ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಎಸಿ ದಾಟಿ ಹೋಗಿಲ್ಲ, ಮೊದಲು ಗುಂಡು ಹಾರಿಸಿದ್ದು ಚೀನಾ: ಭಾರತೀಯ ಸೇನೆ

Last Updated 8 ಸೆಪ್ಟೆಂಬರ್ 2020, 7:14 IST
ಅಕ್ಷರ ಗಾತ್ರ

ನವದೆಹಲಿ: ‘ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಯಾವುದೇ ಹಂತದಲ್ಲಿಯೂ ಯಥಾಸ್ಥಿತಿ ಬದಲಾಯಿಸಲು ಯತ್ನಿಸಿಲ್ಲ. ಗುಂಡಿನ ದಾಳಿ ಸೇರಿದಂತೆ ಯಾವುದೇ ರೀತಿಯ ಆಕ್ರಮಣಕಾರಿ ವರ್ತನೆ ತೋರಿಲ್ಲ’ ಎಂದು ಭಾರತೀಯ ಸೇನೆ ಮಂಗಳವಾರ ಸ್ಪಷ್ಟಪಡಿಸಿದೆ.

ಗಡಿಯಲ್ಲಿ ಪರಿಸ್ಥಿತಿ ತಿಳಿಗೊಳಿಸುವ ವಿಚಾರಕ್ಕೆ ಭಾರತ ಬದ್ಧವಾಗಿದ್ದರೆ ಚೀನಾ ಸೇನೆಯು ಪ್ರಚೋದನಾಕಾರಿ ಚಟುವಟಿಕೆಗಳನ್ನು ಮುಂದುವರಿಸಿದೆ ಎಂದು ಸೇನೆಯ ಪ್ರಕಟಣೆ ತಿಳಿಸಿದೆ.

ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರದ ದಕ್ಷಿಣ ದಂಡೆ ಬಳಿ ಭಾರತ–ಚೀನಾ ಸೇನಾಪಡೆಗಳ ಮಧ್ಯೆ ಸೋಮವಾರ ರಾತ್ರಿ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿತ್ತು. ಭಾರತೀಯ ಸೇನೆ ನಡೆಸಿದ ‘ಎಚ್ಚರಿಕೆ ದಾಳಿ (ವಾರ್ನಿಂಗ್ ಶಾಟ್‌)’ಗೆ ಪ್ರತಿಯಾಗಿ ನಾವು ದಾಳಿ ನಡೆಸಬೇಕಾಯಿತು ಎಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಹೇಳಿತ್ತು. ಆದರೆ ಇದನ್ನು ಭಾರತೀಯ ಸೇನೆ ನಿರಾಕರಿಸಿದೆ.

ಸೋಮವಾರ ರಾತ್ರಿ ನಡೆದಿದ್ದೇನು?: ಸೋಮವಾರ ರಾತ್ರಿ ಚೀನಾ ಪಡೆಗಳು ಎಲ್‌ಎಸಿಯ ಮುಂಚೂಣಿ ನೆಲೆಗಳತ್ತ ಬರಲು ಯತ್ನಿಸಿದವು. ಭಾರತದ ಪಡೆಗಳು ಅದನ್ನು ತಡೆಯಲೆತ್ನಿಸಿದವು. ಆಗ ಭಾರತ ಪಡೆಗಳಲ್ಲಿ ಭೀತಿ ಮೂಡಿಸಲು ಚೀನಾ ಸೇನೆಯು ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿತ್ತು ಎಂದು ಸೇನೆಯ ಪ್ರಕಟಣೆ ತಿಳಿಸಿದೆ.

ಸೇನೆ, ರಾಜತಾಂತ್ರಿಕ ಮತ್ತು ರಾಜಕೀಯ ಮಟ್ಟದಲ್ಲಿ ಮಾತುಕತೆ ಪ್ರಗತಿಯಲ್ಲಿ ಇರುವಾಗ ಚೀನಾ ಸೇನೆಯು ಒಪ್ಪಂದಗಳನ್ನು ಉಲ್ಲಂಘಿಸಿ ಆಕ್ರಮಣಕಾರಿ ತಂತ್ರಗಳನ್ನು ಅನುಸರಿಸುತ್ತಿದೆ ಎಂದೂ ಭಾರತೀಯ ಸೇನೆ ಆರೋಪಿಸಿದೆ.

ಚೀನಾ ಸೇನೆಯ ಗಂಭೀರ ಪ್ರಚೋದನೆಯ ಹೊರತಾಗಿಯೂ ಭಾರತೀಯ ಪಡೆಗಳು ಸಂಯಮ ಮತ್ತು ಪ್ರಬುದ್ಧತೆಯಿಂದ ವರ್ತಿಸಿವೆ. ಶಾಂತಿ, ಸಂಯಮ ಕಾಪಾಡಲು ನಾವು ಬದ್ಧರಾಗಿದ್ದೇವೆ. ಹಾಗೆಯೇ ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವ ಕಾಪಾಡಲು ಯಾವುದೇ ಕ್ರಮ ಕೈಗೊಳ್ಳಲೂ ಸಿದ್ಧರಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT