ 0.4 ರಷ್ಟು ಬೆಳವಣಿಗೆ ಕಂಡಿದೆ. ಇದು ಅಂದಾಜಿಸಿದ್ದಕ್ಕಿಂತಲೂ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.

‘ಇಡೀ ಹಣಕಾಸು ವರ್ಷದ ಮುಂಗಡ ಅಂದಾಜಿನ ಬಗ್ಗೆ ಕಾಳಜಿ ವಹಿಸಬೇಕಿದೆ. 2020–21ನೇ ಸಾಲಿನ ಜಿಡಿಪಿ ಬೆಳವಣಿಗೆ ದರ ಶೇ –7.7ರಷ್ಟಿರಲಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿಯು ಈ ಹಿಂದೆ ಅಂದಾಜಿಸಿತ್ತು. ಆದರೆ ಈಗ ಶೇ –8ರಷ್ಟಿರಲಿದೆ ಎಂದು ಹೇಳಿದೆ’ ಎಂದು ಅವರು ಹೇಳಿದ್ದಾರೆ.

ಮೊದಲ ತ್ರೈಮಾಸಿಕದ ಜಿಡಿಪಿ ಶೇ –23.9 ಇರಲಿದೆ ಎಂದು ಈ ಹಿಂದೆ ಅಂದಾಜಿಸಿದ್ದರೆ ಈಗ ಪರಿಷ್ಕರಣೆಗೊಳಿಸಿ ಶೇ –24.4 ಎಂದಿರುವುದೂ ಗಮನಾರ್ಹ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರಿಯಾದ ಯೋಜನೆಯಿಲ್ಲದ ಮತ್ತು ಸಮರ್ಪಕವಲ್ಲದ ಲಾಕ್‌ಡೌನ್‌ನಿಂದಾಗಿ ಆರ್ಥಿಕತೆಯು ಹೊಡೆತ ಅನುಭವಿಸುವಂತಾಗಿದೆ. ಇದು ಈಗಾಗಲೇ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಅಸಮರ್ಪಕ ಅನುಷ್ಠಾನ, ನೋಟು ರದ್ದತಿಯಿಂದ ಆದ ಏಟಿಗೆ ಬರೆ ಎಳೆದಂತಾಗಿದೆ ಎಂದು ಸುರ್ಜೆವಾಲ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT