ಗುರುವಾರ , ಜೂನ್ 30, 2022
21 °C

ಬಡವರಿಗೆ ಉದ್ಯೋಗ ಕೊಡಿ: ಮಾನವ ಹಕ್ಕುಗಳ ಆಯೋಗದ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌ ಎರಡನೇ ಅಲೆಯ ಕಾರಣಕ್ಕೆ ಹೇರಿದ್ದ ಲಾಕ್‌ಡೌನ್‌ನಿಂದಾಗಿ ಅನೌಪಚಾರಿಕ ಮತ್ತು ಅಸಂಘಟಿತ ವಲಯದಲ್ಲಿ ಭಾರಿ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದೆ. ಸಂಕಷ್ಟದಲ್ಲಿರುವವರಿಗೆ ನೆರವಾಗಲು ‘ನಗರ ಉದ್ಯೋಗ ಯೋಜನೆ’ಯನ್ನು ಆರಂಭಿಸಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ದಿನಗಳು ಹಾಗೂ ವೇತನವನ್ನು ಹೆಚ್ಚಿಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

ಅಸಂಘಟಿತ ವಲಯದ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಆಯೋಗವು ಕೆಲವು ಸಲಹೆಗಳನ್ನು ನೀಡಿದೆ.

ಕೆಲವು ಬಡಾವಣೆ ಅಥವಾ ವಸತಿ ಸಂಕೀರ್ಣಗಳಲ್ಲಿ ಮನೆಗೆಲಸದವರ ಪ್ರವೇಶಕ್ಕೆ, ನಿವಾಸಿಗಳ ಅಭಿವೃದ್ಧಿ ಸಂಘ
ಗಳು ನಿರ್ಬಂಧ ವಿಧಿಸಿವೆ. ಇದನ್ನು ತೆರವು ಮಾಡಿಸಬೇಕು. ಈ ಕುರಿತ ತೀರ್ಮಾನ ಕೈಗೊಳ್ಳುವ ಸ್ವಾತಂತ್ರ್ಯವನ್ನು ಮನೆಯ ಮಾಲೀಕರು ಮತ್ತು ಕೆಲಸದವರಿಗೆ ನೀಡಬೇಕು. ಪಿಡುಗಿನ ಹೆಸರಿನಲ್ಲಿ ನೌಕರರ ವೇತನ ಕಡಿತ ಮಾಡುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಮನೆಗೆಲಸದವರನ್ನು ಸೋಂಕಿನ ವಾಹಕರೆಂದು ಪರಿಗಣಿ
ಸುವ ನಿವಾಸಿ ಸಂಘಗಳು ಅವರ ಓಡಾಟಕ್ಕೆ ನಿಷೇಧ ಹೇರುತ್ತಿವೆ. ಇದರಿಂದ ಇಂಥವರ ಜೀವನ ಕಷ್ಟವಾಗಿದೆ. ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯನ್ನು ಮನೆಗೆಲಸದವರಿಗೂ ವಿಸ್ತರಿಸಬೇಕು ಎಂದು ಸೂಚಿಸಿದೆ.

ಕೋವಿಡ್‌ ಪಿಡುಗು ಮಹಿಳೆಯರನ್ನು ಆರ್ಥಿಕವಾಗಿ ದುರ್ಬಲಗೊಳಿಸಿದೆ. ಅವರಿಗೆ ವೇತನರಹಿತ ಆರೈಕೆಯ ಕೆಲಸವೇ ಹೆಚ್ಚಾಗಿದೆ. ಇಂಥವರ ಹೊರೆಯನ್ನು ಇಳಿಸಲು ರಾಷ್ಟ್ರಮಟ್ಟದಲ್ಲಿ ‘ಕೆಲಸದ ಹಂಚಿಕೆ ಅಭಿಯಾನ’ವನ್ನು ಆರಂಭಿಸಬೇಕು. ಉದ್ಯೋಗ ಖಾತ್ರಿ ಯೋಜನೆಯ ವೇತನವನ್ನು ಹಣದುಬ್ಬರಕ್ಕೆ ಅನುಗುಣವಾಗಿ ಹೆಚ್ಚಿಸಬೇಕು. ಮುಂದಿನ ಮಾರ್ಚ್‌ 31ರವರೆಗೆ ಜಾರಿಯಲ್ಲಿರುವಂತೆ ಕೆಲಸದ ದಿನಗಳನ್ನು ಕನಿಷ್ಠ 200 ದಿನಗಳಿಗೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದೆ.

ಸ್ಮಶಾನದಲ್ಲಿ ಕೆಲಸ ಮಾಡುವವರು ಕೋವಿಡ್‌ನಿಂದ ಸತ್ತಿರುವವರ ಶರೀರದಜತೆಗೆ ನೇರ ಸಂಪರ್ಕಕ್ಕೆ ಬರುತ್ತಾರೆ. ಅಂಥವರನ್ನು ಕೋವಿಡ್‌ ಮುಂಚೂಣಿಯ ಕಾರ್ಯಕರ್ತರು ಎಂದು ಪರಿಗಣಿಸಿ, ಅವರಿಗೂ ಆರೋಗ್ಯ ವಿಮೆ, ಇತರ ಸೌಲಭ್ಯಗಳನ್ನು ನೀಡಬೇಕು ಎಂದಿದೆ. 

23 ಕೋಟಿ ಮಂದಿ ಬಡತನಕ್ಕೆ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಸಿದ್ಧಪಡಿಸಿರುವ ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2021: ವನ್‌ ಇಯರ್‌ ಆಫ್‌ ಕೋವಿಡ್ -19’ ವರದಿಯನ್ನು ಆಯೋಗವು ಉಲ್ಲೇಖಿಸಿದೆ. ‘ಭಾರತದಲ್ಲಿ ಸುಮಾರು 50 ಕೋಟಿ ಜನರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಸುಮಾರು 23 ಕೋಟಿ ಮಂದಿ ಕಳೆದ ಒಂದು ವರ್ಷದಲ್ಲಿ ಬಡತನಕ್ಕೆ ಇಳಿದಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಗಿದೆ. ದೇಶದಲ್ಲಿ ನಿರುದ್ಯೋಗ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ, ಜತೆಗೆ ವೇತನ ಕಡಿತವೂ ಈ ಕ್ಷೇತ್ರಗಳನ್ನು ಕಾಡಿದೆ ಎಂದು ಇತರ ಅನೇಕ ವರದಿಗಳು ಹೇಳಿರುವುದನ್ನೂ ಆಯೋಗ ಉಲ್ಲೇಖಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು