ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಗಾಂಗ್‌ ತ್ಸೊದಿಂದ ಹಿಂದೆ ಸರಿಯುವ ಚೀನಾ ಪ್ರಸ್ತಾವ ತಿರಸ್ಕರಿಸಿದ ಭಾರತೀಯ ಸೇನೆ

Last Updated 9 ಆಗಸ್ಟ್ 2020, 1:57 IST
ಅಕ್ಷರ ಗಾತ್ರ

ನವದೆಹಲಿ: ಲಡಾಖ್‌ನ ಪಾಂಗಾಂಗ್‌ ತ್ಸೊ ಸರೋವರದ ಉತ್ತರ ದಂಡೆಯ ‘ಫಿಂಗರ್ 4’ ಪ್ರದೇಶದಿಂದ ಹಿಂದೆ ಸರಿಯಲು ಭಾರತೀಯ ಸೇನೆ ನಿರಾಕರಿಸಿದೆ. ಈ ಪ್ರದೇಶದಿಂದ ಹಿಂತೆರಳಬೇಕು ಎಂಬುದು ಭಾರತದ ಭೂಪ್ರದೇಶದಿಂದ ಹಿಂದೆ ಸರಿಯಲು ಚೀನಾದ ‘ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ)’ ಒಡ್ಡಿರುವ ಷರತ್ತೂ ಆಗಿದೆ.

ಭಾರತೀಯ ಸೇನೆಯು ಗಾಲ್ವನ್ ಕಣಿವೆ ಪ್ರದೇಶದಿಂದ ಕಳೆದ ತಿಂಗಳು 1.5 ಕಿಲೋ ಮೀಟರ್‌ನಷ್ಟು ಹಿಂದೆ ಸರಿದಿತ್ತು. ಚೀನಾ ಸೇನೆಯೂ ಆ ಪ್ರದೇಶದಿಂದ ಹಿಂತೆರಳಿದೆ. ಜೂನ್ 15ರಂದು ಉಭಯ ಸೇನಾ ಪಡೆಗಳ ನಡುವೆ ನಡೆದ ಸಂಘರ್ಷದ ಬಳಿಕ ಈ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಪಾಂಗಾಂಗ್‌ ತ್ಸೊ ಸರೋವರದ ಬಳಿ ಇದೇ ಕ್ರಮಕ್ಕೆ ನಿರಾಕರಿಸಲಾಗಿದೆ.

ಆಗಸ್ಟ್ 2ರಂದು ನಡೆದಿದ್ದ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಪಾಂಗಾಂಗ್‌ ತ್ಸೊ ಪ್ರದೇಶದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ಪ್ರಸ್ತಾವವನ್ನು ಚೀನಾ ಮುಂದಿಟ್ಟಿತ್ತು. ಚೀನಾದ ಮೇಜರ್ ಜನರಲ್ ಲಿಯು ಲಿನ್ ಮತ್ತು ಭಾರತದ ಜನರಲ್ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ನಡುವೆ ಮಾತುಕತೆ ನಡೆದಿತ್ತು. ಈ ವಿಚಾರದ ಬಗ್ಗೆ ಹಿರಿಯ ಸೇನಾಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಗುಪ್ತಚರ ದಳದ ಅಧಿಕಾರಿಗಳ ನಡುವೆ ನವದೆಹಲಿಯಲ್ಲಿ ಆಗಸ್ಟ್ 4ರಂದು ನಡೆದ ಸಭೆಯಲ್ಲಿ ಪ್ರಸ್ತಾಪವಾಗಿತ್ತು.

ಚೀನಾ ಸೇನೆಯ ಪ್ರಸ್ತಾವವನ್ನು ತಿರಸ್ಕರಿಸಬೇಕು ಎಂದು ಆಗಸ್ಟ್ 4ರ ಸಭೆಯಲ್ಲಿ ಸೇನೆ ಸರ್ಕಾರಕ್ಕೆ ತಿಳಿಸಿತ್ತು. ಒಂದು ವೇಳೆ ಅಲ್ಲಿಂದ ಹಿಂದೆ ಸರಿಯಲು ಒಪ್ಪಿದ್ದೇ ಆದಲ್ಲಿ ನಿರ್ಣಾಯಕ ಪೋಸ್ಟ್‌ನಿಂದ ಹಿಂದೆ ಸರಿಯಬೇಕಾಗುತ್ತದೆ ಎಂಬ ಮಾಹಿತಿಯನ್ನೂ ಸರ್ಕಾರಕ್ಕೆ ನೀಡಿತ್ತು. 1962ರ ಭಾರತ–ಚೀನಾ ಯುದ್ಧದ ಹೀರೊ ಮೇಜರ್ ಧನ್ ಸಿಂಗ್ ಥಾಪಾ ಅವರ ಹೆಸರಿನ ‘ಫಿಂಗರ್ 3’ ಬಳಿಯ ಈ ಪೋಸ್ಟ್ ಚೀನಾ ಸೇನೆಯ ಪೋಸ್ಟ್‌ಗೆ ಹೊಂದಿಕೊಂಡಂತಿದೆ. ಭಾರತೀಯ ಸೇನೆ ಪಾಲಿಗೆ ವ್ಯೂಹಾತ್ಮಕ ಪೋಸ್ಟ್ ಸಹ ಆಗಿದೆ. ಅಲ್ಲಿಂದ ಭಾರತೀಯ ಸೇನೆ ಹಿಂದೆ ಸರಿದರೆ ಚೀನಾ ಸೇನೆ ‘ಫಿಂಗರ್ 5’ ಪ್ರದೇಶದಿಂದ ಹಿಂದೆ ಸರಿಯಬಹುದಷ್ಟೆ. ಆದರೂ ಭಾರತದ ಭೂಪ್ರದೇಶದ ಬಹುದೊಡ್ಡ ಭಾಗದ ಮೇಲಿನ ಚೀನಾ ಸೇನೆಯ ನಿಯಂತ್ರಣ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT