ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈನಲ್ಲಿ ಭಾರತೀಯನನ್ನು ದೋಚಿದ ಮೂವರು ಪಾಕಿಸ್ತಾನಿಗಳು

Last Updated 23 ನವೆಂಬರ್ 2020, 11:00 IST
ಅಕ್ಷರ ಗಾತ್ರ

ದುಬೈ: ದುಬೈನಲ್ಲಿ ನೆಲೆಸಿರುವ ಭಾರತೀಯ ವ್ಯಕ್ತಿಯೊಬ್ಬರ ಮೇಲೆ ಮೂವರು ಮಾಸ್ಕ್‌ಧಾರಿ ಪಾಕಿಸ್ತಾನಿ ದರೋಡೆಕೋರರು ದಾಳಿ ನಡೆಸಿದ್ದು, ಅವರ ಬಳಿ ಇದ್ದ ಲ್ಯಾಪ್‌ಟಾಪ್‌, ಮೊಬೈಲ್‌ ಮತ್ತು ಹಣ ದೋಚಿದ್ದಾರೆ. ವ್ಯಕ್ತಿ ಮನೆಯಲ್ಲಿ ಮಲಗಿದ್ದ ವೇಳೆ ಈ ಘಟನೆ ನಡೆದಿದೆ.

ಆಗಸ್ಟ್‌ನಲ್ಲಿ ನಡೆದಿರುವ ಈ ಘಟನೆ ತಡವಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ದುಬೈ ನ್ಯಾಯಾಲಯದಲ್ಲಿ ಭಾನುವಾರ ವಿಚಾರಣೆ ವೇಳೆ ಮಾಹಿತಿ ನೀಡಿರುವ ಭಾರತೀಯ ವ್ಯಕ್ತಿ, 'ಆಗಸ್ಟ್‌ನಲ್ಲಿ ಬುರ್ ದುಬೈ ಪ್ರದೇಶದ ವಿಲ್ಲಾಕ್ಕೆ ನುಗ್ಗಿದ ಪಾಕಿಸ್ತಾನದ ಕಳ್ಳರು, ಸರಳಿನಿಂದ ಹಲ್ಲೆ ನಡೆಸಿದರು ಮತ್ತು ಹಲವು ವಸ್ತುಗಳನ್ನು ಕದ್ದಿದ್ದಾರೆ,' ಎಂದು ಹೇಳಿದ್ದಾರೆ. ಈ ಕುರಿತು ಗಲ್ಫ್ ನ್ಯೂಸ್ ಭಾನುವಾರ ವರದಿ ಮಾಡಿದೆ.

ದರೋಡೆಕೋರರು ತಮ್ಮ ಮುಖಕ್ಕೆ ಪ್ಲಾಸ್ಟಿಕ್‌ ಚೀಲ ಸುತ್ತಿದ್ದಾಗಿಯೂ, ಬಾಯಿಗೆ ಟೇಪ್‌ ಹಾಕಿದ್ದಾಗಿಯೂ ಭಾರತೀಯ ವ್ಯಕ್ತಿ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದಾರೆ.

'ದರೋಡೆಕೋರರು ಮೆಡಿಕಲ್‌ ಮಾಸ್ಕ್‌ಗಳನ್ನು ಧರಿಸಿದ್ದರು. ಅದರಲ್ಲಿ ಒಬ್ಬ ಮೊದಲಿಗೆ ನನ್ನನ್ನು ಹಿಡಿದುಕೊಂಡ. ನಂತರ ಇನ್ನಿಬ್ಬರು ದಾಳಿ ನಡೆಸಿದರು. ಅವರಿಂದ ಬಿಡಿಸಿಕೊಳ್ಳಲು ನಾನು ಪ್ರಯತ್ನಿಸಿದೆನಾದರೂ ಸಾಧ್ಯವಾಗಲಿಲ್ಲ. ಮೂವರ ಪೈಕಿ ಒಬ್ಬನ ಮಾಸ್ಕ್‌ ಅನ್ನು ನಾನು ಎಳೆದುಹಾಕಿದ್ದೆ. ನನ್ನ ಮುಖಕ್ಕೆ ಸುತ್ತಲಾಗಿದ್ದ ಪ್ಲಾಸ್ಟಿಕ್‌ ಚೀಲ, ಬಾಯಿಗೆ ಹಾಕಲಾಗಿದ್ದ ಟೇಪ್‌ ಅನ್ನು ನಾನು ಬಿಡಿಸಿಕೊಂಡು, ಬೇರೆ ಕೋಣೆಯಲ್ಲಿದ್ದ ಸ್ನೇಹಿತನ ಬಳಿಗೆ ಓಡಿ ಹೋಗಿದ್ದೆ. ನಂತರ ಇಬ್ಬರೂ ದರೋಡೆಕೋರರನ್ನು ಹಿಡಿಯಲು ಪ್ರಯತ್ನಿಸಿದೆವು. ಆದರೆ ಸಾಧ್ಯವಾಗಲಿಲ್ಲ,' ಎಂದು ವ್ಯಕ್ತಿ ಕೋರ್ಟ್‌ನಲ್ಲಿ ಹೇಳಿದ್ದಾರೆ.

ಮೂವರೂ ದುಷ್ಕರ್ಮಿಗಳು ಭಾರತೀಯ ವ್ಯಕ್ತಿಯ ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌, ಹಣ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ದೋಚಿದ್ದಾರೆ.

ಮೂವರ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಅವನನ್ನು ಭಾರತೀಯ ವ್ಯಕ್ತಿ ಗುರುತಿಸಿದ್ದಾರೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದಾರೆ. 25 ವರ್ಷದ ಪಾಕಿಸ್ತಾನ ಮೂಲದ ಆರೋಪಿ ವಿರುದ್ಧ ಹಲ್ಲೆ, ದರೋಡೆ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣದ ಮುಂದಿನ ವಿಚಾರರಣೆಯನ್ನು ಡಿ.9ಕ್ಕೆ ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT