ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಅರ್ಥಿಕ ವರ್ಷದಲ್ಲಿ ₹45,000 ಕೋಟಿಗೆ ಏರಲಿದೆ ದೇಶದ ಲಸಿಕಾ ವೆಚ್ಚ

Last Updated 8 ಜೂನ್ 2021, 2:33 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಪ್ರಧಾನಿ ಸೋಮವಾರ ಘೋಷಿಸಿದ್ದಾರೆ. ಹೀಗಾಗಿ ಪ್ರಸಕ್ತ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ಭಾರತ ಲಸಿಕೆಗಳ ಮೇಲಿನ ವೆಚ್ಚವನ್ನು ₹45 ಸಾವಿರ ಕೋಟಿಯಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ,’ ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.

45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ನೀಡಲಾಗುವ ಲಸಿಕೆಗೆ ರಾಜ್ಯ ಸರ್ಕಾರಗಳೇ ಹಣ ಪಾವತಿಸಬೇಕು ಎಂಬ ಕೇಂದ್ರದ ನೀತಿಯು ವ್ಯಾಪಕವಾಗಿ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ, ಎಲ್ಲ ವಯಸ್ಕರಿಗೆ ನೀಡಲಾಗುವ ಲಸಿಕೆಯ ವೆಚ್ಚವನ್ನು ಜೂನ್ 21 ರಿಂದ ಒಕ್ಕೂಟ ಸರ್ಕಾರವೇ ಭರಿಸಲಿದೆ ಎಂದು ಪ್ರಧಾನಿ ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ ಘೋಷಿಸಿದ್ದರು.

ಪ್ರಧಾನಿ ನಿರ್ಧಾರದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆಗುವ ಆರ್ಥಿಕ ಹೊರೆಯ ಕುರಿತು ಸರ್ಕಾರದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಏಪ್ರಿಲ್‌ 1ರಿಂದ ಆರಂಭವಾಗಿರುವ ಲಸಿಕೆ ಅಭಿಯಾನಕ್ಕೆ ಭಾರತವು ಈ ಹಣಕಾಸು ವರ್ಷದಲ್ಲಿ ₹45 ಸಾವಿರ ಕೋಟಿ ವಿನಿಯೋಗಿಸಲಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲಸಿಕೆ ಅಭಿಯಾನಕ್ಕೆ ಭಾರತ ಸರ್ಕಾರವು ಬಜೆಟ್‌ನಲ್ಲಿ ₹35 ಸಾವಿರ ಕೋಟಿ ಮೀಸಲಿಟ್ಟಿತ್ತು.

‘ದೇಶಿಯವಾಗಿ ತಯಾರಿಸಲಾದ ಲಸಿಕೆ ವೆಚ್ಚ ಈ ಹಿಂದಿಗಿಂತಲೂ ಅಧಿಕವಾಗಿವುದರಿಂದ ಅರ್ಥಿಕ ಹೊರೆ ಸೃಷ್ಟಿಯಾಗಿರಬಹುದು,’ ಎಂದೂ ಸರ್ಕಾರದ ಕೆಲ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ಕುರಿತು ಹೆಚ್ಚಿನ ಮಾಹಿತಿ ಒದಗಿಸಲು ನಿರಾಕರಿಸಿದ್ದಾರೆ.

ಲಸಿಕೆ ಉಚಿತ ವಿತರಣೆಯಿಂದಾಗುವ ಆರ್ಥಿಕ ಹೊರೆ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಹಣಕಾಸು ಇಲಾಖೆಗೆ ಕೋರಲಾಗಿದೆಯಾದರೂ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ತಿಳಿಸಿದೆ.

ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ ತಯಾರಿಸುತ್ತಿರುವ ಅಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್‌, ಭಾರತ್‌ ಬಯೊಟೆಕ್‌ನ ಕೋವ್ಯಾಕ್ಸಿನ್‌ ಅನ್ನು ಭಾರತದ ಲಸಿಕೆ ಅಭಿಯಾನದಲ್ಲಿ ಬಳಸಲಾಗುತ್ತಿದೆ. ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಈ ತಿಂಗಳು ವಾಣಿಜ್ಯಿಕವಾಗಿ ಬಿಡುಗಡೆ ಮಾಡಲಾಗುತ್ತಿದೆ.

ಲಸಿಕೆ ನೀತಿಯಲ್ಲಿನ ಕೇಂದ್ರದ ನಿಲುವು ಬದಲಾವಣೆಯು ಕೋವಿಡ್ -19 ಸಾಂಕ್ರಾಮಿಕ ರೋಗದ ನಿಯಂತ್ರಣದ ಅಗತ್ಯವನ್ನು ಒತ್ತಿಹೇಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT