ಶುಕ್ರವಾರ, ಫೆಬ್ರವರಿ 3, 2023
25 °C

ಭಾರತ– ಅಮೆರಿಕ ಜಂಟಿ ಸೇನಾ ತಾಲೀಮಿಗೆ ಚೀನಾ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌/ಕೊಚ್ಚಿ: ಭಾರತ– ಅಮೆರಿಕ ಸೇನಾ ಪಡೆಗಳು ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಸಮೀಪ ನಡೆಸುತ್ತಿರುವ ಜಂಟಿ ಸಮರಾಭ್ಯಾಸವನ್ನು ಚೀನಾ ಬುಧವಾರ ವಿರೋಧಿಸಿದೆ. ‘ಇದು ನವದೆಹಲಿ ಮತ್ತು ಬೀಜಿಂಗ್ ನಡುವೆ ಉಭಯ ರಾಷ್ಟ್ರಗಳ ಗಡಿ ಸಮಸ್ಯೆ ಸಂಬಂಧ ನಡೆದಿರುವ ಒಪ್ಪಂದಗಳ ಆಶಯವನ್ನು ಉಲ್ಲಂಘಿಸುತ್ತದೆ’ ಎಂದು ಚೀನಾ ಹೇಳಿದೆ.

ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಹೋ ಲಿಜಿಯಾನ್ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಎಲ್‌ಎಸಿ ಬಳಿ ನಡೆಯುತ್ತಿರುವ ಜಂಟಿ ಸೇನಾ ತಾಲೀಮು 1993 ಮತ್ತು 1996ರಲ್ಲಿ ಚೀನಾ– ಭಾರತದ ನಡುವೆ ಆಗಿರುವ ಒಪ್ಪಂದದ ಆಶಯಗಳನ್ನು ಉಲ್ಲಂಘಿಸುತ್ತದೆ’ ಎಂದು ತಿಳಿಸಿದರು.  

ಪಾಕಿಸ್ತಾನದ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದು ಚೀನಾ ಮತ್ತು ಭಾರತ ನಡುವಿನ ಪರಸ್ಪರ ನಂಬಿಕೆಯನ್ನು ಉಳಿಸುವುದಿಲ್ಲ’ ಎಂದರು.

ಭಾರತ– ಅಮೆರಿಕ ಜಂಟಿ ಸೇನಾ ತಾಲೀಮಿನ 18ನೇ ಆವೃತ್ತಿ ‘ಯುದ್ಧ್ ಅಭ್ಯಾಸ್‌’ ಉತ್ತರಾಖಂಡದಿಂದ ಸುಮಾರು 100 ಕಿ.ಮೀ ದೂರದಲ್ಲಿ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಬುಧವಾರ ಆರಂಭವಾಗಿದೆ. 

ಎರಡು ವಾರಗಳ ಅವಧಿಯ ಈ ತಾಲೀಮು, ಪರಸ್ಪರರ ಮಿಲಿಟರಿ ಉಪಕರಣಗಳು ಅಥವಾ ಪಡೆಗಳೊಂದಿಗೆ ಸಮನ್ವಯದಿಂದ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೆಚ್ಚಿಸುವ, ಕಾರ್ಯತಂತ್ರ ವಿನಿಯಮ ಮತ್ತು ಶಾಂತಿಪಾಲನೆ ಹಾಗೂ ಪ್ರಕೃತಿ ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ‌ಉಭಯ ಸೇನೆಗಳ ನಡುವೆ ಪರಿಣತಿ ಹಂಚಿಕೊಳ್ಳುವ ಗುರಿ ಹೊಂದಿದೆ.

ಎಲ್ಎಸಿಯ ಉದ್ದಕ್ಕೂ ಶಾಂತಿ ಮತ್ತು ನೆಮ್ಮದಿಯ ವಾತಾವರಣ ಸ್ಥಾಪಿಸಲು, ಚೀನಾ ಜತೆಗಿನ ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ವೃದ್ಧಿಗೂ ತಾನು ಬದ್ಧವಾಗಿರುವುದಾಗಿ ಭಾರತ ಸತತವಾಗಿ ಪ್ರತಿಪಾದಿಸುತ್ತಲೇ ಬಂದಿದೆ.

ದೇಶದ ಹಿತರಕ್ಷಿಸಲು ಬದ್ಧ: ಹಿಂದೂ ಮಹಾಸಾಗರ ಪ್ರದೇಶದ ಮೇಲೆ ಕಣ್ಗಾವಲು ಇಡುವ ಮೂಲಕ ಚೀನಾದ ಒಳನುಸುಳುವುದು ಸರಿಯಲ್ಲ. ಈ ಕಾರ್ಯತಂತ್ರದ ಪ್ರದೇಶದಲ್ಲಿ ದೇಶದ ಹಿತರಕ್ಷಿಸಲು ನಾವು ಬದ್ಧವಾಗಿದ್ದೇವೆ ಎಂದು ಭಾರತೀಯ ನೌಕಾಪಡೆ ಬುಧವಾರ ಹೇಳಿದೆ. 

ದಕ್ಷಿಣದ ನೌಕಾ ಕಮಾಂಡ್ (ಎಸ್‌ಎನ್‌ಸಿ) ಮುಖ್ಯಸ್ಥ, ವೈಸ್‌ ಅಡ್ಮಿರಲ್‌ ಎಂ.ಎ. ಹಂಪಿಹೋಲಿ ಅವರು, ಭಾರತೀಯ ನೌಕಾಪಡೆಯು ಈ ಪ್ರದೇಶದಲ್ಲಿ ಉಪಗ್ರಹಗಳು ಮತ್ತು ಸಾಗರ ನಿಗಾ ವಿಮಾನಗಳ ಮೂಲಕ ಕಣ್ಗಾವಲು ಇಡುತ್ತದೆ ಎಂದು ಹೇಳಿದರು. 

ಕಳೆದ ಕೆಲವು ತಿಂಗಳುಗಳಲ್ಲಿ ಚೀನಾದ ಪತ್ತೇದಾರಿ ಹಡಗು ಎರಡನೇ ಬಾರಿಗೆ ಹಿಂದೂ ಮಹಾಸಾಗರ ಪ್ರದೇಶಕ್ಕೆ ಪ್ರವೇಶಿಸಿದೆ ಎಂಬ ವರದಿಗಳ ಮಧ್ಯೆ ವೈಸ್‌ ಅಡ್ಮಿರಲ್‌ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

2035ಕ್ಕೆ ಚೀನಾ ಬಳಿ 1,500 ಅಣ್ವಸ್ತ್ರ

ಚೀನಾ ತನ್ನ ಅಣ್ವಸ್ತ್ರ ಶಸ್ತ್ರಾಗಾರವನ್ನು ವೇಗವಾಗಿ ವಿಸ್ತರಿಸುತ್ತಿದೆ. 2035ರ ವೇಳೆಗೆ ಅದು ಸುಮಾರು 1,500 ಸಿಡಿತಲೆಗಳನ್ನು ಹೊಂದುವ ಸಾಧ್ಯತೆಯಿದೆ. 2021ರಿಂದ ತನ್ನ ಅಣ್ವಸ್ತ್ರ ವಿಸ್ತರಣೆ ವೇಗಗೊಳಿಸಿದೆ ಎಂದು ಪೆಂಟಗನ್‌ ವರದಿ ಹೇಳಿದೆ.

ಚೀನಾದ ಮಹತ್ವಾಕಾಂಕ್ಷೆಯ ಸೇನಾ ನಿರ್ಮಾಣದ ಕುರಿತು ಅಮೆರಿಕ ಸಂಸತ್‌ಗೆ ಮಂಗಳವಾರ ಪೆಂಟಗನ್‌ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ‘ಮುಂದಿನ ದಶಕದಲ್ಲಿ ಚೀನಾ ತನ್ನ ಅಣ್ವಸ್ತ್ರ ಪಡೆಗಳನ್ನು ಆಧುನೀಕರಿಸಲು, ವೈವಿಧ್ಯಗೊಳಿಸಲು ಮತ್ತು ಇನ್ನಷ್ಟು ವಿಸ್ತರಿಸಲು ಉದ್ದೇಶಿಸಿದೆ’ ಎಂದು ತಿಳಿಸಿದೆ.

‘ಸದ್ಯ ಚೀನಾ ಬಳಿ ಕಾರ್ಯಾಚರಣೆಗೆ ಬಳಸಬಹುದಾದ 400ಕ್ಕೂ ಹೆಚ್ಚು ಅಣ್ವಸ್ತ್ರ ಸಿಡಿತಲೆಗಳಿರುವ ಅಂದಾಜಿದೆ. ಅಮೆರಿಕದ ಜಾಗತಿಕ ಪ್ರಾಬಲ್ಯವನ್ನು ಪ್ರಶ್ನಿಸಲು ಪ್ರಯತ್ನಿಸುತ್ತಿರುವ ಬೀಜಿಂಗ್ ಇದಕ್ಕಾಗಿ ತನ್ನ ಅಣ್ವಸ್ತ್ರಗಳ ಸಾಮರ್ಥ್ಯವನ್ನು ವೇಗದ ಗತಿಯಲ್ಲಿ ಹೆಚ್ಚಿಸಿಕೊಳ್ಳಲು ಗಮನಹರಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) 2035ರ ವೇಳೆಗೆ ತನ್ನ ರಾಷ್ಟ್ರೀಯ ರಕ್ಷಣಾ ಮತ್ತು ಸಶಸ್ತ್ರ ಪಡೆಗಳ ಆಧುನೀಕರಣ ಪೂರ್ಣಗೊಳಿಸಲು ಯೋಜಿಸಿದೆ’ ಎಂದು ವರದಿಯಲ್ಲಿ ವಿವರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು