ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕಾ ಅಭಿಯಾನ: 75 ಲಕ್ಷ ನೋಂದಣಿ

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿಕೆ
Last Updated 2 ಜನವರಿ 2021, 19:32 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಕೋ-ವಿನ್ ಡಿಜಿಟಲ್ ವೇದಿಕೆಯಲ್ಲಿ ಈವರೆಗೆ 75 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶನಿವಾರ ಹೇಳಿದರು.

ಲಸಿಕಾ ಅಭಿಯಾನದಲ್ಲಿ ಡಿಜಿಟಲ್ ವೇದಿಕೆಯಾದ ಕೋ-ವಿನ್ ಮಹತ್ವದ ಪಾತ್ರ ವಹಿಸಲಿದೆ. ಲಸಿಕೆ ದಾಸ್ತಾನು ಮಾಹಿತಿ, ಶೇಖರಣಾ ತಾಪಮಾನ ಮತ್ತು ಫಲಾನುಭವಿಗಳ ಮಾಹಿತಿಯನ್ನು ಒದಗಿ ಸುತ್ತದೆ ಎಂದು ಅವರು ಹೇಳಿದರು.

ಲಸಿಕೆಗಾಗಿ ಕೋವಿನ್ ಪೋರ್ಟಲ್‌ನಲ್ಲಿ ಮೊದಲೇ ನೋಂದಣಿ ಮಾಡಿಕೊಂಡವರಿಗೆ ಸ್ವಯಂಚಾಲಿತವಾಗಿ ಲಸಿಕೆ ನೀಡಿಕೆ ವೇಳಾಪಟ್ಟಿ ನೀಡಲಾಗುತ್ತದೆ. ಲಸಿಕೆ ನೀಡುವ ದಿನಾಂಕ, ಅವಧಿ, ಕೇಂದ್ರ ಮೊದಲಾದ ಮಾಹಿತಿ ತನ್ನಿಂತಾನೇ ಹಂಚಿಕೆಯಾಗುತ್ತದೆ. ಲಸಿಕೆ ನೀಡಿದ ಬಳಿಕ ಡಿಜಿಟಲ್ ರೂಪದ ಪ್ರಮಾಣಪತ್ರ ಸಿದ್ಧವಾಗುತ್ತದೆ.

ವದಂತಿಗೆ ಕಿವಿಗೊಡಬೇಡಿ: ದೇಶದ ಬೃಹತ್ ಕೋವಿಡ್ ಲಸಿಕಾ ಅಭಿಯಾನ ಕುರಿತ ಯಾವುದೇ ವರದಿಗಳನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಮೊದಲು ಮಾಧ್ಯಮಗಳು ಪರಿಶೀಲಿಸಬೇಕು. ಜವಾಬ್ದಾರಿಯಿಂದ ಹಾಗೂ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಸಚಿವ ಹರ್ಷವರ್ಧನ್ ಸೂಚನೆ ನೀಡಿದರು.

‘ಈ ಹಿಂದೆ ಹಲವು ಲಸಿಕಾ ಕಾರ್ಯಕ್ರಮಗಳನ್ನು ಭಾರತ ಯಶಸ್ವಿಗೊಳಿಸಿದೆ. ಈ ವಿಚಾರದಲ್ಲಿ ಸಾಟಿಯಿಲ್ಲದ ಅನುಭವವನ್ನು ಹೊಂದಿದೆ. ನಮ್ಮ ಬದ್ಧತೆ ಮತ್ತು ಕಾರ್ಯತತ್ಪರತೆಯಿಂದ ಭಾರತವು 2014ರಲ್ಲಿ ಪೋಲಿಯೊ ಮುಕ್ತ ಎನಿಸಿಕೊಂಡಿತು. ಇಂತಹ ಯಶಸ್ವಿ ಅಭಿಯಾನಗಳು ಕೋವಿಡ್ ಲಸಿಕಾ ಅಭಿಯಾನಕ್ಕೆ ಮಾರ್ಗದರ್ಶನ ನೀಡಲಿವೆ’ ಎಂದರು.

‘ಸುಳ್ಳು ಸುದ್ದಿ ಹರಡುವಿಕೆ ಬಗ್ಗೆ 1994ರ ಪೋಲಿಯೊ ನಿರ್ಮೂಲನೆ ಅಭಿಯಾನದಲ್ಲಿ ನನಗೆ ಸಾಕಷ್ಟು ವೈಯಕ್ತಿಕ ಅನುಭವವಾಗಿದೆ. ಆಗ ವದಂತಿ ಹರಡುವವರಿಗಿಂತ ಹೆಚ್ಚಾಗಿ ಜನರು ಲಸಿಕೆ ವಿಜ್ಞಾನದ ಮೇಲೆ ನಂಬಿಕೆ ಇಟ್ಟಿದ್ದರಿಂದ ಕಾರ್ಯಕ್ರಮ ಯಶಸ್ವಿಯಾಗಿತ್ತು’ ಎಂದಿದ್ದಾರೆ.

ಲಸಿಕೆ ತಾಲೀಮು ವೀಕ್ಷಣೆ
ಸಚಿವ ಹರ್ಷವರ್ಧನ್ ಅವರು ದೆಹಲಿಯಲ್ಲಿ ಶನಿವಾರ ನಡೆದ ಕೋವಿಡ್ ಲಸಿಕೆ ತಾಲೀಮು ಪರಿಶೀಲಿಸಿದರು. ಜಿಟಿಬಿ ಆಸ್ಪತ್ರೆ ಮತ್ತು ದರಿಯಾಗಂಜ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು.

ಲಸಿಕೆ ತಾಲೀಮು ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದ ಸಚಿವರು, ವ್ಯಾಕ್ಸಿನೇಷನ್ ಪ್ರಕ್ರಿಯೆಯ ಸಂಪೂರ್ಣ ಸಿದ್ಧತೆ, ಸಿಬ್ಬಂದಿ ತರಬೇತಿ ವ್ಯವಸ್ಥಿತವಾಗಿ ನಡೆದಿದೆ ಎಂದು ಹೇಳಿದರು. ತಾಲೀಮು ಮುಗಿದ ಬಳಿಕ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪರಿಶೀಲನಾ ಸಭೆ ನಡೆಯಲಿವೆ. ಕಾರ್ಯಾಚರಣೆ ವೇಳೆ ಉಂಟಾದ ಸಮಸ್ಯೆಗಳು, ಸವಾಲುಗಳ ಬಗ್ಗೆ ಚರ್ಚಿಸಿ, ಅವುಗಳನ್ನು ನಿವಾರಿಸುವ ಮಾರ್ಗೋಪಾಯಗಳನ್ನು ಹುಡುಕಲಾಗುತ್ತದೆ’ ಎಂದರು.

ದೇಶದ ಬಹುತೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ತಾಲೀಮು (ಡ್ರೈ ರನ್) ನಡೆಯಿತು. ಲಸಿಕೆ ನೀಡಿಕೆ ಪ್ರಕ್ರಿಯೆಯು ಆರಂಭದಿಂದ ಅಂತ್ಯದವರೆಗೆ ಹೇಗೆ ನೈಜವಾಗಿ ಕೆಲಸ ಮಾಡಲಿದೆ ಎಂಬ ಬಗ್ಗೆ ಅಣಕು ಕಾರ್ಯಾಚರಣೆ ನಡೆಸಲಾಯಿತು. ಕೋವಿಡ್ ಲಸಿಕೆಯೊಂದನ್ನು ಹೊರತುಪಡಿಸಿ ಉಳಿದೆಲ್ಲ ಪ್ರಕ್ರಿಯೆಗಳು ನಡೆದವು. ಇದಕ್ಕಾಗಿ ಶ್ರಮಿಸಿದವರನ್ನು ಸಚಿವರು ಶ್ಲಾಘಿಸಿದರು.

*
‘ಬಿಜೆಪಿ ಲಸಿಕೆ’ಯನ್ನು ನಾನು ಹೇಗೆ ನಂಬಲಿ? ನಾನು ಲಸಿಕೆ ಹಾಕಿಸಿಕೊಳ್ಳುವುದಿಲ್ಲ. 2022ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಉಚಿತ ಲಸಿಕೆ ನೀಡುತ್ತೇವೆ.
-ಅಖಿಲೇಶ್ ಯಾದವ್, ಎಸ್‌ಪಿ ಮುಖ್ಯಸ್ಥ

*
ಉತ್ತರ ಪ್ರದೇಶದಲ್ಲಿ ಜ.5ರಂದು ಮತ್ತೊಂದು ಸುತ್ತಿನ ಲಸಿಕಾ ತಾಲೀಮು ನಡೆಯಲಿದ್ದು, ಸಂಕ್ರಾಂತಿ ಹೊತ್ತಿಗೆ ಲಸಿಕೆ ಹಾಕಲಾಗುವುದು
-ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT