ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಸ್‌ನ ಭಾರತದ ತಳಿಗೆ ವೇಗ ಹೆಚ್ಚು: ತಜ್ಞರ ಅಭಿಮತ

ಹೆಚ್ಚು ಮಾರಕ ಎಂಬುದಕ್ಕೆ ಇಲ್ಲ ಪುರಾವೆ
Last Updated 27 ಏಪ್ರಿಲ್ 2021, 21:53 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ನ ಭಾರತದ ರೂಪಾಂತರ ತಳಿಯು ಬ್ರಿಟನ್‌ನ ರೂಪಾಂತರ ತಳಿಯಷ್ಟೇ ವೇಗದ ಪ್ರಸರಣ ಗುಣ ಹೊಂದಿದೆ. ಆದರೆ, ಇದು ಮೂಲ ವೈರಸ್‌ಗಿಂತ ಹೆಚ್ಚು ಮಾರಕ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಿ.1.617 ಅಥವಾ ಡಬಲ್ ಮ್ಯೂಟಂಟ್ ಅಥವಾ ಭಾರತ ರೂಪಾಂತರ ತಳಿ ಎಂದು ಕರೆಸಿಕೊಳ್ಳುವ ವೈರಸ್, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸಿದೆ. ಈ ರಾಜ್ಯಗಳು ಕೋವಿಡ್ ಎರಡನೇ ಅಲೆಯ ಹೊಡೆತಕ್ಕೆ ನಲುಗಿವೆ.

ಮಹಾರಾಷ್ಟ್ರದ ಶೇ 50ಕ್ಕೂ ಹೆಚ್ಚು ತಪಾಸಣಾ ಮಾದರಿಗಳಲ್ಲಿ ಬಿ.1.617 ತಳಿ ಪತ್ತೆಯಾಗಿದೆ. ಆದರೆ ಬ್ರಿಟನ್‌ ರೂಪಾಂತರ ತಳಿಯ ಇರುವಿಕೆ ಪ್ರಮಾಣ ಶೇ 28ರಷ್ಟಿದೆ ಎಂದು ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರದ ನಿರ್ದೇಶಕ ಸುಜೀತ್ ಸಿಂಗ್ ಅವರು ‘ಜೆನೋಮ್ ಸಿಕ್ವೆನ್ಸಿಂಗ್‌’ ಕುರಿತು ಇತ್ತೀಚೆಗೆ ನಡೆದ ವೆಬಿನಾರ್‌ನಲ್ಲಿ ಅಭಿಪ್ರಾಯಪಟ್ಟಿದ್ದರು.

ಕಳೆದ ಕೆಲವು ವಾರಗಳಿಂದ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಸ್ಫೋಟಗೊಂಡಿದ್ದು, ಆರೋಗ್ಯ ಕ್ಷೇತ್ರವನ್ನು ದುರ್ಬಲಗೊಳಿಸಿದೆ. ದೆಹಲಿಯ ಹಲವಾರು ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆ ಎದುರಿಸಿವೆ. ರೋಗಿಗಳ ಜೀವ ಉಳಿಸಲು ಸರ್ಕಾರ ಪರದಾಡುತ್ತಿದೆ.

‘ನಮಗೆ ತಿಳಿದಂತೆ, ಬ್ರಿಟನ್ ರೂಪಾಂತರ ತಳಿ ಅಥವಾ ಬಿ.1.617 ತಳಿಗಳು ತೀವ್ರ ಅನಾರೋಗ್ಯ ಅಥವಾ ಸಾವಿನ ತೀವ್ರತೆಗೆ ತಳ್ಳುವುದಿಲ್ಲ. ಬ್ರಿಟನ್ ತಳಿಯು ಹೆಚ್ಚಿನ ಪ್ರಸರಣ ಸಾಮರ್ಥ್ಯವನ್ನು ಹೊಂದಿದೆ ಎಂದು ಸಾಬೀತಾಗಿದೆ. ಬಿ.1.617 ತಳಿಯ ಪ್ರಸರಣ ಗುಣವೂ ಹೆಚ್ಚಿರಬಹುದು’ ಎಂದು ಇನ್‌ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ನಿರ್ದೇಶಕ ಅನುರಾಗ್ ಅಗರ್‌ವಾಲ್ ಅಭಿಪ್ರಾಯಪಟ್ಟಿದ್ದಾರೆ.

ಬಿ.1.617 ರೂಪಾಂತರವು ಹೆಚ್ಚು ಪ್ರಸರಣ ಸಾಮರ್ಥ್ಯವನ್ನು ಹೊಂದಿದೆ ಎಂದು ನಿಖರವಾಗಿ ಸಾಬೀತುಪಡಿಸುವ ಅಧ್ಯಯನಗಳು ಪೂರ್ಣಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷದಲ್ಲಿ ಕಾಣಿಸಿಕೊಂಡ ಮೊದಲ ಅಲೆಗೆ ಹೋಲಿಸಿದರೆ ರಾಜ್ಯದಲ್ಲಿ ಹೆಚ್ಚಿದ ಸಾವು ಉಂಟಾಗಿವೆ ಎಂಬ ಕುರಿತು ಮಾತನಾಡಿದ ಅವರು, ‘ಈ ರೂಪಾಂತರ ತಳಿಯು ಯಾವ ಪ್ರಮಾಣದಲ್ಲಿ ಹರಡುತ್ತದೆ ಎಂಬುದಕ್ಕೂ ಸಾವಿನ ಪ್ರಮಾಣಕ್ಕೂ ನೇರ ಸಂಬಂಧವಿದೆ.ಜನರು ಎಷ್ಟು ಹೆಚ್ಚು ಸೋಂಕಿಗೆ ಒಳಗಾಗುತ್ತಾರೋ, ಅಷ್ಟೇ ಹೆಚ್ಚು ಸಾವು ಸಂಭವಿಸುತ್ತವೆ’ ಎಂದು ಹೇಳಿದ್ದಾರೆ.

ಬಿ.1.617 ರೂಪಾಂತರ ತಳಿ ತಡೆಯುವಲ್ಲಿ ಕೋವಿಶೀಲ್ಡ್ ಲಸಿಕೆ ಪರಿಣಾಮಕಾರಿ ಎಂದು ಸೆಂಟರ್‌ ಫಾರ್ ಸೆಲ್ಯುಲರ್ ಅಂಡ್ ಮಾಲಿಕ್ಯುಲರ್ ಬಯೊಲಜಿ ತಿಳಿಸಿದೆ.

***

ಬಿ.1.617 ಮಾರಕ ಎಂಬುದಕ್ಕೆ ಪುರಾವೆಗಳಿಲ್ಲ. ಈ ರೂಪಾಂತರಗಳು ಲಸಿಕೆ ಅಸ್ತ್ರದಿಂದ ತಪ್ಪಿಸಿಕೊಳ್ಳುವುದಿಲ್ಲ. ಲಭ್ಯವಿರುವ ಲಸಿಕೆಗಳು ಪರಿಣಾಮಕಾರಿ.
-ಸೌಮಿತ್ರಾ ದಾಸ್, ಎನ್‌ಸಿಬಿಎಸ್‌ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT