ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮೋಸ್‌ ಸೂಪರ್‌ ಸಾನಿಕ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Last Updated 1 ಡಿಸೆಂಬರ್ 2020, 11:46 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ನೌಕಾಪಡೆ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ನೌಕಾ ಆವೃತ್ತಿಯ ಬ್ರಹ್ಮೋಸ್‌ ಸೂಪರ್‌ ಸಾನಿಕ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯು ಯಶಸ್ವಿಯಾಗಿದೆ.

ಬಂಗಾಳ ಕೊಲ್ಲಿಯಲ್ಲಿಮಂಗಳವಾರ ಕ್ಷಿಪಣಿಯನ್ನು ಪ್ರಾಯೋಗಿಕವಾಗಿ ಉಡಾವಣೆ ಮಾಡಲಾಗಿದೆ. ಭಾರತೀಯ ನೌಕಾಪಡೆ ಆರು ವಾರಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ಇದೇ ಮಾದರಿಯ ಪರೀಕ್ಷಾರ್ಥ ಉಡಾವಣೆ ನಡೆಸಿತ್ತು.

ಭಾರತ ಮತ್ತು ರಷ್ಯಾ ಜಂಟಿ ಸಹಭಾಗಿತ್ವದ ಉದ್ದಿಮೆಯಾಗಿರುವ ಬ್ರಹ್ಮೋಸ್‌ ಏರೊಸ್ಪೇಸ್‌ನಲ್ಲಿ ಸೂಪರ್‌ ಸಾನಿಕ್‌ ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ. ಈ ಕ್ಷಿಪಣಿಗಳನ್ನು ಜಲಾಂತರ್ಗಾಮಿ ನೌಕೆಗಳು, ಹಡಗು, ವಿಮಾನ ಹಾಗೂ ಭೂ ಮೇಲ್ಮೈಯಿಂದಲೂ ಉಡಾವಣೆ ಮಾಡಬಹುದಾಗಿದೆ.

ಭಾರತವು ಲಡಾಖ್‌ ಮತ್ತು ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಸೇರಿದಂತೆ ಇತರ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಈಗಾಗಲೇ ಬ್ರಹ್ಮೋಸ್‌ ಕ್ಷಿಪಣಿಗಳನ್ನು ನಿಯೋಜಿಸಿದೆ. ಈ ಕ್ಷಿಪಣಿಗಳು ಜಗತ್ತಿನ ಅತ್ಯಂತ ವೇಗದ ಸೂಪರ್‌ಸಾನಿಕ್‌ ಕ್ಷಿಪಣಿಗಳೆನಿಸಿವೆ.

ಭಾರತವು ಹಿಂದಿನ ಎರಡೂವರೆ ತಿಂಗಳಲ್ಲಿ ರುದ್ರಂ–1 ರಡಾರ್‌ ನಿಗ್ರಹ ಕ್ಷಿಪಣಿ ಸೇರಿದಂತೆ ಹಲವು ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆ ನಡೆಸಿದೆ. ರುದ್ರಂ–1, ಶತ್ರುಪಡೆಗಳ ರಡಾರ್‌ಗಳು ಹಾಗೂ ಕಣ್ಗಾವಲು ವ್ಯವಸ್ಥೆಯನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಶಬ್ದಕ್ಕಿಂತ ಎರಡು ಪಟ್ಟು ಹೆಚ್ಚು ವೇಗದಲ್ಲಿ ನುಗ್ಗುವ ಸಾಮರ್ಥ್ಯವೂ ಇದಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT