ನವದೆಹಲಿ: ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ಕೂನೂರಿನ ಸಮೀಪ ಪತನಗೊಂಡಿದೆ. ಈ ವೇಳೆ ಹೆಲಿಕಾಪ್ಟರ್‌ನಲ್ಲಿದ್ದ ರಾವತ್ ಸೇರಿ 13 ಮಂದಿ ಸಾವಿಗೀಡಾಗಿದ್ದಾರೆ ಎಂದು ಭಾರತೀಯ ವಾಯುಪಡೆ ದೃಢಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ವಾಯುಪಡೆ, ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ ಇತರೆ 12 ಜನರು ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದೆ.
ಕೊಯಮತ್ತೂರು ಜಿಲ್ಲೆಯ ವೆಲಿಂಗ್ಟನ್‌ನಲ್ಲಿ ಉಪನ್ಯಾಸ ನೀಡಲು ಹೊರಟಿದ್ದ ರಾವತ್ ಹೊರಟಿದ್ದರು, ಈ ವೇಳೆ ಅವಘಡ ಸಂಭವಿಸಿದೆ.
ಗಾಯಗೊಂಡಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಎಸ್.ಸಿ ವೆಲ್ಲಿಂಗ್ಟನ್‌ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಲಿಕಾಪ್ಟರ್ ಪತನವಾಗಲು ನಿಖರ ಕಾರಣ ಈವರೆಗೂ ತಿಳಿದು ಬಂದಿಲ್ಲ. ಹೆಲಿಕಾಪ್ಟರ್ ಹಾರಾಟ ನಡೆಸಿದ್ದ ಮಾರ್ಗದಲ್ಲಿ ದಟ್ಟ ಮಂಜು ಆವರಿಸಿತ್ತು. ಹೀಗಾಗಿ ಸಂಚಾರ ಮಾರ್ಗದ ಗೋಚರತೆಯಲ್ಲಿ ಉಂಟಾಗಿರುವ ಅಸ್ಪಷ್ಟತೆಯಿಂದ ಅಪಘಾತ ಸಂಭವಿಸಿರಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಜನರಲ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್. ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯ್ಕ್ ಗುರ್ಸೇವಕ್ ಸಿಂಗ್, ನಾಯ್ಕ್ ಜಿತೇಂದರ್ ಕುಮಾರ್, ನಾಯ್ಕ್ ವಿವೇಕ್ ಕುಮಾರ್, ನಾಯ್ಕ್ ಬಿ ಸಾಯಿ ತೇಜ, ಹವಲ್ದಾರ್ ಸತ್ಪಾಲ್ ಮತ್ತು ಪೈಲಟ್‌ಗಳು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.