ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ತಾಳೆಯಾಗದ ಕೇಂದ್ರ–ರಾಜ್ಯಗಳ ದತ್ತಾಂಶ; ಅಂಕಿ ಅಂಶ ಸಂದೇಹಾಸ್ಪದ

ಸಂಖ್ಯೆ ಹೊಂದಾಣಿಕೆ ಮಾಡುತ್ತಿರುವ ರಾಜ್ಯಗಳು
Last Updated 9 ನವೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಕೋವಿಡ್‌ ಪಿಡುಗು ದೇಶವನ್ನು ಪ್ರವೇಶಿಸಿ ಹತ್ತು ತಿಂಗಳಾಗಿದ್ದರೂ, ರೋಗವನ್ನು ಕುರಿತ ನಿಖರ ಮಾಹಿತಿಗಳು ಲಭ್ಯವಾಗದಿರುವುದು, ಈ ರೋಗದ ವಿರುದ್ಧ ದೇಶ ನಡೆಸುತ್ತಿರುವ ಹೋರಾಟದ ಬಗ್ಗೆ ಸಂದೇಹಗಳು ಏಳುವಂತೆ ಮಾಡಿದೆ.

ಮಾರ್ಚ್‌ ತಿಂಗಳಲ್ಲಿ ಕೋವಿಡ್‌ ಪರೀಕ್ಷೆಗೆ ದೇಶದಲ್ಲಿ ಒಂದೇ ಒಂದು ಪರೀಕ್ಷಾ ಕೇಂದ್ರವಿತ್ತು. ಈಗ ಅವುಗಳ ಸಂಖ್ಯೆ 2,074ಕ್ಕೆ ಏರಿದೆ. ಆದ್ದರಿಂದ ಪರೀಕ್ಷೆ ಪ್ರಮಾಣ ಏರಿಕೆಯಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳ ಅಂಕಿ ಅಂಶಗಳನ್ನು ತಾಳೆ ಮಾಡಿದರೆ ಕೇಂದ್ರ ಹಾಗೂ ರಾಜ್ಯಗಳು ನೀಡಿರುವ ಅಂಕಿಅಂಶಗಳಲ್ಲಿ ಸುಮಾರು 2 ಲಕ್ಷದಿಂದ 2.5 ಲಕ್ಷದಷ್ಟು ವ್ಯತ್ಯಾಸ ಕಂಡುಬರುತ್ತಿದೆ.

‘ಸೆಪ್ಟೆಂಬರ್‌ 14ರಂದು ದೇಶದಲ್ಲಿ 14,92,409 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ’ ಎಂದು ಐಸಿಎಂಆರ್‌ ಮಾಹಿತಿ ನೀಡಿತ್ತು. ಆದರೆ ವಿವಿಧ ರಾಜ್ಯಗಳ ಅಂಕಿ ಅಂಶ ತಾಳೆ ಮಾಡಿದಾಗ ಆ ಸಂಖ್ಯೆ 12,16,516ರಷ್ಟಿತ್ತು. ಸೆಪ್ಟೆಂಬರ್‌ 27ರ ಅಂಕಿ ಅಂಶದಲ್ಲಿ 1.13 ಲಕ್ಷದಷ್ಟು ಹಾಗೂ ಸೆ.30ರ ಅಂಕಿ ಅಂಶದಲ್ಲಿ 1.86 ಲಕ್ಷದಷ್ಟು ವ್ಯತ್ಯಾಸ ಕಂಡುಬಂದಿತ್ತು. ಅಕ್ಟೋಬರ್‌ ಆರಂಭದಲ್ಲಿ ಸುಮಾರು 48 ಸಾವಿರಕ್ಕೆ ಕುಸಿದ ವ್ಯತ್ಯಾಸವು, ನವೆಂಬರ್‌ 4ರಂದು 2.55 ಲಕ್ಷಕ್ಕೆ ಏರಿಕೆಯಾಗಿತ್ತು ಎಂಬ ಅಂಕಿ ಅಂಶಗಳನ್ನು ಕೋಲ್ಕತ್ತದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನ ವಿಜ್ಞಾನಿ ಅಯಾನ್‌ ಬ್ಯಾನರ್ಜಿ ನೀಡಿದ್ದಾರೆ.

‘ಪರೀಕ್ಷೆ ಎಂಬುದು ಒಂದು ಉದಾಹರಣೆ ಮಾತ್ರ. ಮಹಾರಾಷ್ಟ್ರ, ತಮಿಳುನಾಡು, ಉತ್ತರಾಖಂಡ ಮುಂತಾದ ಅನೇಕ ರಾಜ್ಯಗಳು ಸತ್ತವರ ಸಂಖ್ಯೆಯಲ್ಲೂ ಆಗಾಗ ಹೊಂದಾಣಿಕೆಗಳನ್ನು ಮಾಡುತ್ತಾ ಬಂದಿವೆ. ಇದರಿಂದಾಗಿ ಅಂಕಿ ಸಂಖ್ಯೆಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ’ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

‘ಹಿಂದಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೋವಿಡ್‌ನಿಂದಾಗಿ 463 ಮಂದಿ ಸತ್ತಿದ್ದಾರೆ’ ಎಂದು ಅ.18ರಂದು ಮಹಾರಾಷ್ಟ್ರ ಸರ್ಕಾರ ಹೇಳಿತ್ತು. ಅದರ ಹಿಂದಿನ ಕೆಲವು ದಿನ ಅಲ್ಲಿ ಸರಾಸರಿ ಸಾವಿನ ಸಂಖ್ಯೆ 100ರ ಆಸುಪಾಸಿನಲ್ಲೇ ಇತ್ತು. ಅದೇ ದಿನ ಉತ್ತರಾಖಂಡದಲ್ಲಿ 95 ಸಾವುಗಳು ಸಂಭವಿಸಿದ್ದವು ಎಂದು ದಾಖಲೆಗಳು ಹೇಳಿವೆ. ವಾಸ್ತವದಲ್ಲಿ ಇವೆರಡೂ ಹೊಂದಾಣಿಕೆ ಮಾಡಲಾದ ಸಂಖ್ಯೆಗಳಾಗಿದ್ದವು’ ಎಂದು ಮೂಲಗಳು ಹೇಳಿವೆ.

ನವೆಂಬರ್‌ 5ರಂದು ಪುನಃ ಮಹಾರಾಷ್ಟ್ರವು 300 ಸಾವಿನ ಪ್ರಕರಣಗಳನ್ನು ವರದಿ ಮಾಡಿತ್ತು. ಆದರೆ ಅವುಗಳಲ್ಲಿ ಹಿಂದಿನ 24 ಗಂಟೆಗಳಲ್ಲಿ ದಾಖಲಾದ ಸಾವುಗಳ ಸಂಖ್ಯೆ 112 ಮಾತ್ರ ಇತ್ತು. ಉಳಿದ 188 ಪ್ರಕರಣಗಳು ಹಿಂದಿನ ಒಂದು ವಾರದ ಅವಧಿಯಲ್ಲಿ ಪುಣೆಯಲ್ಲಿ ದಾಖಲಾದವುಗಳಾಗಿದ್ದವು.

ಅಕ್ಟೋಬರ್‌ ಕೊನೆಯ ವಾರದಲ್ಲಿ ಪ್ರತಿದಿನ ಸರಾಸರಿ 4,000ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳನ್ನು ದಾಖಲಿಸುತ್ತಿದ್ದ ಪಶ್ಚಿಮ ಬಂಗಾಳ, ಮುಂದಿನ 13 ದಿನಗಳ ಕಾಲ 3,900 ಪ್ರಕರಣಗಳನ್ನು ದಾಖಲಿಸುತ್ತಾ ಬಂತು. ದುರ್ಗಾ ಪೂಜೆಯ ಸಂದರ್ಭದಲ್ಲಿ ಜನರ ಓಡಾಟ ಹೆಚ್ಚಾಗಿದ್ದರೂ, ಪ್ರಕರಣಗಳ ಸಂಖ್ಯೆ ಕಡಿಮೆ ದಾಖಲಾಗಿದೆ.

ಬಿಹಾರದ ಅಂಕಿಅಂಶಗಳು ಸಹ ಸಂದೇಹ ಮೂಡಿಸುವಂತಿವೆ. ಈ ರಾಜ್ಯವೊಂದರಲ್ಲೇ ಒಂದು ಕೋಟಿಗೂ ಹೆಚ್ಚು ಕೋವಿಡ್‌ ಪರೀಕ್ಷೆಗಳು ನಡೆದಿವೆ (ದೇಶದ ಒಟ್ಟಾರೆ ಪರೀಕ್ಷೆಗಳಲ್ಲಿ ಶೇ10ರಷ್ಟು). ಆದರೆ ಸುಮಾರು ಎರಡು ತಿಂಗಳಿಗೂ ಅಧಿಕ ಕಾಲ, ಕೋವಿಡ್‌ ಪಾಸಿಟಿವ್‌ ಆದವರ ಸಂಖ್ಯೆ ಶೇ 5ಕ್ಕೂ ಕಡಿಮೆ ಇತ್ತು. ಆಗಸ್ಟ್‌ ತಿಂಗಳಲ್ಲಿ ಅಲ್ಲಿ ಕೋವಿಡ್‌ ತೀವ್ರವಾಗಿದ್ದರೂ, ಅನಂತರ ಅಚ್ಚರಿ ಎಂಬಂತೆ 38 ಜಿಲ್ಲೆಗಳಲ್ಲೂ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಸಾಕ್ಷ್ಯಗಳ ಆಧಾರದಲ್ಲೇ ನೀತಿಗಳನ್ನು ರೂಪಿಸಲಾಗುತ್ತದೆ. ಆದರೆ ಭಾರತದಲ್ಲಿ ಸಾಕ್ಷ್ಯ ಹಾಗೂ ನೀತಿಗಳಲ್ಲಿ ಭಾರಿ ಅಂತರ ಕಾಣಿಸುತ್ತಿದೆ ಎಂದು ಅನೇಕ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT